ತುಮಕೂರು: ಜಿಲ್ಲೆಯ ಎಲ್ಲಾ ಪ್ರೌಢಶಾಲೆ, ಪಿಯು ಕಾಲೇಜು, ಪ್ರಥಮ ದರ್ಜೆ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಫೋಕ್ಸೊ ಕಾಯ್ದೆ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮಾಡಿಸುವ ಕಾರ್ಯಕ್ರಮ ಆಯೋಜಿಸುವಂತೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಮಕ್ಕಳ ರಕ್ಷಣಾ ವ್ಯವಸ್ಥೆ ಕುರಿತು ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೆಚ್ಐವಿ ಸೋಂಕಿತ, ಬಾಧಿತ ಮಕ್ಕಳಿಗೆ ವಿಶೇಷ ಪಾಲನಾ ಯೋಜನೆಯಡಿ ಮಾಸಿಕ ಒಂದು ಸಾವಿರದಂತೆ ಏಪ್ರಿಲ್ 2022ರಿಂದ ಮಾರ್ಚ್ 2023ರ ವರೆಗೆ 37.20 ಲಕ್ಷ ಹಣವನ್ನು ಡಿಬಿಟಿ ಮೂಲಕ ಮಕ್ಕಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ ಎಂದು ತಿಳಿಸಿದರು.
ಮಕ್ಕಳ ಪಾಲನಾ ಸಂಸ್ಥೆಯಲ್ಲಿ ದಾಖಲಾಗಿ ನಂತರ ಕುಟುಂಬಕ್ಕೆ ಸೇರ್ಪಡೆಯಾದ ಮಕ್ಕಳು, ಮಕ್ಕಳ ಪೋಷಕರು ಜೈಲಿನಲ್ಲಿದ್ದರೆ, ಅನಾಥ ಮಕ್ಕಳು, ಏಕಪೋಷಕ ಮಕ್ಕಳಿಗೆ ಮಿಷನ್ ವಾತ್ಸಲ್ಯ ಯೋಜನೆಯಡಿ 2022- 23ನೇ ಸಾಲಿನಿಂದ ಆದ್ಯತೆ ಮೇರೆಗೆ ಮಾಸಿಕ ನಾಲ್ಕು ಸಾವಿರದಂತೆ ಡಿಬಿಟಿ ಮುಖಾಂತರ ಮಕ್ಕಳ ಬ್ಯಾಂಕ್ ಖಾತೆಗೆ ಪ್ರೋತ್ಸಾಹ ಧನ ಜಮೆ ಮಾಡಲಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ವಿಶೇಷ ಪಾಲನಾ ಯೋಜನೆಯಡಿ ಹೊಸದಾಗಿ 45 ಹಾಗೂ ಪ್ರಾಯೋಜಕತ್ವ ಕಾರ್ಯಕ್ರಮದಡಿ 266 ಮಕ್ಕಳನ್ನು ಗುರುತಿಸಲಾಗಿದೆ, ಎಲ್ಲಾ ನೋಂದಾಯಿತ ಮಕ್ಕಳ ಪಾಲನಾ ಸಂಸ್ಥೆಗಳಿಂದ ಬಿಡುಗಡೆಯಾದ 18 ವರ್ಷ ಮೇಲ್ಪಟ್ಟ ಅರ್ಹ ಮಕ್ಕಳಿಗೆ ಆರ್ಥಿಕವಾಗಿ ಸ್ವಾವಲಂಭಿಗಳಾಗುವ ವರೆಗೆ ಅಥವಾ ಗರಿಷ್ಠ 3 ವರ್ಷಗಳ ಅವಧಿಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಪುನರ್ವಸತಿಗಾಗಿ ತಿಂಗಳಿಗೆ ಐದು ಸಾವಿರ ರೂ. ನೀಡಲಾಗುವುದು ಎಂದರು.
ಹೆಣ್ಣು ಮಕ್ಕಳ ಅನುಪಾಲನಾ ಗೃಹದಲ್ಲಿ 18 ವರ್ಷ ಪೂರ್ಣಗೊಂಡ ನಂತರ ಮಕ್ಕಳ ಪಾಲನಾ ಸಂಸ್ಥೆಗಳಿಂದ ಬಿಡುಗಡೆ ಹೊಂದುವ ಹೆಣ್ಣು ಮಕ್ಕಳಿಗೆ 21 ವರ್ಷದ ವರೆಗೆ ಪುನರ್ವಸತಿ ಒದಗಿಸಬೇಕು ಹಾಗೂ ಅವರ ವಿದ್ಯಾಭ್ಯಾಸದ ಜೊತೆಗೆ ವೃತ್ತಿಪರ ಕೌಶಲ್ಯ ತರಬೇತಿ ನೀಡುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಫೋಕ್ಸೊ ಕಾಯ್ದೆಯಡಿ ಏಪ್ರಿಲ್ 2022 ರಿಂದ ಮಾರ್ಚ್ 2023ರ ಅಂತ್ಯಕ್ಕೆ 274 ಪ್ರಕರಣ ದಾಖಲಾಗಿದ್ದು, ಇದರಲ್ಲಿ 119 ಪ್ರಕರಣ ಇತ್ಯರ್ಥಗೊಂಡಿವೆ ಹಾಗೂ 155 ಪ್ರಕರಣ ಬಾಕಿ ಉಳಿದಿವೆ ಎಂದರು.
ಬಾಲ ನ್ಯಾಯ ಮಂಡಳಿಯಲ್ಲಿ ಜನವರಿ 2023 ರಿಂದ ಜೂನ್ 2023ರ ವರೆಗೆ 17 ಫೋಕ್ಸೊ ಪ್ರಕರಣ ದಾಖಲಾಗಿವೆ,
ಜಿಲ್ಲೆಯಲ್ಲಿ 2023- 24ನೇ ಸಾಲಿನಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿಯಲ್ಲಿ 23 ಪ್ರಕರಣ ದಾಖಲಾಗಿವೆ ಎಂದರು.
ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ನಿಷೇಧ ಮಾಡುವುದರ ಕುರಿತು ಸುತ್ತೋಲೆ ಹೊರಡಿಸುಂತೆ ಡಿಡಿಪಿಐ ಅವರಿಗೆ ಸೂಚಿಸಿದರಲ್ಲದೆ, ಶಾಲಾ ಆವರಣ ಹಾಗೂ ವಸತಿ ನಿಲಯಗಳ ಹತ್ತಿರ ಜಾಮರ್ ಅಳವಡಿಸುವಂತೆ ತಿಳಿಸಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ ತಿಪ್ಪೇಸ್ವಾಮಿ ಮಾತನಾಡಿ, ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ- 2016ರ ಕಾಯ್ದೆಯನ್ನು ಎಲ್ಲಾ ಶಾಲೆಗಳಲ್ಲಿ ಅಳವಡಿಸಿಕೊಂಡು ಅಲ್ಲಿನ ಎಲ್ಲಾ ಸಿಬ್ಬಂದಿ 2 ವರ್ಷದ ಬದ್ದತ ಪತ್ರಕ್ಕೆ ಸಹಿ ಹಾಕಿರಬೇಕು ಎಂದು ಹೇಳಿದರು.
ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದ ಅವರು, ಪ್ರಾಥಮಿಕ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟವನ್ನು ಮಕ್ಕಳನ್ನು ಕೂರಿಸಿ ಕೊಡಬೇಕು ಎಂದರಲ್ಲದೆ, ಶಿರಾ ತಾಲ್ಲೂಕು ವ್ಯಾಪ್ತಿಯಲ್ಲಿ ನಡೆದ ಅವಘಡಗಳು ಜಿಲ್ಲೆಯಲ್ಲಿ ಮರು ಕಳುಹಿಸದಂತೆ ಎಚ್ಚರ ವಹಿಸಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಕೆಎಸ್ಆರ್ಟಿಸಿ ಬಸ್ ನಿಲ್ದಾಣಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098ನ್ನು ಪ್ರದರ್ಶಿಸಬೇಕು, ಸಾರಿಗೆ ಇಲಾಖೆಯ ನೌಕರರು ವಿದ್ಯಾರ್ಥಿ ಸ್ನೇಹಿಯಾಗಿ ಕೆಲಸ ಮಾಡಬೇಕೆಂದು ತಿಳಿಸಿದರು.
ಆರೋಗ್ಯ ಇಲಾಖೆಯು ನೀಡುವ ತಾಯಿ ಕಾರ್ಡ್ ಹಾಗೂ ಹೊರ ರೋಗಿಗಳ ಚೀಟಿಗಳಲ್ಲಿ ಕಡ್ಡಾಯವಾಗಿ ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ ಎಂಬ ವಾಕ್ಯ ಮುದ್ರಿಸುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ಕುಮಾರ್ ಶಹಪೂರವಾಡ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ನೂರುನ್ನೀಸಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಶ್ರೀಧರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನುಷಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಪವಿತ್ರ, ಡಿಡಿಪಿಐ ನಂಜಯ್ಯ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
Comments are closed.