ತುಮಕೂರು: ಒಳ್ಳೆಯ ಉದ್ದೇಶ, ಸತ್ಯಸಂಧತೆ ಮತ್ತು ಅನಂತ ಪ್ರೇಮ, ಇವು ಜಗತ್ತನ್ನೇ ಗೆಲ್ಲ ಬಲ್ಲವು, ಈ ಸದ್ಗುಣಗಳನ್ನು ಹೊಂದಿರುವ ವ್ಯಕ್ತಿಗಳು ಹೊಸ ನಾಡನ್ನು ಕಟ್ಟಬಹುದು ಎಂದು ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿಜಪಾನಂದಜೀ ಮಹಾರಾಜ್ ಜೀ ಹೇಳಿದರು.
ತುಮಕೂರು ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕ, ವಿವಿ ವಿಜ್ಞಾನ ಕಾಲೇಜು ಮತ್ತು ವಿವಿ ಕಲಾ ಕಾಲೇಜಿನ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರೇರಣಾ ವಿಶೇಷೋಪನ್ಯಾಸ ಮಾಲೆ ಕಾರ್ಯಕ್ರಮ ಉದ್ಘಾಟಿಸಿ ವಿವೇಕಾನಂದರ ಶೈಕ್ಷಣಿಕ ಚಿಂತನೆ ಮತ್ತು ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅದರ ಮಹತ್ವ ಕುರಿತ ಪ್ರೇರಣಾತ್ಮಕ ಉಪನ್ಯಾಸ ನೀಡಿದರು.
ತ್ಯಾಗ- ಸೇವೆಗಳೇ ನಮ್ಮ ಉಸಿರಾಗಲಿ, ಸದೃಢರಾಗಿ ನಕಾರಾತ್ಮಕ ಚಿಂತನೆಗಳನ್ನು ದೂರ ಬಿಸಾಡಿ, ಇದೇ ನಮ್ಮ ನವಯುಗದ ಚಿಹ್ನೆಯಾಗಿರಲಿ, ಭವ್ಯ ಭಾರತ ಕಟ್ಟೋಣ, ಒಳ್ಳೆಯ ಶೀಲವಂತರಾದ, ಬುದ್ಧಿವಂತರಾದ, ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡುವಂತಹ, ವಿಧೇಯರಾಗಿರುವ, ಭಾವನೆಗಳನ್ನು ಕಾರ್ಯರೂಪಕ್ಕೆ ತರಲು ತಮ್ಮ ಪ್ರಾಣವನ್ನೇ ಅರ್ಪಿಸಬಲ್ಲ ಯುವಕರ ಮೇಲೆ ಭಾರತದ ಭವಿಷ್ಯದ ಹಾರೈಕೆಯಲ್ಲಾ ನಿಂತಿದೆ ಎಂದು ವಿವೇಕಾನಂದರು ನಂಬಿದ್ದರು ಎಂದು ತಿಳಿಸಿದರು.
ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಹಸಿದ ಹೊಟ್ಟೆಗೆ ಅನ್ನ, ಜ್ಞಾನ, ಆರೋಗ್ಯ ನೀಡಿದಾಗ ವ್ಯಕ್ತಿಯ ವ್ಯಕ್ತಿತ್ವ ಬೆಳೆಯುತ್ತದೆ. ಇವೆಲ್ಲವನ್ನೂ ನಮ್ಮ ವಿವಿಯು ವಿದ್ಯಾರ್ಥಿಗಳಿಗೆ ನೀಡುತ್ತಾ ಬಂದಿದೆ. ವಿದ್ಯಾರ್ಥಿ ಜೀವನದಲ್ಲೇ ಇವೆಲ್ಲವನ್ನು ಒದಗಿಸಿದರೆ ಅವರ ನಾಳಿನ ಭವಿಷ್ಯವು ಉಜ್ಜಲವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಿವಿ ಕುಲಸಚಿವೆ ನಾಹಿದಾ ಜಮ್ ಜಮ್, ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಕರಿಯಣ್ಣ.ಬಿ, ವಿವಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಕಾಶ್ ಎಂ.ಶೇಠ್, ವಿವಿಯ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಎ.ಎಂ.ಮಂಜುನಾಥ್ ಭಾಗವಹಿಸಿದ್ದರು.
Comments are closed.