ತುಮಕೂರು: ಬಹು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಮೂರು ಜಿಲ್ಲೆಗಳ ಮಹತ್ವದ ಬೇಡಿಕೆಯಾದ ತುಮಕೂರು, ಚಿತ್ರದುರ್ಗ, ದಾವಣಗೆರೆ ನೇರ ರೈಲು ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳೀಸಿ ಕಾಮಗಾರಿ ಪ್ರಾರಂಭಿಸಲು ನೂತನವಾಗಿ ವಿಧಾನಸಭೆಗೆ ಆಯ್ಕೆಯಾಗುವ ಈ ಭಾಗದ 20 ಮಂದಿ ಎಂಎಲ್ಎಗಳು ಮತ್ತು ಹಾಲಿ ಮೂವರು ಸಂಸದರು ಹಾಗೂ ಮಂತ್ರಿ ಮಹೋದಯರು ತಮ್ಮ ಇಚ್ಛಾಶಕ್ತಿ ಪ್ರದರ್ಶಿಸಬೇಕು, ಈ ರೈಲ್ವೆ ಯೋಜನೆಗೆ ತಮ್ಮ ಮೊದಲ ಆದ್ಯತೆ ನೀಡಬೇಕೆಂದು ಮೂರು ಜಿಲ್ಲೆಗಳ ರೈಲ್ವೆ ಹೋರಾಟಗಾರರು ಮತ್ತು ಸಾರ್ವಜನಿಕರ ಪರವಾಗಿ ಸಾಮಾಜಿಕ ಮತ್ತು ಸಬಲೀಕರ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಮತ್ತು ಸಹಕಾರ ಸಚಿವ ಕೆ.ಎನ್.ರಾಜಣ್ಣ ಮತ್ತು ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಅವರಿಗೆ ಸಾಮಾಜಿಕ ಹೋರಾಟಗಾರ ಮತ್ತು ಸವೋದಯ ಮಂಡಲದ ಜಿಲ್ಲಾಧ್ಯಕ್ಷ ಆರ್.ವಿ. ಪುಟ್ಟಕಾಮಣ್ಣ ನೇತೃತ್ವದಲ್ಲಿ ನೀಯೋಗ ತೆರಳಿ ಮನವಿ ಸಲ್ಲಿಸಲಾಯಿತು.
ಸಾರ್ವಜನಿಕರು ಹಾಗೂ ಮೂರು ಜಿಲ್ಲೆಯ ರೈಲ್ವೆ ಹೋರಾಟ ಸಮಿತಿಯ ಹೋರಾಟದ ಫಲವಾಗಿ ಈ ರೈಲ್ವೆ ಯೋಜನೆ 2010- 11ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಮಂಜೂರು ಮಾಡಿತ್ತು, 199.5 ಕಿ.ಮೀ ಉದ್ದವಿರುವ ಈ ಮಾರ್ಗಕ್ಕೆ 2248 ಎಕರೆ ಭೂಮಿ ಅಗತ್ಯವಿದ್ದು ಈ ರೈಲ್ವೆ ಯೋಜನೆಗೆ 960 ಕೋಟಿ ಅಂದಾಜು ವೆಚ್ಚದೊಂದಿಗೆ ಅನುಮೋದನೆಗೊಂಡಿತು, 2017ಕ್ಕೆ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡುವುದು ಯೋಜನೆಯ ಗುರಿಯಾಗಿತ್ತು.
ಆದರೆ ಈ ಯೋಜನೆ ಮಂಜೂರಾಗಿ 13 ವರ್ಷಗಳು ಕಳೆದರೂ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲ, ಕಾಮಗಾರಿ ಪ್ರಾರಂಭವಾಗಿಲ್ಲ, ಅದೇ ಆಂಧ್ರ ಪ್ರದೇಶದಲ್ಲಿ ತುಮಕೂರು- ರಾಯದುರ್ಗ ರೈಲ್ವೆ ಮಾರ್ಗ ಕರ್ನಾಟಕ ಗಡಿವರೆಗೆ ಪೂರ್ಣಗೊಳಿಸಲಾಗಿದೆ, ಆದರೆ ಕರ್ನಾಟಕದಲ್ಲಿ ಈ ಯೋಜನೆ ವೇಗ ಪಡೆದುಕೊಂಡಿರುವುದಿಲ್ಲ, ಈ ರೈಲ್ವೆ ಯೋಜನೆ ಅತ್ಯಂತ ಮಹತ್ವದ್ದಾಗಿದ್ದು, ಈ ಯೋಜನೆ ಅನುಷ್ಠಾನಗೊಂಡಲ್ಲಿ 70 ಕಿ.ಮೀ ದೂರ ಕಡಿಮೆಯಾಗಿ ಕಾಲ, ಹಣ, ಶ್ರಮ ಹಾಗೂ ಇಂಧನ ಉಳಿತಾಯವಾಗುತ್ತದೆ, ಈ ಯೋಜನೆ ಸುವರ್ಣ ಕಾರಿಡಾರ್ ಹಾಗೂ ಚಳ್ಳಕೆರೆ ಬಳಿ ಸ್ಥಾಪಿತವಾಗುತ್ತಿರುವ ಡಿಆರ್ಡಿಓ ಘಟಕಗಳಿಗೆ ಪೂರಕವಾಗಿದೆ, ಪ್ರಸ್ತಾಪಿತ ಯೋಜನಾ ಪ್ರದೇಶದಲ್ಲಿ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಕೈಗಾರಿಕೆಗಳು ವಿಜ್ಞಾನ ಸಂಸ್ಥೆಯ ವಿಸ್ತರಣಾ ಘಟಕ ಹಾಗೂ ಇಂಡಸ್ಟ್ರೀಯಲ್ ಟೌನ್ಶೀಪ್ 7000 ಎಕರೆ ಪ್ರದೇಶದಲ್ಲಿ ಪ್ರಾರಂಭವಾಗಲಿದೆ, ಅಲ್ಲದೆ ಹಿಂದುಳಿದ ಪ್ರದೇಶದ ಜನರಿಗೆ ಉದ್ಯೋಗ, ಸುಲಭ ಸಂಚಾರ ಸಾರಿಗೆ ಹಾಗೂ ಮಾರುಕಟ್ಟೆ ಸೌಲಭ್ಯ ಒದಗಿದಂತಾಗುತ್ತದೆ,
ಆದ್ದರಿಂದ ಈ ರೈಲ್ವೆ ಯೋಜನೆಯ ಮಾರ್ಗದಲ್ಲಿ ವಿಧಾನಸಭೆಗೆ ಆಯ್ಕೆಯಾಗುವ ನೂತನ ಸದಸ್ಯರು ಜಿಲ್ಲೆಯ ಸಂಸದರು ಹಾಗೂ ಮಂತ್ರಿ ಮಹೋದಯರು ಈ ಯೋಜನೆಗೆ ಪ್ರಥಮ ಆದ್ಯತೆ ನೀಡಿ ಒಂದೆರಡು ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳಲು ತಮ್ಮ ರಾಜಕೀಯ ಇಚ್ಛಾಶಕ್ತಿ ಪ್ರದರ್ಶೀಸಬೇಕೆಂದು ಒತ್ತಾಯಿಸಲಾಯಿತು.
ತುಮಕೂರು, ದಾವಣಗೆರೆ ನೇರ ರೈಲು ಮಾರ್ಗವು 2010- 11ರ ರೈಲ್ವೆ ಮುಂಗಡ ಪತ್ರದಲ್ಲಿ ಮಂಜೂರಾತಿ ಪಡೆದು ಅನುಮೋದನೆ ದೊರಕಿದೆ, ಈ ಯೋಜನೆಯ ಉದ್ದ 199.7 ಕಿ.ಮೀ ಇದೆ, ಈ ಯೋಜನೆಯ ಅಂದಿನ ಅಂದಾಜು ವೆಚ್ಚ 960 ಕೋಟಿ ರೂ., ರಾಜ್ಯ ಸರ್ಕಾರ ಆದೇಶ ಹೊರಡಿಸಿ ಈ ಯೋಜನೆ ವೆಚ್ಚದ ಶೇ.50 ರಷ್ಟು ಭಾಗ ಕೊಡುವುದಾಗಿ ಮತ್ತು ಯೋಜನೆಗೆ ಬೇಕಾದ ಭೂಮಿಯನ್ನು ಉಚಿತವಾಗಿ ಕೊಡಲು ಒಪ್ಪಿಕೊಂಡಿದೆ, ಈ ಯೋಜನೆ ಮಂಜೂರಾಗಿ 13 ವರ್ಷ ಕಳೆದಿದೆ, ಇದಕ್ಕೆ ಯೋಜನಾ ಆಯೋಗದ ಒಪ್ಪಿಗೆ ದೊರೆತಿದ್ದು ಅಂತಿಮ ಲೋಕೇಶನ್ ಕಾರ್ಯ ಪೂರ್ಣಗೊಂಡಿದೆ, ರೈಲ್ವೆ ಇಲಾಖೆಯು ಈ ಯೋಜನೆಗೆ ಬೇಕಾದ ಭೂಮಿ ವಿವರಗಳನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದು, ಭೂಮಿ ಹಸ್ತಾಂತರಿಸಬೇಕೆಂದು ಕೋರಿದೆ. 2017ಕ್ಕೆ ಲೋಕಾರ್ಪಣೆಗೊಳ್ಳಬೇಕಿದ್ದ ಈ ರೈಲ್ವೆ ಯೋಜನೆ ಮಂದಗತಿಯಲ್ಲಿ ಸಾಗಿದ್ದು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲ, ಕೂಡಲೇ ಎಲ್ಲಾ ಅಡೆತಡೆ ನಿವಾರಿಸಿ ಯೋಜನೆ ಅನುಷ್ಠಾನಕ್ಕೆ ಮುಂದಾಗಿ ಎಂದು ಒತ್ತಾಯಿಸಲಾಯಿತು.
ನಿಯೋಗದಲ್ಲಿ ಆರ್.ವಿ.ಪುಟ್ಟಕಾಮಣ್ಣ, ಎಂ.ಬಸವಯ್ಯ, ಸಿ.ಡಿ.ಚಂದ್ರಶೇಖರ್, ಎನ್.ಎಸ್.ಪಂಡಿತ್ಜವಹರ್, ಉಗಮ ಶ್ರೀನಿವಾಸ್, ಎಸ್.ಆರ್. ಸಂಜೀವಮೂರ್ತಿ, ಎಸ್.ಕೆ. ಕಾಂತಣ್ಣ ಶೋಭ ಜಯದೇವ್, ಹೆಚ್.ಎಲ್.ಕೃಷ್ಣಮೂರ್ತಿ, ವಸಂತ್ಕುಮಾರ್ ಇತರರು ಇದ್ದರು.
Comments are closed.