ತುಮಕೂರು: ನಗರದ ಅಮಾನಿಕೆರೆಯನ್ನು ಮುಂದಿನ ದಿನಗಳಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ನಗರದ ಅಮಾನಿಕೆರೆಗೆ ಭೇಟಿ ನೀಡಿ ಕೆರೆಯಲ್ಲಿ ಎಷ್ಟು ಸಾಮರ್ಥ್ಯದ ನೀರು ಶೇಖರಣೆಯಾಗುತ್ತದೆ ಹಾಗೂ ಬೇಸಿಗೆ ಕಾಲದಲ್ಲಿ ಎಷ್ಟು ನೀರು ಇರುತ್ತವೆ ಎಂಬುವುದರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಕೆರೆಯ ಅಂಗಳದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಅಭಿವೃದ್ಧಿ ಪಡಿಸಲಾಗಿರುವ ಸಾರ್ವಜನಿಕರ ವಾಯು ವಿಹಾರದ ಸ್ಥಳ, ಫುಡ್ ಕೋರ್ಟ್, ನೃತ್ಯ ಕಾರಂಜಿ ವೀಕ್ಷಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಬೋಟಿಂಗ್ ವ್ಯವಸ್ಥೆಯನ್ನು ಸಹ ಪ್ರವಾಸಿಗರಿಗೆ ಕಲ್ಪಿಸಲಾಗುವುದು ಎಂದರು.
ಆಗಸ್ಟ್ 15 ರೊಳಗಾಗಿ ಅಮಾನಿಕೆರೆಗೆ ಒಂದು ರೂಪ ನೀಡಲಾಗುವುದು, ಈ ಕೆರೆಯೂ ಪುರಾತನವಾಗಿದ್ದು ತನ್ನದೇ ಅದ ಇತಿಹಾಸ ಹೊಂದಿದೆ, ಅಂದಿನ ಪ್ರಧಾನ ಮಂತ್ರಿಗಳಾಗಿದ್ದ ವಾಜಪೇಯಿ ಅವರು ಕೆರೆಗಳನ್ನು ಅಭಿವೃದ್ಧಿ ಪಡಿಸುವುದಕ್ಕಾಗಿ ದೆಹಲಿಯಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿದ್ದರು, ಆ ಸಭೆಗೆ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ರಾಜ್ಯದ ಪ್ರಮುಖ ಕೆರೆಗಳ ಪುನಶ್ಚೇತನ ಮಾಡಲು ಪ್ರಸ್ತಾವನೆ ಸಿದ್ದಪಡಿಸಿದ್ದರು, ಆ ಪಟ್ಟಿಯಲ್ಲಿ ಅಮಾನಿಕೆರೆಯ ಹೆಸರು ಇತ್ತು ಎಂದು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು.
ಅಮಾನಿಕೆರೆಗೆ ಹೇಮಾವತಿ ನದಿ ನೀರು ಹರಿಸುವುದರ ಮೂಲಕ ಕೆರೆಯ ಜಾಗ ಉಳಿಸುವುದರ ಜೊತೆಗೆ ಆ ಜಾಗ ಒತ್ತುವರಿಯಾಗದ ರೀತಿಯಲ್ಲಿ ರಕ್ಷಣೆ ಮಾಡಲಾಗಿದೆ, ನಗರದ ತ್ಯಾಜ್ಯ ನೀರು ಕೆರೆಗೆ ಬಾರದ ರೀತಿಯಲ್ಲಿ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ನಗರದ ಜನರಿಗೆ ಬುಗಡನಹಳ್ಳಿ ಕೆರೆಯಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ, ಮುಂದಿನ ದಿನಗಳಲ್ಲಿ ಅಮಾನಿಕೆರೆಯ ನೀರನ್ನು ಸಂಸ್ಕರಣೆ ಮಾಡಿ ಬಿಡಲಾಗುತ್ತದೆ ಎಂದು ತಿಳಿಸಿದರು.
ಅಮಾನಿಕೆರೆಗೆ ಆಗಮಿಸುವ ಪ್ರವಾಸಿಗರಿಂದ ಸಂಗ್ರಹಣೆ ಮಾಡುವ ಪ್ರವೇಶ ಶುಲ್ಕ ಮತ್ತು ಬೋಟಿಂಗ್ ಶುಲ್ಕದ ಹಣವನ್ನು ಇದರ ನಿರ್ವಹಣೆ ಮಾಡಲು ಉಪಯೋಗಿಸಿ ಕೊಳ್ಳಲಾಗುತ್ತದೆ, 2024ರ ವೇಳೆಗೆ ಸ್ಮಾರ್ಟ್ ಸಿಟಿಯ ನಿರ್ವಹಣೆ ಅವಧಿಯು ಮುಕ್ತಾಯವಾಗುತ್ತದೆ, ನಂತರ ಇದರ ನಿರ್ವಹಣೆಯನ್ನು ನಗರಾಭಿವೃದ್ಧಿ ಪ್ರಾಧಿಕಾರ ಮಾಡಲಿದೆ ಎಂದು ತಿಳಿಸಿದರು.
ನಗರದ ಎಸ್ ಮಾಲ್ ಹತ್ತಿರವಿರುವ ಕಿರಿದಾದ ಮೇಲ್ಸೇತುವೆಯಿಂದ ವಾಹನಗಳ ಸಂಚಾರ ದಟ್ಟಣೆ ತಪ್ಪಿಸಲು ರಸ್ತೆ ಅಗಲೀಕರಣ ಮಾಡಬೇಕು, ಆದರಿಂದ ಶೀಘ್ರವಾಗಿ ಪ್ರಸ್ತಾವನೆ ಸಲ್ಲಿಸುವಂತೆ ರಾಷ್ಟ್ರೀಯ ಹೆದ್ದಾರಿ ಕಾರ್ಯಪಾಲಕ ಅಭಿಯಂತರ ಶಿವಕುಮಾರ್ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್, ಮಹಾನಗರ ಪಾಲಿಕೆ ಮೇಯರ್ ಪ್ರಭಾವತಿ ಸುಧೀಶ್ವರ್, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಸಿಇಒ ಜಿ.ಪ್ರಭು, ಪಾಲಿಕೆ ಆಯುಕ್ತೆ ಅಶ್ವಿಜ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ, ಸ್ಮಾರ್ಟ್ ಸಿಟಿ ಎಂ.ಡಿ. ರಂಗಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಉಮೇಶ್ ಜಾದವ್ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.
Comments are closed.