ತಂದೆ ತಾಯಿ ಗೌರವಿಸುವ ಸಂಸ್ಕಾರ ಮಕ್ಕಳಿಗಿರಲಿ

173

Get real time updates directly on you device, subscribe now.


ತುಮಕೂರು: ಭಾರತೀಯ ಸಂಸ್ಕೃತಿಯಲ್ಲಿ ತಂದೆ ತಾಯಿಯರನ್ನು ಗೌರವಿಸುವುದು ಸಂಸ್ಕಾರದಿಂದಲೇ ಬೆಳೆದುಬಂದಿದೆ. ಅದರಲ್ಲೂ ವಿಶೇಷವಾಗಿ ತಾಯಿಯ ಋಣ ತೀರಿಸುವುದು ಸಾಧ್ಯವೇ ಇಲ್ಲ ಎಂದು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.

ಕನ್ನಡ ಭವನದಲ್ಲಿ ನಡೆದ ನಿವೃತ್ತ ಪ್ರಾಚಾರ್ಯ ಲಿಂಗದೇವರ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕುಟುಂಬ ವ್ಯವಸ್ಥೆ ತೀರಾ ಸಂಕೀರ್ಣವಾಗುತ್ತಿದೆ, ಅನಾಥಾಶ್ರಮಗಳು ಹೆಚ್ಚಾಗುತ್ತಿವೆ, ಕೌಟುಂಬಿಕ ವಿಘಟನೆಗಳೇ ಜಾಸ್ತಿ ಆಗಿವೆ, ಇಂತಹ ಸಂದರ್ಭದಲ್ಲಿ ಲಿಂಗದೇವರು ತನ್ನ ತಾಯಿಯನ್ನು ಗೌರವಿಸಿ ಪೂಜಿಸುತ್ತಿರುವುದು ಶ್ಲಾಘನೀಯವಾಗಿದೆ, ಅಭಿನಂದನಾ ಸಮಾರಂಭದಲ್ಲಿ ಅವರ ತಾಯಿ ಶಾರದಮ್ಮ ಮತ್ತು ಪತ್ನಿ ಶಕುಂತಲರವರನ್ನು ಕರೆತಂದು ಸಾಮರಸ್ಯ ತೋರಿಸಿದ್ದಾರೆ, ಇಂತಹ ಸಮಾರಂಭಗಳು ಅಪರೂಪ, ಈ ಕೌಟುಂಬಿಕ ಆಯುಷ್ಯ- ಆರೋಗ್ಯವನ್ನು ಭಗವಂತ ನೀಡಲಿ, ಈ ಸಭೆ ಆಯೋಜಿಸಿರುವ ಲಿಂಗದೇವರ ಅಭಿಮಾನಿಗಳಿಗೂ ಕೂಡ ಒಳ್ಳೆಯದಾಗಲಿ ಎಂದರು.

ವಿದ್ಯಾವಾಚಸ್ಪತಿ ಡಾ.ಕವಿತಾಕೃಷ್ಣ ಮಾತನಾಡಿ. ತಾಯಿಯ ಸ್ಥಾನ ತುಂಬಲು ಸಾಧ್ಯವಿಲ್ಲ, ತಂದೆಯವರ ನಿಧನದ ನಂತರ ಲಿಂಗದೇವರಿಗೆ ತಾಯಿಯೇ ಸರ್ವಸ್ವವಾಗಿ ನಿಂತು ಬೆಳೆಸಿದ್ದಾರೆ, ಜಗತ್ತಿನಲ್ಲಿ ಗುರುವಿನ ಸ್ಥಾನ ಶ್ರೇಷ್ಠವಾದದ್ದು, ಇಂತಹ ಗುರುಗಳನ್ನು ಜಗತ್ತಿಗೆ ಕೊಟ್ಟಂತಹ ತಾಯಂದಿರು ಸಹ ಅಗ್ರಪಂಕ್ತಿಯಲ್ಲಿರುತ್ತಾರೆ, ಮನುಷ್ಯನಿಗೆ ಸಂಸ್ಕಾರದಿಂದ ಒಳ್ಳೆಯ ಗುಣಗಳು ಪ್ರಾಪ್ತಿಯಾಗುತ್ತವೆ, ಸ್ಥಾನಮಾನಗಳು ದೊರಕಿದ ಮೇಲೆ ಹೆತ್ತು ಹೊತ್ತವರನ್ನು ಮರೆಯುವುದು ಜಾಸ್ತಿ, ಆದರೆ ಲಿಂಗದೇವರು ತನ್ನ ತಾಯಿ ಹಾಗೂ ಕುಟುಂಬದವರ ರಕ್ಷಣೆಯಲ್ಲಿ ಕಿಂಚಿತ್ತೂ ಲೋಪವಾಗದೆ ಕಾರ್ಯಮಗ್ನರಾಗಿರುವುದು ಸ್ತುತ್ಯಾರ್ಹ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇಂತಹ ಅಪರೂಪದ ಕಾರ್ಯಕ್ರಮಗಳು ಜರುಗಿರುವುದೂ ಶ್ಲಾಘನೀಯ ಎಂದರು.

ಪ್ರಾಚಾರ್ಯ ಲಿಂಗದೇವರು ಮಾತನಾಡಿ. ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ನನಗೆ ತಾಯಿಯೇ ಸರ್ವಸ್ವ, ನನ್ನ ವಿದ್ಯಾಭ್ಯಾಸ ಮೊಟುಕಾದಾಗ ನನಗೆ ಪ್ರೇರೇಪಣೆ ನೀಡಿದ ವಕೀಲ ಬಿ.ಎಲ್.ಚಂದ್ರಶೇಖರ್ ವೃತ್ತಿ ಜೀವನಕ್ಕೆ ಬುನಾದಿ ದೊರಕಿಸಿದ ದಿವಂಗತ ಮಾಜಿ ಶಾಸಕ ಜಿ.ಎಸ್.ಶಿವನಂಜಪ್ಪ ಮುಂತಾದವರ ಸಹಾಯ ಮರೆಯುವಂತಿಲ್ಲ, ನನ್ನ ಪತ್ನಿ ಶಕುಂತಲ ಸಹಕಾರದಿಂದ ಕೌಟುಂಬಿಕ ಜೀವನದಲ್ಲಿ ಅಕ್ಕನ, ಅಣ್ಣನ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರ ನೀಡುವಂತಾಯಿತು, ವೃತ್ತಿ ಜೀವನದಲ್ಲಿ ಸಹ ಅನೇಕ ಉತ್ತಮ ಕೆಲಸಗಳನ್ನು ಮಾಡುವಂತಾಯಿತು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಮಾತನಾಡಿ. ಅಭಿಮಾನಿಗಳು ಸಭೆ ಸೇರಿ ಲಿಂಗದೇವರನ್ನು ಅಭಿನಂದಿಸಲು ತೀರ್ಮಾನಿಸಿದಾಗ ಅದೃಷ್ಟವಂತ ಲಿಂಗದೇವರಿಗೆ ಆಸರೆಯಾಗಿರುವ ಅವರ ತಾಯಿ ಶಾರದಮ್ಮ ಹಾಗೂ ಪತ್ನಿ ಶಕುಂತಲ ಅವರನ್ನು ಗೌರವಿಸಿದರೆ ಸೂಕ್ತವಾಗುತ್ತದೆ ಎಂಬ ನಿರ್ಣಯ ಗೆಳೆಯರಿಂದ ಬಂತು, ಅದನ್ನು ಈ ಮೂಲಕ ನೆರವೇರಿಸಲಾಗಿದೆ, ಒಟ್ಟಾರೆ ಲಿಂಗದೇವರು ಅದೃಷ್ಟವಂತ, ಎಲ್ಲಾ ಸಂದರ್ಭಗಳಲ್ಲಿಯೂ ಅಡಗಿದೆ, ದೇವರ ಅನುಗ್ರಹ ಹಿರಿಯರ ಆಶೀರ್ವಾದ ದೊರಕಿ ಸಾರ್ಥಕ ಬದುಕು ಕಂಡಿದ್ದಾರೆ, ಮುಂದಿನ ಸಂದರ್ಭಗಳಲ್ಲಿ ಒಂದು ಟ್ರಸ್ಟ್ ರಚಿಸಿ ಅದರ ಮೂಲಕ ಶೈಕ್ಷಣಿಕ, ಸಾಮಾಜಿಕ ಸೇವೆ ಮಾಡಲು ಲಿಂಗದೇವರು ಮುಂದಾಗಲಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಾಚಾರ್ಯರ ಸಂಘದ ಚಂದ್ರಶೇಖರ ಆರಾಧ್ಯ, ಕಾಲೇಜಿನ ಪರವಾಗಿ ಶಾಂತಕುಮಾರಿ ಹಾಗೂ ದೊಡ್ಡಯ್ಯ, ಸಮಾಜ ಶಾಸ್ತ್ರ ವೇದಿಕೆ ಪರವಾಗಿ ಪರಮೇಶ್ವರಯ್ಯ, ಬಂಧುಗಳ ಪರವಾಗಿ ವಕೀಲ ಚಂದ್ರಶೇಖರ್ ಹಾಗೂ ವೈದ್ಯ ವಿಶ್ವನಾಥ್ ಮುಂತಾದವರು ಮಾಡನಾಡಿದರು. ಶಾಸಕ ಜ್ಯೋತಿಗಣೇಶ್ ಆಗಮಿಸಿ ಅಭಿನಂದಿಸಿದರು. ರಂಗಕರ್ಮಿ ಎಂ.ವಿ.ನಾಗಣ್ಣ, ನಿವೃತ್ತ ಉಪನಿರ್ದೇಶಕ ಟಿ.ಎಸ್.ಆಂಜಿನಪ್ಪ, ಕಂಟಲಗೆರೆ ಸಣ್ಣಹೊನ್ನಯ್ಯ, ಅಕ್ಕಮ್ಮ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!