ಪತ್ರಕರ್ತರು ವೃತ್ತಿ ಧರ್ಮ ಕಾಪಾಡಿಕೊಳ್ಳಲಿ

217

Get real time updates directly on you device, subscribe now.


ಗುಬ್ಬಿ: ಪತ್ರಿಕಾ ಧರ್ಮಕ್ಕೆ ಚ್ಯುತಿ ಬರದಂತೆ ಪತ್ರಕರ್ತರು ವೃತ್ತಿ ಧರ್ಮ ಕಾಪಾಡಿಕೊಂಡಾಗ ಮಾತ್ರ ಸಮಾಜದ ಒಳಿತಿಗೆ ಶ್ರಮಿಸಬಹುದು ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಆಯೋಜನೆ ಮಾಡಿದ್ದ ಪತ್ರಿಕಾ ದಿನಾಚರಣೆ ಉದ್ಘಾಟನೆ ಮಾಡಿ ಮಾತನಾಡಿ, ನಕಲಿ ಪತ್ರಕರ್ತರ ಹಾವಳಿಯಿಂದ ಪ್ರಾಮಾಣಿಕ ಪತ್ರಕರ್ತರು ಸಹ ಇಂದು ತೇಜೋವಧೆಗೆ ಈಡಾಗಿದ್ದಾರೆ, ಪ್ರಜಾಪ್ರಭುತ್ವದಲ್ಲಿ ನಾಲ್ಕನೇ ಅಂಗವಾಗಿ ಕೆಲಸ ಮಾಡುವ ಪತ್ರಿಕೋದ್ಯಮ ಇತ್ತೀಚೆಗೆ ಹಾದಿ ತಪ್ಪುತ್ತಿರುವುದು ಬೇಸರ ತರುತ್ತದೆ, ಕಾಂಗ್ರೆಸ್ ಸರ್ಕಾರ ಪತ್ರಕರ್ತರ ಅಭಿವೃದ್ಧಿಗಾಗಿ ಸುಮಾರು 500 ಕೋಟಿಯಷ್ಟು ಅನುದಾನ ನೀಡುವ ಮೂಲಕ ಪತ್ರಿಕೋದ್ಯಮಕ್ಕೆ ಹೆಚ್ಚಿನ ಸಹಕಾರ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದರು.

ಗುಬ್ಬಿ ತಾಲೂಕಿನಲ್ಲಿ ಪತ್ರಿಕಾ ಭವನ ಹಾಗೂ ತಮ್ಮೆಲ್ಲ ಮೂಲಭೂತ ಸೌಲಭ್ಯಗಳನ್ನು ಖಂಡಿತವಾಗಿಯೂ ಈಡೇರಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ, ಆಧುನಿಕತೆ ಹೆಚ್ಚಾದಂತೆ ಮೊಬೈಲ್ಗಳ ಹಾವಳಿಯಿಂದಾಗಿ ಪತ್ರಿಕೆ ಓದುವವರ ಸಂಖ್ಯೆ ಸಹ ಕಡಿಮೆಯಾಗುತ್ತಿದೆ, ಪತ್ರಿಕೆ ಓದಿದ ಸಂದರ್ಭದಲ್ಲಿ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ, ಪತ್ರಿಕಾ ಮಾಧ್ಯಮದ ಎಲ್ಲಾ ಸ್ನೇಹಿತರು ಒಗ್ಗಟ್ಟಿನಿಂದ ಇದ್ದಾಗ ಸರಕಾರದ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ, ಆದಷ್ಟು ತಮ್ಮ ಕಾರ್ಯ ವೃತ್ತಿಯನ್ನು ದೇವರು ಎಂದು ಭಾವಿಸಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಚಿ.ನಿ.ಪುರುಷೋತ್ತಮ್ ಮಾತನಾಡಿ, ರಾಜ್ಯದಲ್ಲಿ ಸುಮಾರು 8,000ಕ್ಕೂ ಹೆಚ್ಚು ಪತ್ರಕರ್ತರು ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದಾರೆ, ಸಮಾಜದಲ್ಲಿ ಪತ್ರಕರ್ತರಿಗೆ ತನ್ನದೇ ಆದ ಜವಾಬ್ದಾರಿಗಳಿದ್ದು ಅದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು, ಇನ್ನೂ ನಕಲಿ ಪತ್ರಕರ್ತರ ಹಾವಳಿ ಅತ್ಯಧಿಕವಾಗಿದ್ದು ಅವರ ವಿರುದ್ಧ ಈಗಾಗಲೇ ಎಸ್ಪಿ ಅವರ ಬಳಿ ಮಾಹಿತಿ ತಿಳಿಸಿದ್ದು ಅಂಥವರು ತಾಲೂಕಿನಲ್ಲಿ ಕಂಡು ಬಂದರೆ ಕೂಡಲೇ ಕಾನೂನು ಕ್ರಮ ತೆಗೆದುಕೊಳ್ಳಲು ನಮ್ಮ ಸಂಘ ನಿರ್ಧಾರ ಮಾಡಿದೆ, ಸರಕಾರ ಸಹ ಪತ್ರಿಕೋದ್ಯಮ ಹಾಗೂ ಪತ್ರಕರ್ತರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿರುವುದು ಸಂತೋಷ ತಂದಿದ್ದು, ಎಲ್ಲಾ ಪತ್ರಕರ್ತರು ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡು ಸಮಾಜದ ಏಳಿಗೆಗೆ ದುಡಿದಾಗ ಮಾತ್ರ ನಮಗೆ ಉತ್ತಮ ಹೆಸರು ಬರುತ್ತದೆ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಯತೀಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಅಂಜಿನಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಘುರಾಮ್, ತಹಶೀಲ್ದಾರ್ ಬಿ.ಆರತಿ, ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಸಿದ್ದಲಿಂಗ ಸ್ವಾಮಿ, ವರ್ತಕರ ಸಂಘದ ಅಧ್ಯಕ್ಷ ದಯಾನಂದ್, ಪ್ರಾಂಶುಪಾಲ ಡಾ.ಶಿವ ನಂಜಯ್ಯ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!