ಇಂದ್ರಧನುಷ್ ಅಭಿಯಾನ ಯಶಸ್ವಿಗೊಳಿಸಿ:ಡೀಸಿ

121

Get real time updates directly on you device, subscribe now.


ತುಮಕೂರು: ಜಿಲ್ಲೆಯಲ್ಲಿ ದಡಾರ ಮತ್ತು ರುಬೆಲ್ಲಾ ಲಸಿಕೆಯಿಂದ ವಂಚಿತವಾಗಿರುವ 5ವರ್ಷದೊಳಗಿನ ಮಕ್ಕಳಿಗೆ ಇನ್ನೊಂದು ವಾರದೊಳಗೆ ಲಸಿಕೆ ನೀಡಲು ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಇಂದ್ರಧನುಷ್ ಅಭಿಯಾನ ಜಿಲ್ಲಾ ಮಟ್ಟದ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಅಭಿಯಾನವನ್ನು ಮೂರು ಸುತ್ತುಗಳಲ್ಲಿ ಆಯೋಜಿಸಲಾಗಿದೆ, ಆಗಸ್ಟ್ 7 ರಿಂದ 12ರವರೆಗೆ ಮೊದಲ ಸುತ್ತು, ಎರಡನೇ ಸುತ್ತು ಸೆಪ್ಟೆಂಬರ್ 11 ರಿಂದ 16ರವರೆಗೆ ಹಾಗೂ ಮೂರನೇ ಸುತ್ತನ್ನು ಅಕ್ಟೋಬರ್ 9ರಿಂದ 14ರವರೆಗೆ ನಡೆಯುವ ಅಭಿಯಾನವನ್ನು ಯಶಸ್ವಿಗೊಳಿಸಲು ಎಲ್ಲಾ ಇಲಾಖೆಗಳು ಆರೋಗ್ಯ ಇಲಾಖೆಗೆ ಸಹಕಾರ ನೀಡಬೇಕೆಂದು ಹೇಳಿದರು.

ಜಿಲ್ಲೆಯ ಗರ್ಭಿಣಿ ಮಹಿಳೆಯರು ಮತ್ತು 5ವರ್ಷಗಳ ಮಕ್ಕಳ ಮಾಹಿತಿಯನ್ನು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಮತ್ತು ಆಶಾ ಕಾರ್ಯಕರ್ತರೊಂದಿಗೆ ಅಂಗನವಾಡಿ ಕಾರ್ಯಕರ್ತರು ಹಂಚಿಕೊಳ್ಳಬೇಕು, ಮಿಷನ್ ಇಂದ್ರಧನುಷ್ 5.0 ಅಭಿಯಾನದಲ್ಲಿ ಮನೆ ಮನೆ ಭೇಟಿ ಮಾಡಿ ಲಸಿಕೆ ಪಡೆಯಬೇಕಾಗಿರುವ, ಪಡೆಯದ, ಬಿಟ್ಟು ಹೋಗಿರುವವರ ಪಟ್ಟಿ ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸಹಕರಿಸಬೇಕು, 2ರಿಂದ 5ವರ್ಷದೊಳಗಿನ ಮಕ್ಕಳು ದಡಾರ-ರುಬೆಲ್ಲಾ-2, ಡಿಪಿಟಿ ಬೂಸ್ಟರ್, ಓಪಿವಿ ಬೂಸ್ಟರ್ ಲಸಿಕೆ ಪಡೆದಿದ್ದಾರೆಯೇ ಎಂದು ಪರಿಶೀಲಿಸಬೇಕು ಎಂದು ಹೇಳಿದರು.
ಗರ್ಭಿಣಿ ಮಹಿಳೆಯರ ಟಿಡಿ ಲಸಿಕಾಕರಣ ಮತ್ತು ಮಕ್ಕಳ ಲಸಿಕಾಕರಣದ ಕುರಿತು ತಾಯಂದಿರ ಸಭೆಗಳಲ್ಲಿ ಅಭಿಯಾನದ ದಿನಾಂಕಗಳ ಮಾಹಿತಿ ನೀಡಿ, ಲಸಿಕಾಕರಣದ ಕುರಿತು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ವಿಶೇಷವಾಗಿ ಅಪಾಯದಂಚಿನ ಪ್ರದೇಶಗಳಾದ ತೋಟದ ಮನೆಗಳು, ಕಬ್ಬು ಕಟಾಯಿಸಲು ವಲಸೆ ಹೋಗುವವರು, ಕುರಿ ಕಾಯುವವರು ಇಂತಹ ಗುಂಪಿನಲ್ಲಿ ಲಸಿಕೆ ಬಿಟ್ಟುಹೋದ ಫಲಾನುಭವಿಗಳ ಹೆಡ್ ಕೌಂಟ್ ಸಮೀಕ್ಷೆಗೆ ಸಹಾಯ ಮಾಡಬೇಕು ಹಾಗೂ ಸೂಕ್ಷ್ಮ ಕ್ರಿಯಾ ಯೋಜನೆ ಸಿದ್ದಪಡಿಸಲು ಸಹಕರಿಸಬೇಕು ಎಂದು ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಲಸಿಕೆ ನಿರಾಕರಿಸುವ ಕುಟುಂಬಗಳನ್ನು ಮನವೊಲಿಸಬೇಕು ಹಾಗೂ ಇದರ ಕುರಿತು ಟಾಂಟಾಂ ಹೊಡಿಸಬೇಕು, ಭಿತ್ತಿ ಪತ್ರ ಮುದ್ರಿಸಿಕೊಡಬೇಕು ಎಂದು ತಿಳಿಸಿದರು.

ನಗರ ಪ್ರದೇಶಗಳಲ್ಲಿ ವಿಶೇಷವಾಗಿ ಕೊಳಚೆ ಪ್ರದೇಶರ್ಗಳಲ್ಲಿ, ಹೊರವಲಯಗಳಲ್ಲಿ ಅಭಿಯಾನ ನಡೆಸಲು ಮುನ್ಸಿಪಾಲಿಟಿ, ಮಹಾನಗರ ಪಾಲಿಕೆ ಅಧಿಕಾರಿಗಳು ಲಸಿಕಾ ಕಾರ್ಯಪಡೆ ಸಮಿತಿ ರಚಿಸಬೇಕು. ಈ ಅಭಿಯಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಕಸ ಸಂಗ್ರಹ ಮಾಡುವ ವಾಹನಗಳಲ್ಲಿ ಧ್ವನಿಸುರುಳಿ ಮೂಲಕ ಪ್ರಚುರಪಡಿಸಬೇಕು ಎಂದು ತಿಳಿಸಿದರು.
ಹೊಸದಾಗಿ ಮಕ್ಕಳನ್ನು ಶಾಲೆಗೆ ನೋಂದಣಿ ಮಾಡಿಕೊಳ್ಳುವ ಸಮಯದಲ್ಲಿ ಈ ಹಿಂದೆ ಪಡೆದಿರುವ ಲಸಿಕೆಗಳ ಮಾಹಿತಿ ಪರಿಶೀಲಿಸಿ, ಲಸಿಕೆ ಪಡೆಯದ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಪೋಷಕರಿಗೆ ಪ್ರೇರೆಪಿಸಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಇಎಸ್ಐ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯದ ಮಕ್ಕಳ ಪೋಷಕರನ್ನು ಲಸಿಕೆ ಪಡೆಯಲು ಪ್ರೇರೆಪಿಸಿ ಸೇವೆ ಒದಗಿಸಬೇಕು ಹಾಗೂ ಸಾಧ್ಯವಿದ್ದಲ್ಲಿ ಲಸಿಕೆ ಪಡೆದ ಪೋಷಕರಿಗೆ ಸಹಾಯಧನ ನೀಡಬೇಕು ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಅಲ್ಪಸಂಖ್ಯಾತರ ಸಮುದಾಯಗಳಲ್ಲಿ ಲಸಿಕಾಕರಣದ ಬಗ್ಗೆ ಹೆಚ್ಚಿನ ಅರಿವೂ ಮೂಡಿಸಬೇಕು, ಎಲ್ಲಾ ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರು ಪೂರ್ಣ ಪ್ರಮಾಣದ ಲಸಿಕಾಕರಣ ಪಡೆದಿರುವುದನ್ನು ಖಚಿತಪಡಿಸಿಕೊಳ್ಳಬೇಕೆಂದು ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ರೈಲ್ವೆ ಮಾರ್ಗದ ಪಕ್ಕದಲ್ಲಿರುವ ವಲಸೆ ಮಕ್ಕಳಿಗೆ ಲಸಿಕೆ ಹಾಕಿಸಬೇಕು ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಮಿಷನ್ ಇಂದ್ರಧನುಷ್ 5.0 ಕಾರ್ಯಕ್ರಮದ ಕುರಿತು ಪ್ರಕಟಣೆ ಹೊರಡಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಜಿ.ಪ್ರಭು, ಮಹಾನಗರ ಪಾಲಿಕೆ ಆಯುಕ್ತೆ ಅಶ್ವಿಜ, ಡಿಹೆಚ್ಓ ಡಾ.ಮಂಜುನಾಥ್, ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ.ವೀಣಾ, ಆರ್ಸಿಹೆಚ್ ಅಧಿಕಾರಿ ಡಾ. ಕೇಶವರಾಜ್, ಟಿಹೆಚ್ಓ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!