ತುಮಕೂರು: ನಗರದಲ್ಲಿ ಗುರುವಾರ ವಿಶಿಷ್ಟ ಕಾರ್ಯಕ್ರಮವೊಂದು ನಡೆಯಿತು, ಅದು ರೈಲಿನ ಬರ್ತ್ ಡೇ, ಸಾಮಾನ್ಯವಾಗಿ ಎಲ್ಲೂ ನಡೆಯದ ರೈಲಿನ ಹುಟ್ಟುಹಬ್ಬವನ್ನು ನಗರದ ತುಮಕೂರು- ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆ ಕಳೆದ ಹತ್ತು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದೆ.
ಉದ್ಯೋಗ ನಿಮಿತ್ತ ಬೆಂಗಳೂರಿಗೆ ಪ್ರತಿನಿತ್ಯ ಸಂಚರಿಸುವ ಉದ್ಯೋಗಿಗಳಿಗೆ ಅನುಕೂಲವಾಗಲೆಂದು ಬೆಳಗ್ಗೆ 8 ಕ್ಕೆ ತುಮಕೂರಿನಿಂದ ಬೆಂಗಳೂರಿಗೆ 2013ರ ಆಗಸ್ಟ್ 3 ರಂದು ಹೊಸ ರೈಲಿನ ಸಂಚಾರ ಆರಂಭಿಸಲಾಗಿತ್ತು, ಅಂದಿನಿಂದ ಪ್ರತಿ ವರ್ಷವೂ ರೈಲ್ವೆ ಪ್ರಯಾಣಿಕರ ವೇದಿಕೆ ಆಶ್ರಯದಲ್ಲಿ ರೈಲಿನ ಜನ್ಮದಿನ ಆಚರಿಸಿಕೊಂಡು ಬರಲಾಗುತ್ತಿದೆ.
ಗುರುವಾರ ಬೆಳ್ಳಂಬೆಳಗ್ಗೆಯೇ ನಿಲ್ದಾಣಕ್ಕೆ ಆಗಮಿಸಿದ ವೇದಿಕೆಯ ಪದಾಧಿಕಾರಿಗಳು ಮತ್ತು ಸದಸ್ಯರು ಪ್ರಯಾಣಿಕರ ಸಹಕಾರದೊಂದಿಗೆ ರೈಲಿಗೆ ಬಾಳೆ ಕಂದು, ಮಾವಿನ ಸೊಪ್ಪು ಕಟ್ಟಿ, ಹೂವಿನಿಂದ ಅಲಂಕರಿಸಿದರು, ಬಲೂನ್ ಬಂಟಿಂಗ್ಸ್ಗಳನ್ನೂ ಕಟ್ಟಿ ಖುಷಿಪಟ್ಟರು, ರೈಲಿನ ಪೈಲಟ್ ಸುಬ್ರಹ್ಮಣ್ಯಂ ಹಾಗೂ ಗಾರ್ಡ್ ಎಂ.ಆರ್.ಎಂ.ನಾಯ್ಡು, ರೈಲು ನಿಲ್ದಾಣದ ವ್ಯವಸ್ಥಾಪಕರಾದ ನಾಗರಾಜು ಅವರ ಮೂಲಕ ಕೇಕ್ ಕಟ್ ಮಾಡಿಸುವ ಮೂಲಕ ರೈಲಿನ ಜನ್ಮದಿನ ಆಚರಿಸಲಾಯಿತು, ವೇದಿಕೆ ಪದಾಧಿಕಾರಿಗಳು ಎಲ್ಲಾ ಪ್ರಯಾಣಿಕರಿಗೂ ಕೇಕ್ ವಿತರಿಸಿ ಸಂಭ್ರಮಿಸಿದರು.
ಚುಕುಬುಕು ರೈಲು ನಮ್ಮ ಜೀವನಾಡಿ
ಸಾವಿರಾರು ಜನರನ್ನು ಹೊತ್ತು ಸಾಗುವ ಚುಕುಬುಕು ರೈಲು ಪ್ರಯಾಣಿಕರ ಪಾಲಿನ ಅಚ್ಚುಮೆಚ್ಚು, ರೈಲಿನ ಹಾರನ್ ಮತ್ತು ಅದರ ಶಬ್ದ ಕೇಳೋದೆ ಒಂದು ಆನಂದ, ಬಸ್ ಪ್ರಯಾಣಕ್ಕಿಂತ ರೈಲು ಪ್ರಯಾಣ ಹೆಚ್ಚು ಆರಾಮದಾಯಕ ಮತ್ತು ಅಷ್ಟೇ ಸೇಫ್, ನಿಗದಿತ ಸಮಯಕ್ಕೆ ಸ್ಥಳ ಸೇರುವ ಟ್ರೈನ್ ಸೇರುವುದರಿಂದ ಟ್ರೈನ್ ನಂಬಿ ಸಾವಿರಾರು ಪ್ರಯಾಣಿಕರು ನಿತ್ಯ ಪ್ರಯಾಣ ಮಾಡುತ್ತಾರೆ, ನಾವು ಕೂಡ ಕಳೆದ ಹತ್ತು ಹರ್ಷದಿಂದ ಬೆಂಗಳೂರಿಗೆ ಕೆಲಸಕ್ಕೆ ಹೋಗುವುದರಿಂದ ನಾವು ಟ್ರೈನ್ ಪ್ರಯಾಣ ನಂಬಿಕೊಂಡಿದ್ದೇನೆ, ಬಹುತೇಕರು ಟ್ರೈನ್ನಲ್ಲಿ ಪ್ರಯಾಣಿಸುತ್ತಾ ಒಂದೇ ಕುಟುಂಬದಂತೆ ಸೇರುತ್ತೇವೆ, ರೈಲಿನಲ್ಲೇ ಒಟ್ಟಾಗಿ ಸೇರಿ ತಿಂಡಿ ತಿನ್ನುವುದು, ಸಂಜೆ ಕೆಲಸ ಮುಗಿಸಿ ವಾಪಸ್ ಒಟ್ಟಾಗಿ ಬರುವುದು ನಿತ್ಯದ ಕಾಯಕವಾಗಿದೆ, ಒಟ್ಟಾರೆ ಟ್ರೈನ್ ನಮ್ಮ ನಮ್ಮ ನಿತ್ಯದ ಜೀವನಾಡಿಯಾಗಿದೆ ಎಂದು ಪ್ರಯಾಣಿಕರು ಸಂಭ್ರಮ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವೇದಿಕೆ ಉಪಾಧ್ಯಕ್ಷ ಪರಮೇಶ್ವರ್, ಕಾರ್ಯದರ್ಶಿ ಕರಣಂ ರಮೇಶ್, ಜಂಟಿ ಕಾರ್ಯದರ್ಶಿ ಸಗರ ಚಕ್ರವರ್ತಿ, ರಘು ರಾಮಚಂದ್ರಯ್ಯ, ನಿರ್ದೇಶಕ ರಾಮಾಂಜನೇಯ, ದೀಪಕ್ ಮತ್ತು ಇತರ ನಿರ್ದೇಶಕರು, ಡಿಆರ್ಯುಸಿಸಿ ಸದಸ್ಯ ರಘೋತ್ತಮರಾವ್, ರೋಟರಿ ತುಮಕೂರು ಅಧ್ಯಕ್ಷ ಸಿ.ನಾಗರಾಜ್, ಕಾರ್ಯದರ್ಶಿ ವಿ.ಎಸ್.ಶಿವಕುಮಾರ ಸ್ವಾಮಿ, ಇನ್ನರ್ವ್ಹೀಲ್ ಅಧ್ಯಕ್ಷೆ ಭಾಗ್ಯಲಕ್ಷ್ಮಿ ನಾಗರಾಜ್ ಹಾಗೂ ರೈಲ್ವೆ ಸುರಕ್ಷಾ ಪಡೆ ಮತ್ತು ರೈಲ್ವೆ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.
Comments are closed.