ಹುಳಿಯಾರು: ಕಸ ಸಾಕಾಣಿಕೆ ವಾಹನದಲ್ಲಿ ಶಾಲಾ ಮಕ್ಕಳನ್ನು ತುಂಬಿಕೊಂಡು ಬರುತ್ತಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಟೀಕೆ ಹಾಗೂ ಆಕ್ಷೇಪಕ್ಕೆ ಗುರಿಯಾದ ಘಟನೆ ಬುಧವಾರ ಜರುಗಿದೆ.
ಹುಳಿಯಾರು ಹೋಬಳಿಯ ಬರಕನಹಾಲ್ ಗ್ರಾಮ ಪಂಚಾಯಿತಿಯಲ್ಲಿ ಈ ಘಟನೆ ಸಂಭವಿಸಿದ್ದು, ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ತ್ಯಾಜ್ಯ ಸಂಗ್ರಹಿಸಿಕೊಂಡು ಕಸ ಸಾಗಾಣೆ ವಾಹನದ ಚಾಲಕಿ ಶೋಭಾರಾಣಿ ಅವರು ಸಂಗೇನಹಳ್ಳಿ ಸಮೀಪದ ವಿಲೇವಾರಿ ಘಟಕಕ್ಕೆ ಸುರಿದು ವಾಪಸ್ ಬರುವಾಗ ಶಾಲಾ ಮಕ್ಕಳನ್ನು ತುಂಬಿಕೊಂಡು ಬರಕನಹಾಲ್ ಗ್ರಾಮಕ್ಕೆ ಬರುತ್ತಿರುವಾಗ ದಾರಿಹೋಕರೊಬ್ಬರು ವೀಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ.
ಇದು ಸಹಜವಾಗಿ ಟೀಕೆ ಟಿಪ್ಪಣಿ ಹಾಗೂ ಆಕ್ಷೇಪಕ್ಕೆ ಕಾರಣವಾಗಿದ್ದು ತ್ಯಾಜ್ಯ ತುಂಬುವ ವಾಹನದಲ್ಲಿ ಸಹಜವಾಗಿ ರೋಗ ರುಜಿನಗಳಿಗೆ ಕಾರಣವಾಗುವ ಕೀಟಾಣುಗಳು ಇರುತ್ತವೆ, ಹೀಗೆ ಮಕ್ಕಳನ್ನ ತುಂಬಿಕೊಂಡು ಹೋಗುವುದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ, ಅಲ್ಲದೆ ವಾಹನ ಹತ್ತುವಾಗ, ಇಳಿಯುವಾಗ ಬಿದ್ದು ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ ಇರುತ್ತವೆ, ಮುಖ್ಯವಾಗಿ ಗಾಳಿ ಹೆಚ್ಚಾಗಿರುವುದರಿಂದ ಮಕ್ಕಳಿಗೆ ಧೂಳಿದ ಮಜ್ಜನವಾಗುತ್ತದೆ ಎಂದು ಆಕ್ಷೇಪಿಸಿದ್ದಾರೆ
ಇನ್ನು ಕೆಲವರು ಚಾಲಕಿ ಶೋಭಾರಾಣಿ ಪರ ಬ್ಯಾಟಿಂಗ್ ಮಾಡಿದ್ದು ವಾಹನ ಸೌಕರ್ಯವಿಲ್ಲದ ಸಂಗೇನಹಳ್ಳಿ ವಿದ್ಯಾರ್ಥಿಗಳು ಶಾಲಾ ಸಮಯವಾಗಿರುವುದರಿಂದ ಹತ್ತಿಸಿಕೊಳ್ಳಲು ಕೇಳಿಕೊಂಡಿದ್ದಾರೆ, ಮಕ್ಕಳ ಅನುಕೂಲಕ್ಕಾಗಿ ಕರೆದುಕೊಂಡು ಬಂದು ಬಿಟ್ಟಿದ್ದಾರೆ, ಇವರೇನು ಮಕ್ಕಳಿಂದ ಹಣ ವಸೂಲಿ ಮಾಡಿಲ್ಲ, ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ, ಅಲ್ಲದೆ ಮಾನವೀಯತೆ ದೃಷ್ಟಿಯಿಂದ ಇಂತಹ ಘಟನೆಗಳನ್ನು ನೋಡಬೇಕು ಎಂದಿದ್ದಾರೆ.
ತ್ಯಾಜ್ಯ ಸಂಗ್ರಹಣ ವಾಹನದಲ್ಲಿ ಮನುಷ್ಯರನ್ನು ಕೂರಿಸಿಕೊಂಡು ಓಡಾಡುವುದು ಸಾರಿಗೆ ನಿಯಮ ಉಲ್ಲಂಘನೆಯ ಜೊತೆಗೆ ಆರೋಗ್ಯ ಇಲಾಖೆಯ ನಿಯಮ ಸಹ ಉಲ್ಲಂಘನೆಯಾಗಿದೆ ಎಂಬುದನ್ನು ಅರಿತ ಅಲ್ಲಿನ ಪಿಡಿಓ ತೂಕ್ಯಾನಾಯಕ ಅವರು ಚಾಲಕಿ ಶೋಭರಾಣಿ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ, ಇದಕ್ಕೆ ಪ್ರತಿಯಾಗಿ ಶೋಭಾ ರಾಣಿಯವರು ಕ್ಷಮಾಪಣೆ ಬರೆದು ಕೊಟ್ಟಿದ್ದಾರಲ್ಲದೆ ಇನ್ನೆಂದು ವಾಹನದಲ್ಲಿ ಯಾರನ್ನು ಹತ್ತಿಸಿಕೊಂಡು ಓಡಾಡುವುದಿಲ್ಲ ಎಂದು ಹೇಳುವ ಮೂಲಕ ಪ್ರಕರಣಕ್ಕೆ ತೆರೆ ಎಳೆದಿದ್ದಾರೆ.
Comments are closed.