ಕೈಗಾರಿಕೆಗಳಿಗೆ ಅನುಕೂಲ ಕಲ್ಪಿಸಲು ಬದ್ಧ

ಕೈಗಾರಿಕೋದ್ಯಮಿಗಳಿಗೆ ಜಿಲ್ಲಾಧಿಕಾರಿ ಶ್ರೀನಿವಾಸ್ ಭರವಸೆ

117

Get real time updates directly on you device, subscribe now.


ತುಮಕೂರು: ಜಿಲ್ಲೆಯ ಪ್ರಗತಿ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಕೈಗಾರಿಕೋದ್ಯಮಿಗಳ ಕೊಡುಗೆ ಪ್ರಮುಖವಾಗಿದ್ದು, ಎಲ್ಲಾ ರೀತಿಯಲ್ಲೂ ಅನುಕೂಲ ಕಲ್ಪಿಸಲು ಜಿಲ್ಲಾಡಳಿತ ಬದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಸಮಿತಿಯ ಅಧ್ಯಕ್ಷ ಕೆ.ಶ್ರೀನಿವಾಸ್ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಕೈಗಾರಿಕೋದ್ಯಮಿಗಳ ಕುಂದು ಕೊರತೆ, ಕೈಗಾರಿಕಾ ಸ್ಪಂದನ ಹಾಗೂ ಜಿಲ್ಲಾಮಟ್ಟದ ಕೈಗಾರಿಕೆಗಳ ಏಕ ಗವಾಕ್ಷಿ ಸಭೆಯ ಅಧ್ಯಕ್ಷತೆ ವಹಿಸಿ, ಕೈಗಾರಿಕೋದ್ಯಮಿಗಳ ಜೊತೆ ಸಮಾಲೋಚನೆ ನಡೆಸಿ, ಕೈಗಾರಿಕೆಗಳ ಕಾರ್ಯ ನಿರ್ವಹಣೆಯ ಕುರಿತು ಮಾಹಿತಿ ಪಡೆದು ಮಾತನಾಡಿದರು.

ಜಿಲ್ಲೆಯು ಅಪಾರವಾದ ನೈಸರ್ಗಿಕ ಸಂಪನ್ಮೂಲ ಹೊಂದಿದ್ದು, ಕೈಗಾರಿಕಾ ಅಭಿವೃದ್ಧಿಗೆ ಹೆಚ್ಚಿನ ಅವಕಾಶ ಹೊಂದಿದೆ, ಜಿಲ್ಲೆಯ ವಿದ್ಯಾವಂತ ನಿರುದ್ಯೋಗಿ ಯುವಕ, ಯುವತಿಯರಿಗೆ ಕೈಗಾರಿಕೆಗಳಿಂದ ಉತ್ತಮ ಉದ್ಯೋಗಾವಕಾಶ ದೊರೆಯಬೇಕು, ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸಲು ಉದ್ಯೋಗ ಮೇಳ ಅಯೋಜಿಸಿದ್ದು, ತುಮಕೂರು ಹಾಗೂ ಬೆಂಗಳೂರಿನ ಪ್ರಮುಖ 23 ಉದ್ದಿಮೆದಾರರು ಇದರಲ್ಲಿ ನೋಂದಾಯಿಸಿರುವುದು ಸಂತಸದ ವಿಷಯ, ಇವರಿಗೆ ವಿವಿಧ ಕೌಶಲ್ಯವುಳ್ಳ 1523 ನೌಕರರ ಅಗತ್ಯವಿದೆ, ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲಿ ರಸ್ತೆ, ವಿದ್ಯುತ್, ನೀರು ಸೇರಿದಂತೆ ಹಲವು ಮೂಲಭೂತ ಸೌಲಭ್ಯಗಳ ಗುಣಮಟ್ಟ ಹೆಚ್ಚಿಸಿ, ಮತ್ತಿತರ ಮೂಲಸೌಕರ್ಯ ಒದಗಿಸಿ ಕೈಗಾರಿಕೆಗಳಿಗೆ ಎಲ್ಲ ರೀತಿಯ ಅಗತ್ಯ ನೆರವು ನೀಡಲು ಜಿಲ್ಲಾಡಳಿತ ಶ್ರಮಿಸಲಿದೆ ಎಂದು ಹೇಳಿದರು.

ಜಿಲ್ಲೆಯ ವಾಣಿಜ್ಯೋದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ ಹಾಗೂ ಜಿಲ್ಲೆಯ ಶಾಸನ ಸಭೆಯ ಪ್ರತಿನಿಧಿಗಳ ನಿರ್ದೇಶನದಂತೆ ಸೆಪ್ಟೆಂಬರ್ 13 ರಂದು ಜಿಲ್ಲಾ ಮಟ್ಟದ ಬೃಹತ್ ಉದ್ದಿಮೆದಾರ ದುಂಡು ಮೇಜಿನ ಸಮಾವೇಶ ಆಯೋಜಿಸಲಾಗಿದ್ದು, ಇದರಲ್ಲಿ ಉದ್ದಿಮೆಗಳ ಬೆಳವಣಿಗೆಗೆ ಅವಶ್ಯವಿರುವ ಮಾಹಿತಿ ಪಡೆದು ಅದರಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು, 12 ಬೃಹತ್ ಉದ್ದಮೆದಾರರು 50 ಮಧ್ಯಮ ಕೈಗಾರಿಕೆಗಳು ಹಾಗು ಕೈಗಾರಿಕಾ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದು, ಪ್ರಮುಖ 10 ಯಶಸ್ವಿ ಉದ್ದಿಮೆಗಳ ಸಿಇಒ ಗಳನ್ನು ಸಮಾವೇಶದಲ್ಲಿ ಸನ್ಮಾನಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕೆಐಎಡಿಬಿಯ ಲಕ್ಷ್ಮೀಶ.ಡಿ. ಮಾತನಾಡಿ, ಸದರಿ ಕೈಗಾರಿಕಾ ಪ್ರದೇಶವು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದ್ದು, ಸರ್ವಿಸ್ ರಸ್ತೆಯಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳಲು ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇವರ ಅನುಮತಿ ಅವಶ್ಯಕತೆ ಇದೆ ಎಂದರು.
ಪ್ರಾಧಿಕಾರದ ಅಧಿಕಾರಿ ಮಾತನಾಡಿ, ಈ ಬಗ್ಗೆ ಸ್ಥಳ ಪರೀಶೀಲನೆ ಮಾಡಲಾಗುತ್ತಿದ್ದು ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದರು.
ಇದು ತುಂಬ ತಡವಾಗುತ್ತದೆ, ತಾತ್ಕಾಲಿಕ ಬದಲಿ ವ್ಯವಸ್ಥೆಗಾಗಿ ಕೆಐಎಡಿಬಿ ಅಭಿವೃದ್ಧಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಮಾತನಾಡಿ, ಕೈಗಾರಿಕೆಗಳು ಅಭಿವೃದ್ಧಿ ಶುಲ್ಕವನ್ನು ಸಂಬಂಧಿಸಿದ ಕೆಐಎಡಿಬಿ ಹಾಗೂ ಕೆಎಸ್ಎಸ್ಐಡಿ.ಸಿ ಇವರಿಗೆ ಸಲ್ಲಿಸುತ್ತಿದ್ದೇವೆ, ಈಗ ಮಹಾನಗರ ಪಾಲಿಕೆ ತುಮಕೂರು ಇವರು ನೋಟಿಸ್ ನೀಡಿ 2002 ರಿಂದಲೂ ಆಸ್ತಿ ತೆರಿಗೆ ಕಟ್ಟಲು ಒತ್ತಾಯ ಪಡಿಸುತ್ತಿದ್ದಾರೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಮಾತನಾಡಿ ಈ ಬಗ್ಗೆ ಪ್ರತ್ಯೇಕ ಸಭೆಯನ್ನು ಆಯುಕ್ತರು ಮಹಾನಗರ ಪಾಲಿಕೆ ಇವರು ನಡೆಸಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.
ಕುಣಿಗಲ್ ಕೈಗಾರಿಕಾ ಪ್ರದೇಶದ ಉದ್ಯಮಿಗಳ ಸಂಘದ ಅಧ್ಯಕ್ಷ ಮಾತನಾಡಿ, ನಗರವು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇದ್ದು ರಸ್ತೆ ದಾಟುವಲ್ಲಿ ಕಾರ್ಮಿಕರಿಗೆ ಹೆಚ್ಚಿನ ಅಪಘಾತ ಉಂಟಾಗುತ್ತಿವೆ, ರಸ್ತೆ ಮೇಲ್ಸೇತುವೆ ನಿರ್ಮಿಸಿಕೊಡಲು ವಿನಂತಿಸಿ, ಬೀದಿ ದೀಪಗಳ ಸೂಕ್ತ ವ್ಯವಸ್ಥೆ ಕಲ್ಪಿಸಲು ಕೋರಿದರು.

ಜಿಲ್ಲಾಧಿಕಾರಿಗಳು ಈ ಬಗ್ಗೆ ರಾಷ್ಟ್ರೀಯ ಪ್ರಾಧಿಕಾರದ ಅಧಿಕಾರಿಗಳ ಸಭೆ ಕರೆದು ಸಭೆಯಲ್ಲಿ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.
ವಸಂತನರಸಾಪುರ ಕೈಗಾರಿಕಾ ಪ್ರದೇಶದ ಕಾರ್ಯದರ್ಶಿ ಹರೀಶ್ ಮಾತನಾಡಿ, ಉದ್ದಮೆದಾರರು ಕೊಳವೆಬಾವಿ ಕೊರೆಯಲು ಅನುಮತಿ ಕೋರಿದರು. ಈ ಬಗ್ಗೆ ಗಣಿ ಮತ್ತು ಭೂಗರ್ಭ ಅಂತರ್ಜಲ ಇಲಾಖೆಯ ಅಧಿಕಾರಿಗಳಿಗೆ ಸಭೆ ಕರೆಯುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಉದ್ದಿಮೆದಾರರು ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆ ಬಗ್ಗೆ ಕ್ರಮ ಕೈಗೊಳ್ಳಬೇಕು ಹಾಗೂ ಕಾರ್ಮಿಕರ ಸುರಕ್ಷತೆ ಬಗ್ಗೆ ಅಗತ್ಯ ಭದ್ರತೆ ಒದಗಿಸಿ ಕ್ರಮವಹಿಸಲು ಪೊಲೀಸ್ ಇಲಾಖೆಗೆ ಜಿಲ್ಲಾಧಿಕಾರಿ ಸೂಚಿಸಿದರು.
ಕೈಗಾರಿಕಾ ಪ್ರದೇಶಕ್ಕೆ ಸಂಬಂಧಿಸಿದ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕೈಗಾರಿಕೆಗಳ ಬೆಳವಣಿಗೆ ಶ್ರಮಿಸಬೇಕು.

ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಗ್ರಾಮಿಣ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ತುಂಬಾ ಉಪಯುಕ್ತ ತೆರಿಗೆ ವಿಧಾನ ಅನುಸರಿಸಲಾಗುತ್ತಿದೆ, ಈ ಬಗ್ಗೆ ಕೈಗಾರಿಕೆಗಳ ಮಾಲೀಕರು ಯಾವುದಾದರು ಸಮಸ್ಯೆ ಇದ್ದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದ್ದು, ಗ್ರಾಮೀಣ ಕೈಗಾರಿಕೆಗಳು ಮತ್ತು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಭೆ ಆಯೋಜಿಸಿ ಸಮಸ್ಯೆಗಳಗೆ ಸ್ಪಂದಿಸುವುದಾಗಿ ತಿಳಿಸಿದರು.

ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ಮಾತನಾಡಿ, ಉದ್ದಿಮೆದಾರರು ಇಲಾಖಾ ಪೊರ್ಟಲ್ನಲ್ಲಿ ನೋಂದಾಯಿಸಿಕೊಂಡಲ್ಲಿ ಸೂಕ್ತ ಅಭ್ಯರ್ಥಿಗಳು ಆನ್ಲೈನ್ನಲ್ಲಿ ಲಭ್ಯವಾಗುತ್ತಾರೆ ಹಾಗೂ ಶಿಶಿಕ್ಷು ತರಬೇತಿಗೆ ಉದ್ದಮೆದಾರರು ನೋಂದಾಯಿಕೊಳ್ಳಲು ಕೋರಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಾದ ಅಶ್ವಿಜಾ, ಮಾಜಿ ಎಂಎಲ್ಎ ಶಫಿ ಅಹಮದ್, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ನಾಗರಾಜು ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!