ಬಿಜೆಪಿ ಕಾರ್ಯಕರ್ತೆ ಬಂಧನಕ್ಕೆ ಆಕ್ರೋಶ

ಕಾಂಗ್ರೆಸ್ ಸರ್ವಾಧಿಕಾರಿ ಧೋರಣೆ ಬಿಡಲಿ: ಶಾಸಕ

148

Get real time updates directly on you device, subscribe now.


ತುಮಕೂರು: ಉಡುಪಿಯ ನೇತ್ರಾವತಿ ನರ್ಸಿಂಗ್ ಕಾಲೇಜಿನಲ್ಲಿ ನಡೆದಿದೆ ಎನ್ನಲಾಗುತ್ತಿರುವ ಬೆತ್ತಲೆ ವಿಡಿಯೋ ಪ್ರಕರಣದ ಬಗ್ಗೆ ಸರಕಾರದಿಂದ ನ್ಯಾಯ ಕೇಳಿ ಟ್ವಿಟ್ ಮಾಡಿದ ಬಿಜೆಪಿ ಕಾರ್ಯಕರ್ತೆಯನ್ನು ಬಂಧಿಸುವ ಮೂಲಕ ಕಾಂಗ್ರೆಸ್ ಸರಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದು ನಗರ ಶಾಸಕ ಜೋತಿಗಣೇಶ್ ಆರೋಪಿಸಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬಿಜೆಪಿ ಐಟಿ ಸೇಲ್ ಸದಸ್ಯೆ ಶಕುಂತಲ ನಟರಾಜ್ ಅವರನ್ನು ಟ್ವೀಟರ್ ಕಾಮೆಂಟ್ ಗೋಸ್ಕರ ಬಂಧಿಸಿರುವ ಘಟನೆ ಖಂಡಿಸಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ಹಾಗೂ ರಸ್ತೆ ತಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ನ್ಯಾಯ ಕೇಳಿದವರನ್ನು ಬಂಧಿಸುವ ಮೂಲಕ ವಿರೋಧಪಕ್ಷಗಳ ಬಾಯಿ ಮುಚ್ಚಿಸುವ ಕೆಲಸ ಮಾಡಲು ಹೊರಟಿದೆ. ಈ ನಡವಳಿಗೆ ಸರಿಯಲ್ಲ ಎಂದರು.
ಉಡುಪಿ ನೇತ್ರಾವತಿ ನರ್ಸಿಂಗ್ ಕಾಲೇಜಿನ ಘಟನೆಯ ಹಿಂದೆ ದೊಡ್ಡ ಷಡ್ಯಂತ್ರವಿದೆ, ಕೇರಳ ಫೈಲ್ ಸಿನಿಮಾವೇ ಇದಕ್ಕೆ ಉದಾಹರಣೆ, ಬಿಜೆಪಿ ಕಾರ್ಯಕರ್ತೆ ಶಕುಂತಲ ನಟರಾಜ್ ಅವರು ತಪ್ಪು ಮಾಡಿದ್ದಾರೆ
ಎಂದಾದರೆ ಪೊಲೀಸರು ಅರೆಸ್ಟ್ ವಾರೆಂಟ್ ತರದೆ, ಮಪ್ತಿಯಲ್ಲಿ ಬಂಧಿಸುವ ಅಗತ್ಯವೆನಿತ್ತು ಎಂದು ಪ್ರಶ್ನಿಸಿದ ಜೋತಿಗಣೇಶ್, ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು, ಟ್ವೀಟ್ ಘಟನೆಯನ್ನು ವೈಯಕ್ತಿಕವಾಗಿ ತೆಗೆದುಕೊಂಡು ಈ ರೀತಿಯ ದ್ವೇಷದ ರಾಜಕಾರಣ ಮಾಡ ಹೊರಟಿರುವುದು ಸರಿಯಲ್ಲ. ಅವರಿಂದ ಘಟನೆಯನ್ನು ಲಘುವಾಗಿ ತೆಗೆದುಕೊಳ್ಳುವಂತೆ ನೀಡಿರುವ ಹೇಳಿಕೆ ಖಂಡನೀಯ, ಘಟನೆಯಲ್ಲಿ ಸತ್ಯಾಸತ್ಯತೆ ತಿಳಿಯಲು ಪ್ರಕರಣವನ್ನು ಎನ್ಐಎಗೆ ವಹಿಸಬೇಕೆಂದು ಒತ್ತಾಯಿಸಿದರು.

ಮಾಜಿ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ಕಳೆದ ಎರಡು ತಿಂಗಳ ರಾಜ್ಯ ಸರಕಾರದ ಆಡಳಿತ ಗಮನಿಸಿದರೆ ಒಂದು ವರ್ಗದ ತೃಷ್ಟೀಕರಣಕ್ಕೆ ಇಡೀ ವ್ಯವಸ್ಥೆ ಬಳಸಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ. ಘಟನೆ ನಡೆದಿರುವ ನೇತ್ರಾವತಿ ಕಾಲೇಜಿನ ಸಂತ್ರಸ್ಥ ವಿದ್ಯಾರ್ಥಿನಿಯರು ಜುಲೈ 18ರಂದೇ ದೂರು ನೀಡಿದ್ದರೂ ಇದುವರೆಗೂ ಎಫ್ಐಆರ್ ದಾಖಲಿಸಿಲ್ಲ. ಬದಲಾಗಿ ನ್ಯಾಯ ಕೇಳಿ ಟ್ವೀಟ್ ಮಾಡಿದ ಬಿಜೆಪಿ ಕಾರ್ಯಕರ್ತರ ಮೇಲೆ ಸ್ವಯಂ ದೂರು ದಾಖಲಾದ ನಂತರ, ಘಟನೆಗೆ ಕಾರಣರಾದ ಒಂದು ಕೋಮಿನ ಹೆಣ್ಣು ಮಕ್ಕಳ ಮೇಲೆ ಎಫ್ಐಆರ್ ದಾಖಲಾಗಿದ್ದರೂ ಅವರನ್ನು ಬಂಧಿಸಿಲ್ಲ. ಈ ಎಲ್ಲಾ ಘಟನೆಗಳು ರಾಜ್ಯದಲ್ಲಿ ಪ್ರಜಾಪ್ರಭುತ್ವ ಸರಕಾರವಿಲ್ಲ, ಹಿಟ್ಲರ್ ಆಡಳಿತವಿದೆ ಎಂಬುದನ್ನು ಸಾಬೀತು ಪಡಿಸುತ್ತವೆ ಎಂದರು.

ನಮ್ಮ ಸರಕಾರವಿದ್ದಾಗ ಜಾರಿಗೆ ತಂದ ಗೋ ವಂಶ ಹತ್ಯೆ ನಿಷೇಧ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆಗಳನ್ನು ರದ್ದು ಮಾಡುವ ಮೂಲಕ ಸರಕಾರ ದ್ವೇಷದ ರಾಜಕಾರಣ ಮಾಡಲು ಹೊರಟಿದೆ, ಇಂತಹ ಸರಕಾರ ಬಹಳ ದಿನ ಉಳಿಯುವುದಿಲ್ಲ. ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಪ್ರೇಮ ಹೆಗ್ಗಡೆ ಮಾತನಾಡಿ, ಮೊನ್ನೆಯ ಘಟನೆ ನೆನಪಿಸಿಕೊಂಡರೆ ಈ ದೇಶದಲ್ಲಿ ಕಾನೂನು ಇದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಬೆಂಗಳೂರಿನಿಂದ ಪೊಲೀಸರೆಂದು ಹೇಳಿಕೊಂಡ ಬಂದ ಕೆಲವರು ಮುಪ್ತಿಯಲ್ಲಿದ್ದರೆ, ಇಬ್ಬರು ಹೆಣ್ಣು ಮಕ್ಕಳು ಮಾತ್ರ ಪೊಲೀಸ್ ಸಮವಸ್ತ್ರ ಧರಿಸಿದ್ದರು, ಯಾವ ಉದ್ದೇಶಕ್ಕಾಗಿ ಬಂಧಿಸಲಾಗುತ್ತಿದೆ ಎಂದು ಆಕೆಯ ಪೋಷಕರಿಗೂ ತಿಳಿಸದೆ ಅತ್ಯಂತ ನಿರ್ಧಯವಾಗಿ ನಡೆದುಕೊಳ್ಳಲಾಗಿದೆ. ಇದು ಇಡೀ ಭಾರತದ ಹೆಣ್ಣು ಮಕ್ಕಳೇ ಖಂಡಿಸುವಂತಹ ವಿಚಾರ, ಮುಸ್ಲಿಂ ಹೆಣ್ಣು ಮಕ್ಕಳು ಬಾತ್ ರೂಮ್ ನಲ್ಲಿ ಮೊಬೈಲ್ ಕ್ಯಾಮರಾ ಇಟ್ಟು, ಹಿಂದೂ ಹೆಣ್ಣು ಮಕ್ಕಳ ಬೆತ್ತಲೆ ಫೋಟೋ ಶೂಟ್ ಮಾಡಿ ಮುಸ್ಲಿಂ ಗಂಡು ಮಕ್ಕಳಿಗೆ ರವಾನಿಸುವ ಕೆಲಸ ಮಾಡುತ್ತಿದ್ದು, ಪ್ರಕರಣವನ್ನು ಉನ್ನತ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.

ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷ ಅಂಬಿಕಾ ಹುಲಿನಾಯ್ಕರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ಮುಖಂಡರಾದ ಎಂ.ಬಿ.ನಂದೀಶ್, ಶಿವಪ್ರಸಾದ್, ಸ್ಪೂರ್ತಿ ಚಿದಾನಂದ್, ದಿಲೀಪ್, ಭೈರಪ್ಪ, ನಗರಪಾಲಿಕೆ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿದ ನಂತರ ಕೋಟೆ ಆಂಜನೇಯಸ್ವಾಮಿ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು.

Get real time updates directly on you device, subscribe now.

Comments are closed.

error: Content is protected !!