ತುಮಕೂರು: ನಗರದ ಅಂಚಿನ ಗ್ರಾಮಗಳನ್ನು ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಆಯಾಮಗಳಲ್ಲಿ ಸಮುದಾಯ ಕೇಂದ್ರಿತ ಅಧ್ಯಯನ ಮಾಡಿ ಸಮಸ್ಯೆಗಳನ್ನು ಗಮನಕ್ಕೆ ತಂದರೆ ಅದನ್ನು ಪರಿಹರಿಸುವ ಮಾರ್ಗಗಳನ್ನು ಸರ್ಕಾರ ಮಟ್ಟದಲ್ಲಿ ಮಾಡುತ್ತೇನೆ ಎಂದು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಸುರೇಶಗೌಡ ಹೇಳಿದರು.
ತುಮಕೂರು ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಬುಧವಾರ ಆರಂಭಿಸಿದ ಏಳು ದಿನಗಳ ಸಮಾಜ ಕಾರ್ಯ ಗ್ರಾಮೀಣ ಶಿಬಿರದಲ್ಲಿ ಮಾತನಾಡಿ, ತುಮಕೂರು ವಿಶ್ವ ವಿದ್ಯಾಲಯವು ರಾಜ್ಯ ಮಟ್ಟದಲ್ಲಿ ಉತ್ತಮ ಕಾರ್ಯ ಸಾಧನೆ ಮಾಡುತ್ತಿದೆ, ಸಮಾಜ ಕಾರ್ಯ ಶಿಕ್ಷಣದ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ, ಕಾರಣ ಈ ವಿದ್ಯಾರ್ಥಿಗಳಿಗೆ ಗ್ರಾಮೀಣ ಸಮುದಾಯದ ನೈಜ ಚಿತ್ರಣ ಗೊತ್ತಿರುತ್ತದೆ ಎಂದರು.
ವೃತ್ತಿ ಪರತೆಯಲ್ಲಿ ಕೌಶಲ್ಯ ಮತ್ತು ನೈತಿಕ ಮೌಲ್ಯ ಎಲ್ಲವೂ ಕ್ಷೇತ್ರ ಕಾರ್ಯ ಮತ್ತು ತರಗತಿಯ ಒಳಗಡೆ ಪ್ರಯೋಗಿಕವಾಗಿ ಕಲಿಯುತ್ತಿರುತ್ತಾರೆ, ಇದರಿಂದ ಸರ್ಕಾರಿ, ಸರ್ಕಾರೇತರ ಸಂಘ ಸಂಸ್ಥೆಗಳ ಒಟ್ಟಿಗೆ ಕೆಲಸ ಮಾಡುವುದರ ಜೊತೆಯಲ್ಲಿಯೇ ಕಾರ್ಖಾನೆಗಳಲ್ಲಿಯೂ ಮಾನವ ಸಂಪನ್ಮೂಲ ನಿರ್ವಹಣೆ ಮತ್ತುಅಭಿವೃದ್ಧಿ ವಿಭಾಗದಲ್ಲಿ ದಕ್ಷತೆಯಿಂದ ವೃತ್ತಿ ಕೈಗೊಳ್ಳಲು ಸಾಧ್ಯವಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ತುಮಕೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಸಮಾಜ ಕಾರ್ಯ ಗ್ರಾಮೀಣ ಶಿಬಿರದ ಧ್ಯೇಯ ವಾಕ್ಯವು ಶಿಬಿರದ ಚಿತ್ತ ಸ್ವಾವಲಂಬಿ ಕೃಷಿ ಮತ್ತುಉದ್ಯೋಗದತ್ತ ಎಂಬುವುದನ್ನು ಇಟ್ಟುಕೊಂಡು ವಿವಿಯ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಕುಂದೂರು ಗ್ರಾಮದಲ್ಲಿ ಏಳು ದಿನಗಳ ಗ್ರಾಮೀಣ ಜನರಿಗೆ ಅರಿವು ಮೂಡಿಸುವ ಮತ್ತು ಗ್ರಾಮಕ್ಕೆ ನೆರವಾಗ ಬಲ್ಲ 26 ವಿನೂತನ ಅರಿವು ಕಾರ್ಯಕ್ರಮ ಯೋಜಿಸಿದ್ದಾರೆ ಎಂದರು.
ಉಚಿತ ಆರೋಗ್ಯತಪಾಸಣೆ ಶಿಬಿರ, ಬೀದಿ ನಾಟಕಗಳು, ಸ್ವಯಂ ಉದ್ಯೋಗದ ಬಗ್ಗೆ ಕಾರ್ಯಾಗಾರ, ಮಹಿಳಾ ಸಬಲೀಕರಣ, ಆರೋಗ್ಯ ಜಾಗೃತಿ, ಕೌಶಲ್ಯ ತರಬೇತಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಅಗತ್ಯತೆ, ಸಾವಯವ ಕೃಷಿ, ರೈತರಿಗೆ ಸರ್ಕಾರದಿಂದ ದೊರಕುವ ಸೌಲತ್ತು, ಕಾನೂನಿನ ಅರಿವು ಇನ್ನು ಮುಂತಾದ ಕಾರ್ಯಕ್ರಮಗಳನ್ನು ಈ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ತುಮಕೂರುವಿವಿ ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಪ್ರೊ.ಪರಶುರಾಮ. ಕೆ.ಜಿ. ಗ್ರಾಮೀಣ ವಿದ್ಯಾರ್ಥಿಗಳ ಆಂತರಿಕ ಕಲಿಕೆಯ ಜೊತೆಗೆ ಸಮುದಾಯಕ್ಕೆ ಸೇವೆ ಕೊಡುವ ಆದ್ಯತೆಯನ್ನು ವಿದ್ಯಾರ್ಥಿಗಳಲ್ಲಿ ಪ್ರೇರೇಪಿಸುವುದು ಬಹಳ ಮುಖ್ಯವಾದ ಅಂಶವಾಗುತ್ತದೆ, ಗ್ರಾಮೀಣ ಶಿಬಿರದಲ್ಲಿ ಸಾಮೂಹಿಕ ಜೀವನ ಮಾಡುವುದರಿಂದ ಸಹ ಜೀವನ ಹೊಂದಾಣಿಕೆ ಭಾತೃತ್ವ ತಾಳ್ಮೆ ಸಹೋದರತ್ವ ಮುಂತಾದ ಸಂಬಂಧಗಳು ವಾಸ್ತವಕ್ಕೆ ಹತ್ತಿರವಾಗಿ ಬೆಳೆಯುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವೈ.ಎಚ್. ಹುಚ್ಚಯ್ಯ ಮಾತನಾಡಿ, ಸೇವೆಯೇ ವಿದ್ಯಾರ್ಥಿಗಳ ಮೂಲ ಉದ್ದೇಶವಾಗಬೇಕು, ಜೀವನದ ಪರಿಪಕ್ವತೆಗೆ ಸಹಬಾಳ್ವೆಗೆ ಇಂತಹ ಶಿಬಿರಗಳು ಅತ್ಯವಶ್ಯಕ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿ ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಪ್ರೊ.ಬಿ.ರಮೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಲತಾ, ಕುಂದೂರು ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರಾದ ರಾಮಚಂದ್ರಪ್ಪ, ರಮೇಶ್.ಡಿ., ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಗಂಗಾಜನೇಯ, ಗ್ರಾಮದ ಮುಖಂಡರಾದ ಪಾಪಯ್ಯ, ನರಸಿಂಹಮೂರ್ತಿ, ನಾಗರಾಜು, ಶಿಬಿರಾಧಿಕಾರಿ ಡಾ.ಭೂಷಣ್ಕುಮಾರ್, ಅನುಷ ಜೈನ್.ಎಚ್.ಡಿ, ಉಪನ್ಯಾಸಕರಾದ ಸಂತೋಷಕುಮಾರ್, ಡಾ.ಸುಜಾತ, ಡಾ.ಲಕ್ಷ್ಮೀರಂಗಯ್ಯ ಭಾಗವಹಿಸಿದ್ದರು.
Comments are closed.