ನಿಷೇಧಿತ ಪ್ಲಾಸ್ಟಿಕ್ ಹಾವಳಿ ತಡೆಗೆ ಪರಿಸರ ಪ್ರಿಯರ ಆಗ್ರಹ

217

Get real time updates directly on you device, subscribe now.


ಕುಣಿಗಲ್: ಪಟ್ಟಣದಲ್ಲಿ ನಿಷೇಧಿತ ಪ್ಲಾಸ್ಟಿಕ್ ಹಾವಳಿ ಮಿತಿ ಮೀರಿದ್ದು ಪುರಸಭೆ ಅಧಿಕಾರಿಗಳು ಕಳೆದ ಹಲವಾರು ವರ್ಷಗಳಿಂದ ಅರಿವು ಮೂಡಿಸುವುದರಲ್ಲೆ ಕಾಲ ಕಳೆಯುತ್ತಿದ್ದು ನಿಷೇಧಿತ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಲು ಕಠಿಣ ಕ್ರಮಕ್ಕೆ ಮುಂದಾಗುವ ಮೂಲಕ ಪುರಸಭೆ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕೆ ಪರಿಸರ ಪ್ರಿಯರು ಆಗ್ರಹಿಸಿದ್ದಾರೆ.
ಪುರಸಭೆ ವ್ಯಾಪ್ತಿಯಲ್ಲಿ ದಿನಕ್ಕೆ 18.5ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು ಇದರಲ್ಲಿ 16 ಟನ್ ಹಸಿ ತ್ಯಾಜ್ಯವಾದರೆ, ಎರಡುವರೆ ಟನ್ ಘನ ತ್ಯಾಜ್ಯವಾಗಿದೆ, ಇದರಲ್ಲಿ ಅಧಿಕಾರಿಗಳೇ ಹೇಳುವಂತೆ 20 ರಿಂದ 30 ಕೆಜಿ ಪ್ಲಾಸ್ಟಿಕ್ ಇರುತ್ತೆ. ಆದರೆ ವಾಸ್ತವವಾಗಿ ಇದು 300 ರಿಂದ 500 ಕೆಜಿ ಇದೆ, ಆದರೆ ಅಧಿಕಾರಿಗಳು ಇದನ್ನು ಒಪ್ಪುವುದಿಲ್ಲ, ಪಟ್ಟಣದಲ್ಲಿ ಸಣ್ಣಪುಟ್ಟ ಹೋಟೆಲ್, ಅಂಗಡಿಗಳಲ್ಲಿ ಮುಕ್ತವಾಗಿ ನಿಷೇಧಿತ ಪ್ಲಾಸ್ಟಿಕ್ಬಳಕೆಯಾಗುತ್ತಿದೆ, ಬೆಂಗಳೂರು ನಗರದಲ್ಲಿ ಬಳಕೆ ಕಟ್ಟುನಿಟ್ಟಾಗಿ ಜಾರಿಗೊಂಡ ಹಿನ್ನೆಲೆಯಲ್ಲಿ ಅಲ್ಲಿಸಂಗ್ರಹವಾಗಿದ್ದ ನಿಷೇಧಿತ ಪ್ಲಾಸ್ಟಿಕ್ ಅತ್ಯಲ್ಪ ದರಕ್ಕೆ ಖರೀದಿಸಿದ ಸಗಟು ಮಾರಾಟಗಾರರು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮಾರಾಟ ಮಾಡುತ್ತಿದ್ದಾರೆ, ಬುಧವಾರ ವಾರದ ಸಂತೆ ದಿನದಲ್ಲಿ ಮೂರ್ನಾಲ್ಕು ಮಂದಿ ರಾಜರೋಷವಾಗಿ ನೂರಾರು ಕೆಜಿ ನಿಷೇಧಿತ ಪ್ಲಾಸ್ಟಿಕ್ ಬೀದಿಬದಿ ವ್ಯಾಪಾರಿಗಳಿಗೆ ಪೂರೈಕೆ ಮಾಡುತ್ತಾರೆ, ಬೀದಿ ಬದಿ ಹಾಕಲಾಗುವ ಕಸದಲ್ಲಿ ನಿಷೇಧಿತ ಪ್ಲಾಸ್ಟಿಕ್ ತ್ಯಾಜ್ಯವೇ ಸಿಂಹಪಾಲು ಹೊಂದಿದೆ.

ಪರಿಸರ ದಿನಾಚರಣೆ ನಿಟ್ಟಿನಲ್ಲಿ ಪುರಸಭೆ ಅಧಿಕಾರಿಗಳು ಕಾನೂನು ಸೇವಾ ಸಮಿತಿ ಸೇರಿದಂತೆ ತಾಲೂಕು ದಂಡಾಧಿಕಾರಿಗಳೊಂದಿಗೆ ಜಾಥಾ ನಡೆಸಿ ಪ್ಲಾಸ್ಟಿಕ್ ನಿಷೇಧಿಸುವ ನಿಟ್ಟಿನಲ್ಲಿ ಜಾಗೃತವಾಗಿ, ನಂತರ ಒತ್ತಡ ಬಂದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ದಂಡಹಾಕಿ ಎರಡು, ಮೂರು ಪಾಕೆಟ್ ವಶಪಡಿಸಿಕೊಂಡು ಸುಮ್ಮನಾಗುತ್ತಾರೆ, ಬೀದಿಬದಿ ವ್ಯಾಪಾರಿಗಳು ಹೇಳುವಂತೆ ನಾವೇನು ಪ್ಲಾಸ್ಟಿಕ್ ಕವರ್ ಬಳಕೆ ಮಾಡಬೇಕೆಂದಿಲ್ಲ, ನಮಗೆ ದೊಡ್ಡಂಗಡಿಯಲ್ಲಿ ಸಿಗುತ್ತದೆ ತಂದು ಬಳಸುತ್ತೇವೆ, ಅಧಿಕಾರಿಗಳು ದೊಡ್ಡಂಗಡಿಗಳಲ್ಲಿ ಮಾರಾಟ ನಿಯಂತ್ರಿಸಲಿ ನಾವು ಬಳಸುವುದೇ ಇಲ್ಲ ಎನ್ನುತ್ತಾರೆ. ಆದರೆ ಪುರಸಭೆ ಅಧಿಕಾರಿಗಳಿಗೆ ದೊಡ್ಡಂಗಡಿಗೆ ದಾಳಿ ಮಾಡಲು ಮೀನಮೇಷಾ ಎಣಿಸುವ ಜೊತೆಯಲ್ಲಿ ಆಕಸ್ಮಾತ್ ಒಂದು ಅಂಗಡಿ ದಾಳಿ ಮಾಡಿದಲ್ಲಿ ಅದು ಇಡೀ ಪಟ್ಟಣದೆಲ್ಲೆಡೆ ಮಿಂಚಿನಂತೆ ಹರಡಿ ಎಲ್ಲರೂ ಪ್ಲಾಸ್ಟಿಕ್ ಮುಚ್ಚಿಡುವುದರಿಂದ ಏನು ಮಾಡದ ಸ್ಥಿತಿಯಾಗಿದೆ, ನಿಷೇಧಿತ ಪ್ಲಾಸ್ಟಿಕ್ ಕವರ್ಗಳಲ್ಲಿ ಆಹಾರ ವಸ್ತು ಎಸೆಯುವುದರಿಂದ ಅದನ್ನು ತಿನ್ನುವ ಮೂಕ ಪ್ರಾಣಿಗಳ ಆರೋಗ್ಯದ ಮೇಲೆ ದುಷ್ಟಪರಿಣಾಮ ಬೀರುವ ಜೊತೆಯಲ್ಲಿ ಚರಂಡಿಯಲ್ಲಿ ಪ್ಲಾಸ್ಟಿಕ್ ಕಟ್ಟಿಕೊಂಡು ನೈರ್ಮಲ್ಯ ನಿರ್ವಹಣೆಗೂ ತೊಂದರೆಯಾಗುತ್ತಿದೆ.

ಪುರಸಭಾಧಿಕಾರಿಗಳು ಪಟ್ಟಣದಲ್ಲಿ ನಿಷೇಧಿತ ಪ್ಲಾಸ್ಟಿಕ್ ಪೂರೈಕೆಯಾಗದಂತೆ ಕಠಿಣ ಕ್ರಮ ವಹಿಸುವ ಜೊತೆಯಲ್ಲಿ ಸಗಟು ಮಾರಾಟಗಾರರ ಪತ್ತೆ ಹಚ್ಚಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಬೇಕು, ಪ್ಲಾಸ್ಟಿಕ್ ಬಳಕೆ ನಿಯಂತ್ರಣಕ್ಕೆ ಪಟ್ಟಣದಲ್ಲಿನ ಸುಮಾರು ಎಂಟು ಸಾವಿರ ವಸತಿ ಖಾತೆದಾರರಿಗೆ ಬಟ್ಟೆಬ್ಯಾಗ್ ಪೂರೈಸಿ ಅರಿವು ಮೂಡಿಸಬೇಕಿದೆ ಎಂದು ಪರಿಸರ ಪ್ರಿಯರೂ, ಪುರಸಭೆ ಮಾಜಿ ಸದಸ್ಯ ಕೆ.ರಮೇಶ್ ಹೇಳುತ್ತಾರೆ.
ಪುರಸಭೆ ಪರಿಸರ ಅಭಿಯಂತರ ಚಂದ್ರಶೇಖರ್ ಮಾತನಾಡಿ. ಪುರಸಭೆ ವತಿಯಿಂದ ನಿಷೇಧಿತ ಪ್ಲಾಸ್ಟಿಕ್ ಬಳಕೆ ನಿಟ್ಟಿನಲ್ಲಿ ಹಲವಾರು ಬಾರಿ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಕೆಲವರಿಗೆ ದಂಡ ಹಾಕಲಾಗಿದೆ, ಮುಂದಿನ ದಿನಗಳಲ್ಲಿ ಸಗಟು ಮಾರಾಟಗಾರರ ಪತ್ತೆಹಚ್ಚಿ ದಾಳಿ ನಡೆಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು, ನಾಗರಿಕರು ಸಹ ಪ್ಲಾಸ್ಟಿಕ್ ಹಾವಳಿ ನಿಯಂತ್ರಿಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!