ಸುಳ್ಳು ಸುದ್ದಿಗಳು ಸಮಾಜಕ್ಕೆ ಬಹಳ ಅಪಾಯಕಾರಿ

ಸುಳ್ಳು ಸುದ್ದಿ ನಿಯಂತ್ರಿಸಲು ಸದ್ಯದಲ್ಲೇ ಹೊಸ ಕಾನೂನು: ಡಾ.ಪರಮೇಶ್ವರ್

114

Get real time updates directly on you device, subscribe now.


ತುಮಕೂರು: ಸುಳ್ಳು ಸುದ್ದಿಗಳು ಸಮಾಜಕ್ಕೆ ಬಹಳ ಅಪಾಯಕಾರಿ, ಹಾಗಾಗಿ ಸುಳ್ಳು ಸುದ್ದಿಗಳನ್ನು ನಿಯಂತ್ರಿಸಲು ಸದ್ಯದಲ್ಲೇ ಹೊಸ ಕಾನೂನು ಜಾರಿಗೆ ತರುವ ಸಂಬಂಧ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸುಳ್ಳು ಸುದ್ದಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗುತ್ತಿದೆ. ಸದ್ಯದಲ್ಲೇ ಫೇಕ್ ನ್ಯೂಸ್ ಗಳ ನಿಯಂತ್ರಣಕ್ಕೆ ಕಾನೂನು ತರುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಹೇಳಿದರು.

ಪ್ರಸ್ತುತ ದಿನಗಳಲ್ಲಿ ರಾಜಕೀಯ ವ್ಯಕ್ತಿಗಳು, ಸರ್ಕಾರದ ಬಗ್ಗೆ, ಅಧಿಕಾರಿಗಳ ಕುರಿತು ಸುಳ್ಳು ಸುದ್ದಿಗಳು ಪ್ರಕಟವಾಗುತ್ತಲೇ ಇವೆ, ಇದರಿಂದ ಆಗುವ ಅನಾಹುತವನ್ನು ಯಾರೂ ಊಹೆ ಮಾಡಿರುವುದಿಲ್ಲ ಎಂದರು.
ರಾಜಕೀಯದಲ್ಲಿ ಟೀಕೆ, ಟಿಪ್ಪಣಿ ಸರ್ವೆ ಸಾಮಾನ್ಯ, ಪತ್ರಿಕೆಗಳಲ್ಲಿ ಬರುವ ಟೀಕೆಗಳು ರಾಜಕಾರಣಿಗಳು ಮಾಡುವ ತಪ್ಪನ್ನು ಎಚ್ಚರಿಸುವಂತಿರಬೇಕು, ಆದರೆ ಆ ಟೀಕೆ ಸುಳ್ಳಾಗಬಾರದು, ಹೀಗಿದ್ದಾಗ ಮಾತ್ರ ಸಮಾಜಮುಖಿ ಪತ್ರಿಕೋದ್ಯಮ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪತ್ರಕರ್ತರು ಕಾರ್ಯೋನ್ಮುರಾಗಬೇಕು ಎಂದು ಸಲಹೆ ನೀಡಿದರು.

ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ 4ನೇ ಅಂಗವಾಗಿರುವ ಪತ್ರಿಕೋದ್ಯಮಕ್ಕೆ ರಾಜಕಾರಣಿಗಳಿಗಿಂತಲೂ ಮಿಗಿಲಾದ ಜವಾಬ್ದಾರಿ ಇದೆ. ಪತ್ರಿಕೋದ್ಯಮ ಕೇವಲ ಒಂದು ವೃತ್ತಿಯಲ್ಲ, ಇದು ಸಮಾಜದ ದೊಡ್ಡ ಜವಾಬ್ದಾರಿ ಕೆಲಸ ಎಂದರು.

ಮಾಧ್ಯಮ ಕ್ಷೇತ್ರ ಎಲ್ಲದಕ್ಕಿಂತ ಹೆಚ್ಚು ಶಕ್ತಿಶಾಲಿ, ಬಂದೂಕಗಿಂತಲೂ ಪೆನ್ನು ಹೆಚ್ಚು ಪವರ್ ಫುಲ್, ಇದನ್ನು ಪತ್ರಕರ್ತರು ಸಮಾಜದ ಒಳಿತಿಗೆ, ಶೋಷಿತರು, ಅಶಕ್ತರ ಬದುಕು ಉತ್ತಮಗೊಳ್ಳುವಂತೆ ಮಾಡಲು ಬಳಸಬೇಕು ಎಂದ ಅವರು ಪತ್ರಕರ್ತರು ಬರೆಯುವ ಲೇಖನಗಳು ಸಮಾಜಮುಖಿಯಾಗಿರಬೇಕು, ಇದು ಪ್ರತಿಯೊಬ್ಬ ಪತ್ರಕರ್ತನ ಆದ್ಯ ಕರ್ತವ್ಯ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ನೈಜ ಪತ್ರಕರ್ತರ ಸಂಖ್ಯೆ ಕಡಿಮೆಯಾಗುತ್ತಿದ್ದು, ಜೊಳ್ಳು ಪತ್ರಕರ್ತರ ಹಾವಳಿ ಹೆಚ್ಚಾಗಿದೆ. ನಕಲಿ ಪತ್ರಕರ್ತರನ್ನು ಆಚೆ ಹಾಕುವಂತಹ ಕೆಲಸವನ್ನು ನಾವೇ ಮಾಡಬೇಕಾಗಿದೆ, ನಕಲಿ ಪತ್ರಕರ್ತರನ್ನು ನಮ್ಮ ಕ್ಷೇತ್ರದಿಂದ ಆಚೆ ಹಾಕದಿದ್ದರೆ ನೈಜ ಪತ್ರಕರ್ತರಿಗೆ ಉಳಿಗಾಲವಿಲ್ಲ. ಹಾಗಾಗಿ ನೈಜ ಪತ್ರಕರ್ತರು ಒಗ್ಗಟ್ಟಾಗಿರಬೇಕು, ಆಗ ಮಾತ್ರ ಜೊಳ್ಳು ಪತ್ರಕರ್ತರ ಹಾವಳಿ ನಿಯಂತ್ರಿಸಲು ಸಾಧ್ಯವಾಗಲಿದೆ ಎಂದರು.

ಪತ್ರಕರ್ತರು ಸುದ್ದಿ ಬರೆಯುವಾಗ ಪದ ಬಳಕೆ ಬಗ್ಗೆ ಪರಿಜ್ಞಾನ ಹೊಂದಿರಬೇಕು, ನಾವು ಬಳಸುವ ಪದ ಸಮಾಜಕ್ಕೆ, ವ್ಯಕ್ತಿಗೆ ಘಾಸಿ ಮಾಡುವಂತಿರಬಾರದು ಎಂದು ಸಲಹೆ ಮಾಡಿದರು.
ಇಂದು ನೈಜ ಪತ್ರಕರ್ತರಿಗಿಂತ ಬ್ಲಾಕ್ ಮೇಲ್ ಪತ್ರಕರ್ತರ ಸಂಖ್ಯೆ ಹೆಚ್ಚಳವಾಗಿದೆ. ನಕಲಿ ಸುದ್ದಿ, ಪೋಸ್ಟರ್ ಗಳನ್ನು ಟ್ರೋಲ್ ಮಾಡುವವರ ವಿರುದ್ಧ ಕೇಸ್ ಹಾಕುವಂತಹ ಕೆಲಸವನ್ನು ಸರ್ಕಾರ ಮಾಡಬೇಕು, ಇದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದರು.

ಆದರೆ ಪೊಲೀಸರು ಪತ್ರಕರ್ತರ ವಿರುದ್ಧ ದೂರು ಬಂದಾಗ ಒಮ್ಮೆ ಆ ದೂರು, ಘಟನೆ ಬಗ್ಗೆ ಪರಾಮರ್ಶಿಸಿ ನಂತರ ಕೇಸು ದಾಖಲಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಆ ಪತ್ರಕರ್ತ ಕೇಸುಗಳ ಮಧ್ಯೆ ಸಿಲುಕಿ ಆಚೆ ಬರಲು ಒದ್ದಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಗೃಹ ಸಚಿವ ಡಾ. ಪರಮೇಶ್ವರ್ ಅವರಿಗೆ ಮನವಿ ಮಾಡಿದರು.
ಸಿದ್ದಗಂಗಾ ಆಸ್ಪತ್ರೆಯ ಆರೋಗ್ಯ ಸಿದ್ದಿ ಉಚಿತ ಒಪಿಡಿ ನಮೂನೆ ಬಿಡುಗಡೆ ಮಾಡಿದ ಶಾಸಕ ಜ್ಯೋತಿಗಣೇಶ್ ಮಾತನಾಡಿ, ಪತ್ರಕರ್ತರಿಗೆ ಸಾಮಾಜಿಕ ಭದ್ರತೆ, ಆರೋಗ್ಯ ವಿಮೆ ಒದಗಿಸುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಪತ್ರಕರ್ತ ಸಂಘ ಕಾರ್ಯೋನ್ಮುಖರಾಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಚಿ.ನಿ. ಪುರುಷೋತ್ತಮ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಗ್ರಾಮೀಣ ಪ್ರದೇಶದ ಎಲ್ಲಾ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಮಾಡುವಂತೆ ಸಚಿವರಿಗೆ ಮನವಿ ಮಾಡಿದರು.

ನೆನೆಗುದಿಗೆ ಬಿದ್ದಿರುವ ತುಮಕೂರು ಪತ್ರಕರ್ತರಿಗೆ ನಿವೇಶನ ನೀಡುವ ವಿಚಾರವನ್ನು ಪ್ರಸ್ತಾಪಿಸಿ ಪತ್ರಕರ್ತರಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳುವಂತೆಯೂ ಕೋರಿದರು. ರಾಜ್ಯ ಸರ್ಕಾರ ನಿವೃತ್ತ ಪತ್ರಕರ್ತರಿಗೆ ನೀಡುವ ಮಾಸಾಶನವನ್ನು 10 ಸಾವಿರದಿಂದ 12 ಸಾವಿರ ರೂ. ಗಳಿಗೆ ಹೆಚ್ಚಳ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ಪತ್ರಕರ್ತರಿಗೆ ಉಚಿತ ಆರೋಗ್ಯ ಸೇವೆ ನೀಡುವ ಸಿದ್ದಗಂಗಾ ಆಸ್ಪ್ರೆಯ ಆರೋಗ್ಯ ಸಿದ್ದಿ ಉಚಿತ ಒಪಿಡಿ ನಮೂನೆ ಬಿಡುಗಡೆ ಮಾಡಲಾಯಿತು.

ಸಮಾರಂಭದಲ್ಲಿ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್, ಜಿಪಂ ಸಿಇಓ ಜಿ.ಪ್ರಭು, ಸಿದ್ದಗಂಗಾ ಆಸ್ಪತ್ರೆಯ ಡಾ.ಎಸ್.ಪರಮೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಂ.ಆರ್.ಮಮತ, ತಹಶೀಲ್ದಾರ್ ಕಮಲಮ್ಮ, ದಿಬ್ಬೂರು ಮಂಜು, ಸಂಘದ ಪ್ರಧಾನ ಕಾರ್ಯದರ್ಶಿ ಟಿ.ರಘುರಾಮ್ ಇತತರು ಇದ್ದರು.

Get real time updates directly on you device, subscribe now.

Comments are closed.

error: Content is protected !!