ತುಮಕೂರು: ನಿಷೇಧಿತ ಕೀಟನಾಶಕ ಮಾರಾಟ ಮಾಡುತ್ತಿದ್ದ ಅಂಗಡಿಯೊಂದರ ಮೇಲೆ ಕೃಷಿ ಇಲಾಖೆ ಜಾರಿದಳದ ಸಹಾಯಕ ನಿರ್ದೇಶಕ ಪುಟ್ಟರಂಗಪ್ಪ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿ ಸುಮಾರು 13 ಸಾವಿರ ಮೌಲ್ಯದ ನಿಷೇಧಿತ ಕೀಟ ನಾಶಕ ವಶಪಡಿಸಿಕೊಂಡಿದ್ದಾರೆ.
ಪಾವಗಡ ತಾಲ್ಲೂಕಿನ ವೈ.ಎನ್.ಹೊಸಕೋಟೆಯ ಎಂ.ಜಿ.ರಸ್ತೆಯಲ್ಲಿರುವ ಭಾಗ್ಯಲಕ್ಷ್ಮಿ ಏಜೆನ್ಸೀಸ್ ಕೀಟನಾಶಕ ಮಾರಾಟ ಮಳಿಗೆಯಲ್ಲಿ ನಿಷೇಧಿತ ಕೀಟನಾಶಕ ಮಾರಾಟ ಮಾಡಲಾಗುತ್ತಿದೆ ಎಂಬ ಬಗ್ಗೆ ಬಂದ ದೂರಿನ ಮೇರೆಗೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದಾಗ ಕೀಟನಾಶಕ ಕಾಯ್ದೆ 1968 ಮತ್ತು ನಿಯಮಗಳು 1971 ರ ನಿಯಮಗಳನ್ನು ಉಲ್ಲಂಸಿ ಸದರಿ ಮಾರಾಟಗಾರರು ನಿಷೇಧಿತ ಕೀಟನಾಶಕವನ್ನು ಅನಧಿಕೃತವಾಗಿ ಖರೀದಿಸಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಈ ಅಂಗಡಿಯವರು ಸುಮಾರು 84 ಸಾವಿರ ರೂ. ಮೌಲ್ಯದ 110 ಲೀಟರ್ ನಿಷೇಧಿತ ಕೀಟನಾಶಕ ಖರೀದಿಸಿ ಮಾರಾಟ ಮಾಡಿದ್ದಾರೆ. ಅಲ್ಲದೆ ಈ ಮಳಿಗೆಯಲ್ಲಿ ವ್ಯವಸ್ಥಿತ ರೀತಿಯಲ್ಲಿ ದಾಖಲೆಗಳಾಗಲಿ, ಕೃಷಿ ಪರಿಕರ ನಿರ್ವಹಣೆಯಾಗಲಿ, ದಾಸ್ತಾನು ದರಪಟ್ಟಿ ಪ್ರದರ್ಶನವನ್ನಾಗಲಿ ಮಾಡಿಲ್ಲ. ಹಾಗಾಗಿ ಈ ಅಂಗಡಿಯವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ಕೃಷಿ ಇಲಾಖೆ ಜಾರಿ ದಳದ ಸಹಾಯಕ ನಿರ್ದೇಶಕ ಹಾಗೂ ಕೀಟನಾಶಕ ಪರಿವೀಕ್ಷಕ ಪುಟ್ಟರಂಗಪ್ಪ ತಿಳಿಸಿದ್ದಾರೆ.
ಈ ದಾಳಿಯಲ್ಲಿ ವೈ.ಎನ್.ಹೊಸಕೋಟೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶಂಷದ್ ಉನ್ನೀಸಾ, ಕೃಷಿ ಸಂಜೀವಿನಿ ತಜ್ಞರಾದ ಯಲ್ಲಪ್ಪ, ಚನ್ನಕೇಶವ ಜೆ. ಪಾಲ್ಗೊಂಡಿದ್ದರು.
Comments are closed.