ತುಮಕೂರು: ನಗರದ ಶ್ರೀಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಸಾಹೇ) ವಿಶ್ವ ವಿದ್ಯಾಲಯಕ್ಕೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ ಭೇಟಿ ನೀಡಿತ್ತು.
ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವ ವಿದ್ಯಾಲಯಗಳಿಗೆ ಶಿಕ್ಷಣ ಗುಣಮಟ್ಟದ ಬಗ್ಗೆ ಮಾನ್ಯತೆ ನೀಡುವ ಈ ಮಂಡಳಿ ಕಳೆದ ಮೂರು ದಿನಗಳ ಭೇಟಿಯಲ್ಲಿ ಶ್ರೀಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಸಾಹೇ) ವಿಶ್ವ ವಿದ್ಯಾಲಯದ ಅಡಿಯಲ್ಲಿ ಬರುವ ಶ್ರೀಸಿದ್ಧಾರ್ಥ ವೈದ್ಯಕೀಯ, ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮತ್ತು ಸಿದ್ಧಾರ್ಥ ತಾಂತ್ರಿಕ ಮಹಾ ವಿದ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಅಧ್ಯಕ್ಷರು ಸೇರಿದಂತೆ ಹೊರ ರಾಜ್ಯಗಳಿಂದ ಬಂದಿದ್ದ ಆರು ಪರಿಣಿತರನ್ನು ಒಳಗೊಂಡ ತಂಡ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ, ಶೈಕ್ಷಣಿಕ ಚಟುವಟಿಕೆ, ಕಾಲೇಜು ಮತ್ತು ಆಸ್ಪತ್ರೆಯಲ್ಲಿರುವ ಪ್ರಯೋಗಾಲಯ ಮತ್ತು ಅಗತ್ಯ ಇರುವ ಸೌಲಭ್ಯ ಪರಿಶೀಲಿಸಿತು, ಈ ವೇಳೆ ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರಿಂದ ವೈದ್ಯಕೀಯ, ತಾಂತ್ರಿಕ ಶಿಕ್ಷಣದ ಕೌಶಲ್ಯ, ಶೈಕ್ಷಣಿಕ ಪ್ರಗತಿ, ಸಂಶೋಧನಾ ಮತ್ತು ಅಭಿವೃದ್ಧಿ ಯೋಜನೆಗಳ ಬಗ್ಗೆ ಕೂಲಂಕಷ ಮಾಹಿತಿ ಪಡೆದರು, ವಿದ್ಯಾರ್ಥಿಗಳು, ಪೋಷಕರು ಹಳೆಯ ವಿದ್ಯಾರ್ಥಿಗಳು ಹಾಗೂ ನೌಕರ ವರ್ಗದವರೊಂದಿಗೆ ಸಂವಾದ ನಡೆಸಿ ಕಾಲೇಜಿನಲ್ಲಿ ಸಿಗುತ್ತಿರುವ ಶಿಕ್ಷಣ ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ಪ್ರತಿಕ್ರಿಯೆ ಪಡೆದರು.
ಸಾಹೇ ವಿಶ್ವ ವಿದ್ಯಾಲಯದಲ್ಲಿರುವ ಸೌಲಭ್ಯ ಮತ್ತು ಆಡಳಿತ ವ್ಯವಸ್ಥೆ, ದಾಖಲೆಗಳು, ಡಿಜಿಟಲ್ ಲೈಬ್ರರಿ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಹಾಸ್ಟೆಲ್, ಕ್ರೀಡಾ ಸಮುಚ್ಛಯ, ಆರೋಗ್ಯ ಕೇಂದ್ರ, ಸಮುದಾಯ ರೇಡಿಯೋ, ಟೆಲಿವಿಷನ್ ಸ್ಟುಡಿಯೋ ಸೇರಿದಂತೆ ಎಲ್ಲಾ ಮುಖ್ಯ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸೌಲಭ್ಯ ಹಾಗೂ ಪ್ರತಿ ಹಂತದ ಶೈಕ್ಷಣಿಕ ಚಟುವಟಿಕೆ ಪರಿಶೀಲಿಸಿದರು.
ಸಾಹೇ ವಿವಿ ಕುಲಾಧಿಪತಿ ಡಾ.ಜಿ.ಪರಮೇಶ್ವರ ಅವರು ನ್ಯಾಕ್ ತಂಡವನ್ನು ಸ್ವಾಗತಿಸಿದರು, ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ, ನುರಿತ ಪ್ರಾಧ್ಯಾಪಕರು, ಸಂಶೋಧಕರು, ಡಿಜಿಟಲ್ ಲೈಬ್ರರಿ, ವೈಫೈ ಕ್ಯಾಂಪಸ್ ಸೇರಿದಂತೆ ಉತ್ತಮ ಸೌಲಭ್ಯ, ಕಲಿಕಾ ಬೋಧನೆ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ, ಜೊತೆಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗುತ್ತಿದೆ, ವಿದ್ಯಾರ್ಥಿಗಳಿಗೆ ಉತ್ತಮ ತಾಂತ್ರಿಕ ಕಲಿಕಾ ಬೋಧನೆ ರೂಪಿಸಿಕೊಳ್ಳಲು ನೆರವಾಗುತ್ತಿದ್ದೇವೆ ಎಂದು ಅವರು ತಿಳಿಸಿದರು.
ಸಾಹೇ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ.ಕೆ.ಬಿ.ಲಿಂಗೇಗೌಡ, ರಿಜಿಸ್ಟ್ರಾರ್ ಡಾ.ಎಂ.ಝೆಡ್ ಕುರಿಯನ್, ಸಾಹೇ ಕುಲಾಧಿಪತಿ ಸಲಹೆಗಾರ ವಿವೇಕ್ ವೀರಯ್ಯ, ಸಾಹೇ ವಿಶ್ವವಿದ್ಯಾಲಯದ ಅಂಗ ಸಂಸ್ಥೆಗಳ ಪ್ರಾಂಶುಪಾಲರು, ಪ್ರಾಧ್ಯಾಪಕರು ಮತ್ತು ತಂಡದವರು ಅಗತ್ಯ ಮಾಹಿತಿಯನ್ನು ನ್ಯಾಕ್ ತಂಡಕ್ಕೆ ಒದಗಿಸಿದರು.
Comments are closed.