ಕಾಂಗ್ರೆಸ್ ಸರ್ಕಾರ ಬಡವರನ್ನು ಮರೆತಿದೆ: ಮುಖ್ಯಮಂತ್ರಿ ಚಂದ್ರು

123

Get real time updates directly on you device, subscribe now.


ತುಮಕೂರು: ರಾಜ್ಯದಲ್ಲಿ ಅಧಿಕಾರದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಸರಕಾರ ಬಡ ಜನರ ಹಿತ ಕಾಯುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಗ್ಯಾರಂಟಿ ಗೊಂದಲದಲ್ಲಿ ಅಭಿವೃದ್ಧಿಗೆ ಹಣ ಮೀಸಲಿಡದೆ ಜನತೆಗೆ ದ್ರೋಹ ಬಗೆದಿದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದ ಕಾರ್ಯಕ್ರಮಗಳನ್ನು ಕಾಪಿ ಮಾಡಿ, ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಎಡವಿದ ಪರಿಣಾಮ ಇನ್ನಿತರ ಕಾರ್ಯಕ್ರಮಗಳಿಗೆ ಹಣವಿಲ್ಲದಂತಾಗಿದೆ. ಸ್ವತಹ ಡಿಕೆಶಿ ಅವರೇ ಈ ವಿಚಾರವನ್ನು ಒಪ್ಪಿಕೊಂಡಿರುವುದು ಸರಕಾರ ಸರಿದಾರಿಯಲ್ಲಿ ಇಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.

ಈ ಹಿಂದೆ ರಾಜ್ಯದಲ್ಲಿ ಇದ್ದ ಸರಕಾರ ಭ್ರಷ್ಟಾಚಾರ ಸರಕಾರವಾದರೆ, ಹಾಲಿ ಇರುವ ಸರಕಾರ ಲಂಚಾವಾತಾರ ಸರಕಾರ ವಾಗಿದೆ. ಆಳಂದ ಶಾಸಕರಾದ ಬಿ.ಆರ್.ಪಾಟೀಲ್ ಮತ್ತು ಇತರೆ 33 ಜನ ಶಾಸಕರು ಬರೆದಿರುವ ಪತ್ರವೇ ಇದಕ್ಕೆ ಸಾಕ್ಷಿಯಾಗಿದೆ. ಬಾಣಲೆಯಿಂದ ಬೆಂಕಿಗೆ ಹಾರಿದಂತಾಗಿದೆ, ರಾಜ್ಯದ ಜನತೆಯ ಸ್ಥಿತಿ ಎಂದ ಮುಖ್ಯಮಂತ್ರಿ ಚಂದ್ರು, ಜನರ ವಿಶ್ವಾಸ ಕಳೆದು ಕೊಳ್ಳುವ ಮುನ್ನ ಎಚ್ಚೆತ್ತುಕೊಂಡರೆ ಮಾತ್ರ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲವಿದೆ, ಇಲ್ಲವೆಂದರೆ ರಾಜ್ಯದಿಂದಲೂ ಜನತೆ ಕಾಂಗ್ರೆಸ್ ಪಕ್ಷಕ್ಕೆ ಟಿಕೆಟ್ ನೀಡಲಿದ್ದಾರೆ ಎಂದು ಎಚ್ಚರಿಸಿದರು.

ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷರಾಗಿದ್ದ ಪೃಥ್ವಿರೆಡ್ಡಿ ಅವರನ್ನು ಸಂಘಟನೆಯ ದೃಷ್ಟಿಯಿಂದ ರಾಷ್ಟ್ರೀಯ ಮಟ್ಟಕ್ಕೆ ಕರೆಯಿಸಿಕೊಂಡ ಕಾರಣ ಖಾಲಿ ಇದ್ದ ರಾಜ್ಯಾಧ್ಯಕ್ಷ ಸ್ಥಾನವನ್ನು ನನಗೆ ನೀಡಿದ್ದಾರೆ. ರಾಜ್ಯಾಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಹೆಚ್.ಡಿ.ದೇವೇಗೌಡರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಾಯಿತು. ಹಾಗೆಯೇ ದೆಹಲಿ ಸರಕಾರ ಮೇಲಿನ ಹಿಡಿತ ಸಾಧಿಸಲು ಸುಗ್ರೀವಾಜ್ಞೆ ತರಲು ಹೊರಟಿರುವ ಕೇಂದ್ರ ನಡೆಯ ವಿರುದ್ಧ ರಾಜ್ಯ ಸಭೆಯಲ್ಲಿ ಮತ ಚಲಾಯಿಸುವಂತೆ ಸಹ ಮನವಿ ಮಾಡಿದ್ದು, ಇದಕ್ಕೆ ದೇವೇಗೌಡರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿ ಚಂದ್ರು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಸರ್ವಾಧಿಕಾರಿ ಧೋರಣೆಯ ಜೊತೆಗೆ, ಒಂದೇ ಧರ್ಮ, ಒಂದೇ ಸಂಸ್ಕೃತಿ, ಏಕಮೇವ ಚಕ್ರಾಧಿಪತ್ಯದ ಕನಸು ಕಾಣುತ್ತಿರುವ ಎನ್ ಡಿಎ ವಿರುದ್ಧ 2024ರ ಲೋಕಸಭಾ ಚುನಾವಣೆಯಲ್ಲಿ ಹೋರಾಡಬೇಕು ಎಂಬ ಉದ್ದೇಶದಿಂದ ಮಹಾ ಘಟಬಂಧನ್ ರಚಿಸಲಾಗಿದೆ. ಆದರೆ ಈ ವ್ಯವಸ್ಥೆ ರಾಜ್ಯದಲ್ಲಿ ನಡೆಯುವ ಜಿಪಂ, ತಾಪಂ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇಲ್ಲ. ಸೋಲು, ಗೆಲುವನ್ನು ಪಕ್ಕಕ್ಕಿಟ್ಟು ಸ್ವಾತಂತ್ರವಾಗಿ ಎಎಪಿ ಸ್ಪರ್ಧಿಸಲಿದೆ. ಈ ಸಂಬಂಧ ಆಗಸ್ಟ್ ಅಂತ್ಯದಿಂದ ರಾಜ್ಯ ಪ್ರವಾಸ ಕೈಗೊಂಡು ಸದಸ್ಯತ್ವ ಅಭಿಯಾನ ಮತ್ತು ಸಂಘಟನೆಗೆ ಒತ್ತು ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಮತ್ತು ಬಿಜೆಪಿಗೆ ಯಾವುದೇ ವ್ಯತ್ಯಾಸವಿಲ್ಲ. ಕಳೆದ 9 ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ 155 ಲಕ್ಷ ಕೋಟಿ ಸಾಲ ಮಾಡಿ, ದಿನಕ್ಕೆ 9 ಲಕ್ಷ ಕೋಟಿ ಬಡ್ಡಿ ಕಟ್ಟುತಿದ್ದರೆ, ರಾಜ್ಯ ಸರಕಾರ 55 ಸಾವಿರ ಕೋಟಿ ಸಾಲ ಮಾಡಿ ತಿಂಗಳಿಗೆ 35 ಸಾವಿರ ಕೋಟಿ ಬಡ್ಡಿ ಕಟ್ಟುತ್ತಿದೆ. ಒಂದು ರೀತಿಯಲ್ಲಿ ರಾಜ್ಯದ ತೆರಿಗೆ ಹಣ ಸಾಲದ ಬಡ್ಡಿಗೆ ಹೋಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಎಎಪಿ ಕಾರ್ಯದರ್ಶಿ ಬಿ.ಟಿ.ನಾಗಣ್ಣ, ಮಹಿಳಾ ಘಟಕದ ಅಧ್ಯಕ್ಷ ಕುಶಾಲಸ್ವಾಮಿ, ಜಿಲ್ಲಾಧ್ಯಕ್ಷ ಪ್ರೇಮಕುಮಾರ್, ಮುಖಂಡರಾದ ಮಧುಸೂಧನ್, ರುಕ್ಸಾನಾ ಭಾನು, ಜಯರಾಮಯ್ಯ, ಗೌಸ್ ಪೀರ್, ರಾಮಾಂಜನಪ್ಪ, ಗೋರಮಾರದಹಳ್ಳಿ ಮಂಜುನಾಥ್ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!