ತುಮಕೂರು: ಜಿಲ್ಲೆಯ ಸಮಗ್ರಅಭಿವೃದ್ಧಿಗಾಗಿ ಪಣತೊಟ್ಟಿರುವ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಎಂ.ಜಿ.ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನ ಹಾಗೂ ಬಾಳನಕಟ್ಟೆಯ ಹತ್ತಿರವಿರುವ ಬಾಬು ಜಗಜೀವನ ರಾಮ್ ಕಟ್ಟಡ ನಿವೇಶನಕ್ಕೆ ಸಂಬಂಧಿಸಿದಂತೆ ಸ್ಥಳ ಪರಿವೀಕ್ಷಣೆಗಾಗಿ ಖುದ್ದು ಭೇಟಿ ನೀಡಿ ಇಲ್ಲಿನ ವಾಸ್ತವ ಸ್ಥಿತಿ ತಿಳಿದುಕೊಂಡರು.
ಡಾ. ಬಾಬು ಜಗಜೀವನ್ ರಾಮ್ ಕಟ್ಟಡ ನಿವೇಶನಕ್ಕೆ ಸಂಬಂಧಿಸಿದಂತೆ ಪ್ರಸ್ತುತ ನ್ಯಾಯಾಲಯದಲ್ಲಿ ಹೂಡಿರುವ ಪ್ರಕರಣ ಸಂಬಂಧ ಅಗತ್ಯ ಕ್ರಮ ವಹಿಸುವಂತೆ ಪಾಲಿಕೆಯ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚನೆ ನೀಡಿದರಲ್ಲದೇ ಕಳೆದ ಹತ್ತಾರು ವರ್ಷಗಳಿಂದ ಇಲ್ಲಿ ಕಸ ಹಾಕುತ್ತಾ ಬಂದಿದ್ದು ಇದೊಂದು ಡಂಪಿಂಗ್ ಯಾರ್ಡ್ ರೀತಿ ಮಾರ್ಪಾಡು ಆಗಿದೆ. ಇದು ಸ್ಮಾರ್ಟ್ ಸಿಟಿಯೋ ಗಬ್ಬು ಸಿಟಿಯೋ ಎಂದು ಅಧಿಕಾರಿಗಳ ವಿರುದ್ಧ ಗರಂ ಆದರು. ಅಲ್ಲದೇ ಇನ್ನು ಮುಂದೆ ಇಲ್ಲಿ ಯಾರೂ ಸಹ ಕಸ ಸುರಿಯಬಾರದು, ಕಸ ಸುರಿಯುವವರಿಗೆ ದಂಡ ವಿಧಿಸುವುದಲ್ಲದೇ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಸಲಹೆ ನೀಡಿದರು.
ನಗರದ ಹೃದಯ ಭಾಗವಾದ ಈ ಸ್ಥಳದಲ್ಲಿ ಬಹಳ ವರ್ಷಗಳಿಂದಲೂ ರಾಶಿಯಾಗಿ ಬಿದ್ದಿರುವ ಕಸ ತೆಗೆಯಲು ಅಗತ್ಯ ಕ್ರಮ ವಹಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ ತಮಗೆ ಇಲ್ಲಿನ ಕಸ ವಿಲೇವಾರಿ ಮಾಡಲು ಅನುದಾನ ಏನಾದರೂ ಬೇಕಿದ್ದಲ್ಲಿ ಅದಕ್ಕೆ ವಿವರಗಳನ್ನು ಸಲ್ಲಿಸುವಂತೆ ಸೂಚಿಸಿದರು.
ಇನ್ನುಅಂಬೇಡ್ಕರ್ ಭವನ ಕಟ್ಟಡಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಂ.ಜಿ.ರಸ್ತೆಯಲ್ಲಿ ನಿರ್ಮಿಸಿರುವ ಈ ಕಟ್ಟಡಕ್ಕೆ ಅಗತ್ಯ ಮೂಲಭೂತ ಸೌಕರ್ಯ ಇಲ್ಲದಿರುವ ಕಾರಣ ಮತ್ತು ಕೆಲವೊಂದು ತುರ್ತು ದುರಸ್ತಿ ಕಾಮಗಾರಿ ಕೈಗೊಳ್ಳುವ ಸಂಬಂಧ ತುಮಕೂರು ಮಹಾನಗರ ಪಾಲಿಕೆ ಹಾಗೂ ಇನ್ನಿತರ ಇಲಾಖೆಗಳಲ್ಲಿ ಅಗತ್ಯವಿರುವ ಅನುದಾನ ಕ್ರೂಢೀಕರಿಸಿ ಕ್ರಿಯಾ ಯೋಜನೆ ತಯಾರಿಸಿ ಕೂಡಲೇ ಡಾ.ಬಿ.ಆರ್.ಅಂಬೇಡ್ಕರ್ ಭವನದ ನವೀಕರಣ ಕಾಮಗಾರಿ ಕೈಗೆತ್ತಿಕೊಂಡು ಸಾರ್ವಜನಿಕರ ಉಪಯೋಗಕ್ಕಾಗಿ ಅವಕಾಶ ಮಾಡಿಕೊಡಲು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ತಾಕೀತು ಮಾಡಿದರು.
ಸುಮಾರು 10- 12 ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿರುವ ಡಾ. ಬಾಬು ಜಗಜೀವನ ರಾಮ್ ಭವನಕ್ಕೆ ಮೀಸಲು ಜಾಗದ ತಕರಾರು ಇರುವುದರಿಂದ ಸದರಿ ಕಟ್ಟಡದ ಕಾಮಗಾರಿ ಪ್ರಾರಂಭಿಸಲು ಸಾಧ್ಯವಾಗದೇ ನೆನೆಗುದಿಗೆ ಬಿದ್ದಿರುತ್ತದೆ. ಅದನ್ನೂ ಸಹ ಆದಷ್ಟು ಶೀಘ್ರವಾಗಿ ಕ್ರಮ ವಹಿಸಿ ಸಾರ್ವಜನಿಕರ ಅನುಕೂಲಕ್ಕೆ ಅನುವು ಮಾಡಬೇಕೆಂದು ತಿಳಿಸಿದರು.
ಇನ್ನು ಈ ಎರಡೂ ವಿಷಯ ಮತ್ತು ಕಾಮಗಾರಿಗಳ ಬಗ್ಗೆ ವಿಶೇಷ ಆಸಕ್ತಿ ವಹಿಸುವುದಲ್ಲದೇ ರಜೆ ದಿನಗಳಲ್ಲಿಯೂ ಸಹ ಅಧಿಕಾರಿಗಳನ್ನು ಕರೆಸಿ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಆಲಿಸಿ ಪರಿಹರಿಸುವ ಮತ್ತು ಶೀಘ್ರದಲ್ಲಿ ಎರಡು ಕಾಮಗಾರಿಗಳಿಗೆ ಇರುವ ಅಡೆತಡೆ ಪರಿಹರಿಸಿ ಎಲ್ಲಾ ವರ್ಗದ ಜನರು ಮತ್ತು ದಲಿತ ಜನಾಂಗದವರ ಅನುಕೂಲಕ್ಕಾಗಿ ಈ ಕಾಮಗಾರಿಗಳ ಕುರಿತು ಕೊಂಚ ಜಾಗೃತಿ ವಹಿಸಿ ಕೆಲಸ ಮಾಡಬೇಕಾಗಿದೆ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸ್ಥಳ ವೀಕ್ಷಣೆ ಸಂದರ್ಭದಲ್ಲಿ ನೆರೆದಿದ್ದ ಹಲವಾರು ಸಾರ್ವಜನಿಕರು ಮತ್ತು ಕೆಲ ದಲಿತ ಮುಖಂಡರು ಹರ್ಷ ವ್ಯಕ್ತಪಡಿಸಿದರಲ್ಲದೇ ಜಿಲ್ಲಾಧಿಕಾರಿಗಳ ಈ ನಡೆಗೆ ಮೆಚ್ಚುಗೆ ತೋರಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ಹಾಜರಿದ್ದರು.
Comments are closed.