ಸಮರ್ಪಕ ಬಸ್ ವ್ಯವಸ್ಥೆಗಾಗಿ ವಿದ್ಯಾರ್ಥಿಗಳ ಪ್ರತಿಭಟನೆ

264

Get real time updates directly on you device, subscribe now.

ಕೊರಟಗೆರೆ: ಗ್ರಾಮೀಣ ಭಾಗದ ಕೆಲವು ಭಾಗಗಳಿಗೆ ಬಸ್ ವ್ಯವಸ್ಥೆಯೇ ಇಲ್ಲ, ಇನ್ನೂ ಕೆಲವು ಕಡೆ ಬಸ್ ವ್ಯವಸ್ಥೆ ಇದ್ದರೂ ಸಹ ಬಸ್ ನಿಲ್ಲಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ, ಮಂಗಳವಾರ ಬೆಳಗ್ಗೆ ತಾಲೂಕಿನ ತಣ್ಣೇನಹಳ್ಳಿ ಗ್ರಾಮದಲ್ಲಿ ಸಾರಿಗೆ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದರು.

ಸಾರಿಗೆ ಇಲಾಖೆ ವಿದ್ಯಾರ್ಥಿಗಳ ಪ್ರಯಾಣಕ್ಕೆ ಯಾವುದೇ ಅನುಕೂಲ ಕಲ್ಪಿಸದೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ, ತಾಲ್ಲೂಕಿನ ಡಿ.ನಾಗೇನಹಳ್ಳಿ, ಇರಕಸಂದ್ರ ಕಾಲೋನಿ, ತಣ್ಣೇನಹಳ್ಳಿ, ನಾಗೇನಹಳ್ಳಿ ಸೇರಿದಂತೆ ಆ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಸಾರಿಗೆ ಬಸ್ ವ್ಯವಸ್ಥೆ ಇದೆ, ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಜಾರಿಗೆ ತಂದ ಶಕ್ತಿ ಯೋಜನೆಯಿಂದ ಮಹಿಳೆಯರು ಹೆಚ್ಚಾಗಿ ಪ್ರಯಾಣಿಸುತ್ತಿರುವ ಹಿನ್ನೆಲೆ ವಿದ್ಯಾರ್ಥಿಗಳ ಬಳಿ ಬಸ್ ಪಾಸ್ ಇದ್ದರೂ ಸಹ ಬಸ್ನಲ್ಲಿ ಪ್ರಯಾಣಿಸುವುದೇ ಕಷ್ಟಕರವಾಗಿದೆ, ಇದರಿಂದ ಬೇಸತ್ತಾ ವಿದ್ಯಾರ್ಥಿಗಳು ಕೊರಟಗೆರೆ ಸಾರಿಗೆ ಬಸ್ ನಿಲ್ದಾಣದಲ್ಲಿ ಮತ್ತು ತಣ್ಣೇನಹಳ್ಳಿ ಗ್ರಾಮದಲ್ಲಿ ಬಸ್ಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಮುನಿಶಾಮಿ ರೆಡ್ಡಿ ಮತ್ತು ಪಿಎಸ್ಐ ಚೇತನ್ ಕುಮಾರ್ಗೌಡ ಅವರು ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಬಸ್ಗಳನ್ನು ಹೆಚ್ಚುವರಿಗೊಳಿಸಿ ವಿದ್ಯಾರ್ಥಿಗಳ ಪ್ರಯಾಣಕ್ಕೆ ಅನುಕೂಲ ಕಲ್ಪಿಸುವಂತೆ ಜಿಲ್ಲಾ ಘಟಕದ ಅಧಿಕಾರಿಗಳಿಗೆ ತಿಳಿಸಿ ಊರುಗಳಿಗೆ ಹೋಗಲು ಬಸ್ನ ವ್ಯವಸ್ಥೆ ಕಲ್ಪಿಸಿ ಚಾಲಕರಿಗೆ ಮತ್ತು ನಿರ್ವಾಹಕರಿಗೆ ತಿಳಿ ಹೇಳಿದ್ದು ಅಧಿಕಾರಿಗಳ ಈ ಉತ್ತಮ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದರು.

ಕೋಳಾಲ ಹೋಬಳಿ ಭಾಗದ ತಣ್ಣೇನಹಳ್ಳಿ, ಕಾಲೋನಿ ಸೇರಿದಂತೆ ಅನೇಕ ಭಾಗದಿಂದ ವಿದ್ಯಾರ್ಥಿಗಳು ಪಟ್ಟಣಕ್ಕೆ ವಿದ್ಯಾಭ್ಯಾಸಕ್ಕೆ ಬರುತ್ತಿದ್ದು, ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳನ್ನು ಕಂಡರೆ ಬಸ್ ನಿಲ್ಲಿಸದೆ ಮುಂದೆ ಹೋಗುತ್ತಿರುವ ಪರಿಣಾಮ ವಿದ್ಯಾರ್ಥಿಗಳು ತಣ್ಣೇನಹಳ್ಳಿ ಗ್ರಾಮದ ಬಸ್ ನಿಲ್ದಾಣದಲ್ಲಿ10 ಕ್ಕೂ ಅಧಿಕ ಸಂಖೈಯಲ್ಲಿ ಕೆಎಸ್ಆರ್ಟಿಸಿ ಬಸ್ಗಳನ್ನು ತಡೆದು ಪ್ರತಿಭಟನೆ ಮಾಡಿದ್ದು, ಸ್ಥಳಕ್ಕೆ ಪೊಲೀಸ್ ಇಲಾಖೆ ಅಧಿಕಾರಿಗಳು ಆಗಮಿಸಿ ವಿದ್ಯಾರ್ಥಿಗಳಿಗೆ ತಿಳಿ ಹೇಳಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು, ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಸಾರಿಗೆ ಇಲಾಖೆ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

ಖಾಸಗಿ ವಾಹನಗಳ ಮೊರೆ ಹೋದ ವಿದ್ಯಾರ್ಥಿಗಳು
ರಾಜ್ಯ ಸರ್ಕಾರ ಜಾರಿಗೆ ತಂದ ಶಕ್ತಿ ಯೋಜನೆಯನ್ನು ರಾಜ್ಯದ ಮಹಿಳೆಯರು ಸದ್ಬಳಕೆ ಮಾಡಿಕೊಂಡು ಹೆಚ್ಚಾಗಿ ಪ್ರಯಾಣಿಸುತ್ತಿದ್ದು ಇದರಿಂದ ತಾಲೂಕಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಮ್ಮ ಶಾಲಾ- ಕಾಲೇಜುಗಳಿಗೆ ಹೋಗಲು ತಮ್ಮ ಊರುಗಳ ಬಸ್ ನಿಲ್ದಾಣದಲ್ಲಿ ಗಂಟೆ ಗಟ್ಟಲೆ ಕಾದು ಬಸ್ ಪಾಸ್ ಇದ್ದರೂ ಕೂಡ ಖಾಸಗಿ ವಾಹನಗಳೊಂದಿಗೆ ತಮ್ಮ ಶಾಲೆಗಳಿಗೆ ವಿದ್ಯಾರ್ಥಿಗಳು ತಲುಪುತ್ತಿದ್ದಾರೆ, ಇದರ ಬಗ್ಗೆ ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ತಿಳಿದಿದ್ದರೂ ಕೂಡ ಜಾಣ ಕುರುಡು ವರ್ತನೆ ಮಾಡುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಸರಿ, ಕೂಡಲೇ ವಿದ್ಯಾರ್ಥಿಗಳಿಗಾಗಿ ಹೆಚ್ಚಿನ ಬಸ್ ಬಿಡುವಂತೆ ಸಾರ್ವಜನಿಕರು ಮನವಿ ಮಾಡಿಕೊಂಡರು.

ಗ್ರಾಮೀಣ ಭಾಗದ ಮಕ್ಕಳು ಹೆಚ್ಚಾಗಿ ಶಾಲಾ- ಕಾಲೇಜುಗಳಿಗೆ ಪಟ್ಟಣಕ್ಕೆ ಪ್ರಯಾಣ ಮಾಡುತ್ತಿದ್ದು, ಬಸ್ ಸೌಲಭ್ಯದ ಕೊರತೆ ಬಗ್ಗೆ ವಿದ್ಯಾರ್ಥಿಗಳು ತಮಗಾಗುತ್ತಿರುವ ಸಮಸ್ಯೆ ಬಗ್ಗೆ ನನ್ನ ಬಳಿ ಹೇಳಿಕೊಂಡಿದ್ದಾರೆ, ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಿ ತಾಲ್ಲೂಕಿನಲ್ಲಿ ಮುಂದೆಂದು ಈ ರೀತಿಯ ಘಟನೆ ಉದ್ಬವವಾಗದಂತೆ ಜಿಲ್ಲಾ ಘಟಕದ ಸಾರಿಗೆ ಅಧಿಕಾರಿಗಳಿಗೆ ತಿಳಿಸಿದ್ದೇನೆ.
-ಮುನಿಶಾಮಿ ರೆಡ್ಡಿ, ತಹಶೀಲ್ದಾರ್.

ಪ್ರತಿ ದಿನವು ನಮಗೆ ಸಮರ್ಪಕವಾಗಿ ಬಸ್ ಸೌಲಭ್ಯ ಸಿಗ್ತಿಲ್ಲ, ಬೆ. 8.30 ರಿಂದ 10.30 ರ ವರೆಗೆ ಬಸ್ಗಾಗಿ ಕಾಯುತ್ತೇವೆ, ಬಂದರೂ ಸಹ ಒಳಗಡೆ ಅತ್ತಿಸೋಲ್ಲ, ನಿರ್ವಾಹಕರು ಮತ್ತುಚಾಲಕರು ವಿದ್ಯಾರ್ಥಿಗಳ ಮಾತನ್ನು ಲೆಕ್ಕಕ್ಕೆ ಇಟ್ಟುಕೊಳ್ಳಲ್ಲ, ಇದಕ್ಕೆಲ್ಲಾ ಸಾರಿಗೆ ನಿರ್ಲಕ್ಷವೇ ಕಾರಣ, ಇಲ್ಲಿನ ಸಮಸ್ಯೆ ಬಗ್ಗೆ ತಿಳಿದರು ತಿಳಿಯದಂತೆ ಸಾರಿಗೆ ಇಲಾಖೆ ವರ್ತಿಸುತ್ತದೆ, ಬಸ್ ವ್ಯವಸ್ಥೆ ಕಲ್ಪಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು.
-ಚೈತ್ರ, ವಿದ್ಯಾರ್ಥಿನಿ.

Get real time updates directly on you device, subscribe now.

Comments are closed.

error: Content is protected !!