ಕಳೆದ ವರ್ಷ ಅಪಘಾತದಲ್ಲಿ 762 ಜನ ಸಾವು

ರಸ್ತೆ ಸುರಕ್ಷತಾ ನಿಯಮಗಳ ಕುರಿತು ಎಡಿಜಿಪಿ ಪರಿಶೀಲನೆ

139

Get real time updates directly on you device, subscribe now.


ತುಮಕೂರು: ಕಳೆದ ವರ್ಷ ತುಮಕೂರು ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿ 762 ಜನರ ಸಾವನ್ನಪ್ಪಿದ್ದಾರೆ, ರಾಜ್ಯದಲ್ಲಿ ಬೆಂಗಳೂರು ಜೊತೆಗೆ ತುಮಕೂರು ಜಿಲ್ಲೆಯಲ್ಲೇ ಅತಿಹೆಚ್ಚು ಸಾವು ಸಂಭವಿಸಿದೆ, ಮೂರ್ನಾಲ್ಕು ಹೆದ್ದಾರಿ ಇರುವುದರಿಂದ ಹೆಚ್ಚು ಅಪಘಾತ ಸಂಭವಿಸುತ್ತಿವೆ, ಈ ಬಗ್ಗೆ ಸಾರ್ವಜನಿಕರು ಸಹ ಎಚ್ಚರಿಕೆ ವಹಿಸಬೇಕು ಎಂದು ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗೆ ಭೇಟಿ ನೀಡಿ ರಸ್ತೆ ಸುರಕ್ಷತಾ ನಿಯಮಗಳ ಕುರಿತು ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಚಾಲಕರು ಓವರ್ ಸ್ಪೀಡ್, ಕುಡಿದು ವಾಹನ ಚಲಾಯಿಸದೇ ಎಚ್ಚರಿಕೆ ವಹಿಸಬೇಕು, ಆದರೆ ಎಚ್ಚರಿಕೆ ವಹಿಸದೆ ಇರುವುದರಿಂದ ಸುಮ್ಮನೆ ಅಮೂಲ್ಯ ಜೀವಗಳನ್ನು ಕಳೆದುಕೊಳ್ಳುತ್ತಿದ್ದಾರೆ, ಗಸ್ತು ವಾಹನಗಳಿಗೆ ರಸ್ತೆ ಸುರಕ್ಷತೆ ವಹಿಸುವಂತೆ ಸೂಚನೆ ನೀಡಲಾಗಿದೆ, ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಪೊಲೀಸರಿಗೆ ದಂಡ ವಸೂಲಿಯೇ ಪ್ರಮುಖ ಕರ್ತವ್ಯವಾಗದೆ ಅಪಘಾತ ಪ್ರಕರಣಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಸೂಚನೆ ನೀಡಿದರು.
ಈಗಾಗಲೇ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಲೇನ್ ವಯೋಲೇಷನ್, ಡಿಸಿಪ್ಲೇನ್ ಸಲುವಾಗಿ ಟ್ರೈಯಲ್ ರನ್ ನಡೆಯುತ್ತಿದೆ, ಓವರ್ ಸ್ಪೀಡ್, ಸೀಟ್ ಬೆಲ್ಟ್ ಇಲ್ಲದೇ ವಾಹನ ಚಾಲನೆ, ಡ್ರೈವಿಂಗ್ ವೇಳೆ ಮೊಬೈಲ್ನಲ್ಲಿ ಮಾತನಾಡುವುದು ಸೇರಿದಂತೆ ಸಂಚಾರ ನಿಯಮ ಉಲ್ಲಂಸುವುದನ್ನು ಸೆರೆ ಹಿಡಿಯಲು ಈ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಸೆರೆ ಹಿಡಿಯಲು 8 ಕ್ಯಾಮೆರಾ ಅಳವಡಿಸಲಾಗುತ್ತಿದೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 8 ಕ್ಯಾಮೆರಾ ಅಳವಡಿಸಲಾಗುತ್ತಿದೆ, ಇಡೀ ಎನ್ಹೆಚ್- 4 ನಲ್ಲಿ ಒಟ್ಟು 72 ಕ್ಯಾಮೆರಾ ಅಳವಡಿಸಲಾಗಿದೆ ಎಂದರು.

ಮುಂದಿನ 15 ದಿನಗಳಲ್ಲಿ ದಂಡ ಹಾಕುವ ಕಾರ್ಯಕ್ಕೆ ಚಾಲನೆ ದೊರೆಯಲಿದೆ, ಒಂದು ದಿನಕ್ಕೆ ಸುಮಾರು 5 ಸಾವಿರ ಜನರು ಸಂಚಾರಿ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ, ಇವರೆಲ್ಲರಿಗೂ ದಂಡ ಹಾಕಲು ಸಾಧ್ಯವಾಗುತ್ತಿಲ್ಲ ಎಂದು ವಿವರಿಸಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ನಡೆಸಿ ಸರಿಪಡಿಸಲು 3 ತಿಂಗಳು ಸಮಯ ಕೊಡುತ್ತೇವೆ, ಆ ನಂತರ ಅಪಘಾತಗಳು ಸಂಭವಿಸಿದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರದ್ದು ತಪ್ಪು ಕಾಣಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ, ಎಸ್ಪಿ ರಾಹುಲ್ ಕುಮಾರ್ ಶಹಪೂರ್ ವಾಡ್, ಅಡಿಷನಲ್ ಎಸ್ಪಿ ಮರಿಯಪ್ಪ, ಪ್ರೊಬೆಷನರಿ ಐಪಿಎಸ್ ಅಧಿಕಾರಿ ಸಿದ್ದಾರ್ಥ ಗೋಯಲ್, ಡಿವೈಎಸ್ಪಿ ಶ್ರೀನಿವಾಸ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!