ಸೆ.11ಕ್ಕೆ ರಾಷ್ಟ್ರೀಯ ಲೋಕ ಅದಾಲತ್

ಪ್ರಕರಣ ಬಗೆಹರಿಸಿಕೊಳ್ಳಲು ಇಲ್ಲಿದೆ ಅವಕಾಶ: ನ್ಯಾ.ಗೀತಾ

122

Get real time updates directly on you device, subscribe now.


ತುಮಕೂರು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿಗಳು ಮತ್ತು ಖಾಯಂ ಜನತಾ ನ್ಯಾಯಾಲಯಗಳಲ್ಲಿ ಜಿಲ್ಲೆಯಾದ್ಯಂತ ಸೆಪ್ಟಂಬರ್ 11 ರಂದು ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಗೀತಾ.ಕೆ.ಬಿ. ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಸುದ್ದಿಗೋಷ್ಠಿ ಮಾತನಾಡಿ, ಉಚ್ಛ ನ್ಯಾಯಾಲದ ನ್ಯಾಯಾಧೀಶರು ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ನ್ಯಾ.ಜಿ.ನರೇಂದರ್ ಅವರ ನಿರ್ದೇಶನಂತೆ ಜಿಲ್ಲೆಯಾದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಜನತಾ ನ್ಯಾಯಾಲಯ ಹಮ್ಮಿಕೊಳ್ಳಲಾಗದೆ ಎಂದರು.

ಪ್ರಾಚೀನ ಭಾರತ ಸಂಸ್ಕೃತಿಯಲ್ಲಿ ಲೋಕ ಆದಾಲತ್ ಪರಿಕಲ್ಪನೆ ಮೂಲ ಹುಡುಕಬಹುದಾಗಿದ್ದು, ಅಂದು ದೇಶದ ಎಲ್ಲಾ ಗ್ರಾಮಗಳಲ್ಲಿ ಪಂಚಾಯಿತಿ ವ್ಯವಸ್ಥೆ ಮೂಲಕ ಯಾವುದೇ ಶುಲ್ಕವಿಲ್ಲದೆ ತ್ವರಿತವಾಗಿ ತೀರ್ಪು ನೀಡಲಾಗುತ್ತಿತ್ತು, ಈ ವ್ಯವಸ್ಥೆ ಇಂದು ಕಾನೂನು ರೂಪ ಪಡೆದಿದೆ ಎಂದರು.

ಸೆಪ್ಟಂಬರ್ 11 ರಂದು ನಡೆಯುವ ಲೋಕ ಆದಾಲತ್ ಮೂಲಕ ಕಕ್ಷಿದಾರರು ರಾಜಿ ಅಥವಾ ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಸುಲಭವಾಗಿ ಮತ್ತು ಶೀಘ್ರವಾಗಿ ಯಾವುದೇ ಶುಲ್ಕವಿಲ್ಲದೇ ಇತ್ಯರ್ಥ ಪಡಿಸಿಕೊಳ್ಳಬಹುದು, ಇದರಿಂದ ನ್ಯಾಯಾಲಯದಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿ ನ್ಯಾಯಾಧೀಶರು ಹೆಚ್ಚು ಅವಶ್ಯಕತೆ ಇರುವಂತಹ, ಕಾನೂನಿನ ಸಂಕಿರ್ಣತೆ ಇರುವಂತಹ ಪ್ರಕರಣಗಳಿಗೆ ಹೆಚ್ಚು ಒತ್ತು ನೀಡಲು ಸಾಧ್ಯವಾಗುತ್ತದೆ, ಲೋಕ್ ಅದಾಲತ್ನಲ್ಲಿ ರಾಜಿಯಾದ ಪ್ರಕರಣಗಳ ಆದೇಶ ಅಂತಿಮವಾಗಿರುತ್ತದೆ, ಪ್ರಕರಣವು ಇತ್ಯರ್ಥವಾದ ಬಳಿಕ ಮೇಲ್ಮನವಿಗೆ ಅವಕಾಶ ಇರುವುದಿಲ್ಲ, ಸ್ವ ಪ್ರೇರಣೆಯಿಂದ ಮುಂದೆ ಬಂದು ತಮ್ಮ ವಿವಾದ ಬಗೆಹರಿಸಿಕೊಂಡಲ್ಲಿ ಸೌಹಾರ್ದಯುತವಾಗಿ ಜೀವನ ನಡೆಸಬಹುದಾಗಿದ್ದು, ಸಾರ್ವಜನಿಕರು ಮುಂಚಿತವಾಗಿ ಹತ್ತಿರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ತಾಲೂಕು ಕಾನೂನು ಸೇವೆಗಳ ಸಮಿತಿಗೆ ಭೇಟಿ ನೀಡಿ ತಮ್ಮ ಸಿವಿಲ್ ಪ್ರಕರಣ ಇತ್ಯರ್ಥ ಪಡಿಸಕೊಳ್ಳಬಹುದು, ಪ್ರಕರಣ ಇತ್ಯರ್ಥವಾದಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ಶುಲ್ಕವನ್ನು ಪೂರ್ಣ ಮರು ಪಾವತಿಸಲಾಗುವುದು, ಕಡಿಮೆ ಖರ್ಚಿನಲ್ಲಿ ಶೀಘ್ರ ತೀರ್ಮಾನಕ್ಕಾಗಿ ಇಂದೊಂದು ವಿಶೇಷ ಅವಕಾಶವಾಗಿದೆ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ನೂರುನ್ನೀಸ ಮಾತನಾಡಿ, ರಾಜ್ಯ ಸರ್ಕಾರ ಆದೇಶದ ರೀತ್ಯ ಪೊಲೀಸ್ ಇಲಾಖೆ ಇ-ಚಲನ್ಗಳ ಮೂಲಕ ಹಾಕಿರುವ ದಂಡದ ಮೊತ್ತದಲ್ಲಿ ಶೇ.50 ರಿಯಾಯಿತಿ ನೀಡಲಾಗಿದ್ದು, ಸಂಚಾರ ನಿಯಮ ಉಲ್ಲಂಘನೆಯ ದಂಡವನ್ನು ಸೆಪ್ಟಂಬರ್ 09 ರೊಳಗೆ ಸ್ವಯಂ ಪ್ರೇರಿತವಾಗಿ ಪಾವತಿಸಿದಲ್ಲಿ ಶೇ.50% ವಿನಾಯಿತಿ ನೀಡಲಾಗಿದ್ದು, ಇದರ ಸದೋಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.

ಲೋಕ ಆದಾಲತ್ ಸಾಧನೆ: ಜುಲೈ 09 ರಂದು ಆಯೋಜಿಸಲಾಗಿದ್ದ ಲೋಕ್ ಅದಾಲತ್ನಲ್ಲಿ ಜೆಲ್ಲೆಯಾದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 92,178 ಪ್ರಕರಣಗಳಲ್ಲಿ 11,790 ಪ್ರಕರಣ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ 1,59,265 ಪ್ರಕರಣ ವಿಲೇವಾರಿ ಮಾಡಲಾಗಿದೆ. ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣ ಮತ್ತು ವ್ಯಾಜ್ಯ ಪೂರ್ವ ಪ್ರಕರಣ ಸೇರಿ ಒಟ್ಟು ಪ್ರಕರಣ 1,71,055.
ಮಹಿಳಾ ಸಮಾನತೆ: 11 ಆಗಸ್ಟ್ 2020 ರಂದು ಮಾನ್ಯ ಸರ್ವೊಚ್ಚ ನ್ಯಾಯಾಲಯ ವಿನಿತಾ ಶರ್ಮ ಪ್ರಕರಣದಲ್ಲಿ ಐತಿಹಾಸಿಕ ತೀರ್ಪು ನೀಡಿದ್ದು ಹಿಂದೂ ಅವಿಭಕ್ತ ಕುಟುಂಬದಲ್ಲಿ ದಾಯಾದಿಯ ಮಗಳು, ಒಬ್ಬ ಮಗನ ರೀತಿಯಲ್ಲಿಯೇ ಹುಟ್ಟಿನಿಂದಲೇ ದಾಯಾದಿ ಆಸ್ತಿಯಲ್ಲಿ ಸಮಾನ ಹಕ್ಕು ಮತ್ತು ಹೊಣೆಗಾರಿಕೆ ಹೊಂದುತ್ತಾಳೆಂದು ಆದೇಶವಾಗಿರುತ್ತದೆ, ಆದ್ದರಿಂದ ನ್ಯಾಯಾಲಯಲ್ಲಿ ಬಾಕಿ ಇರುವ ವಿಭಾಗ ದಾವೆಗಳನ್ನು ಜನತಾ ನ್ಯಾಯಾಲಯದಲ್ಲಿ ಶೀಘ್ರದಲ್ಲಿ ರಾಜಿ ಮೂಲಕ ಇತ್ಯರ್ಥ ಪಡಿಸಿಕೊಳ್ಳಲು ಇದೊಂದು ಸದಾವಕಾಶ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರ ಕಚೇರಿ ದೂರವಾಣಿ 0816- 2255133 ಮತ್ತು 9141193959 ಅಥವಾ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಉಚಿತ ಸಹಾಯವಾಣಿ 1800-425-90900ಗೆ ಸಂಪರ್ಕಿಸಬಹುದು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನರಸಿಂಹಮೂರ್ತಿ, ಲತಾ ಮತ್ತಿತರು ಇದ್ದರು.

Get real time updates directly on you device, subscribe now.

Comments are closed.

error: Content is protected !!