ಗೊಲ್ಲರಹಟ್ಟಿಯಲ್ಲಿದ್ದ ಬಾಣಂತಿ ಬಿಡುವ ಗುಡಿಸಲು ನಾಶ

ನ್ಯಾ.ಉಂಡಿ ಮಂಜುಳ ಶಿವಪ್ಪ ನೇತೃತ್ವದಲ್ಲಿ ಪೊಲೀಸರಿಂದ ಕಾರ್ಯಾಚರಣೆ

221

Get real time updates directly on you device, subscribe now.


ಗುಬ್ಬಿ: ಗುಬ್ಬಿ ತಾಲೂಕಿನ ಸಿ.ಎಸ್.ಪುರ ಹೋಬಳಿ ಯರ್ರನ ಹಟ್ಟಿ ಗೊಲ್ಲರಹಟ್ಟಿಯ ಊರಿನ ಹೊರಗೆ ಇದ್ದ ಬಾಣಂತಿ ಬಿಡುವ ಗುಡಿಸಲನ್ನು ನ್ಯಾಯಮೂರ್ತಿ ಉಂಡಿ ಮಂಜುಳಾ ಶಿವಪ್ಪ ಅವರು ಪೊಲೀಸರೊಂದಿಗೆ ಕಾರ್ಯಾಚರಣೆ ನಡೆಸಿ ನಾಶಪಡಿಸಲಾಯಿತು.

ಈ ವೇಳೆ ನ್ಯಾ.ಉಂಡಿ ಮಂಜುಳ ಶಿವಪ್ಪ ಮಾತನಾಡಿ, ಮೂಢನಂಬಿಕೆಯಿಂದ ಬಾಣಂತಿ ಹಾಗೂ ಹಸು ಗೂಸನ್ನು ಊರಿನ ಹೊರಗಿನ ಗುಡಿಸಲಿನಲ್ಲಿ ಇಡುವುದು ಅಕ್ಷಮ್ಯ ಹಾಗೂ ಕಾನೂನು ಬಾಹಿರ ಎಂದು ತಿಳಿಸಿದರು.
ಗೊಲ್ಲ ಸಮುದಾಯ ಮೂಢನಂಬಿಕೆಯನ್ನೇ ಸಂಪ್ರದಾಯ ಎಂದು ಭಾವಿಸಿರುವುದು ದುರಾದೃಷ್ಟಕರ, ಬಾಣಂತಿ- ಮಕ್ಕಳನ್ನು ಊರಿನ ಹೊರಗೆ ಇಡುವುದು ಅಮಾನವೀಯ, ಸಮುದಾಯವು ಮಾನವೀಯ ನೆಲೆಯಲ್ಲಿ ಯೋಚಿಸಬೇಕಿದೆ ಎಂದು ಹೇಳಿದರು.

ಆಧುನಿಕ ಜಗತ್ತಿನಲ್ಲಿ ಇನ್ನೂ ಮೂಢನಂಬಿಕೆ ಆಚರಣೆ ತರವಲ್ಲ, ಹಳೇ ಸಂಪ್ರದಾಯವನ್ನೇ ನಂಬಿ ಕೂರುವುದು ಒಳಿತಲ್ಲ, ಗೊಲ್ಲ ಸಮುದಾಯ ಮೂಢ ನಂಬಿಕೆ ತೊರೆದು ಅಭಿವೃದ್ಧಿ ಹೊಂದುವತ್ತ ಚಿಂತಿಸಬೇಕು, ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ತಿಳಿಸಿದರು.
ಸಮುದಾಯದ ಸುಶಿಕ್ಷಿತರು ಇಂತಹ ಮೂಢನಂಬಿಕೆಗಳ ಬಗ್ಗೆ ಸಮುದಾಯದವರಲ್ಲಿ ಜಾಗೃತಿ ಮೂಡಿಸಬೇಕಿದೆ, ತಾಲೂಕಿನ ಯಾವುದೇ ಭಾಗದಲ್ಲಿ ಇಂತಹ ಪ್ರಕರಣ ಕಂಡು ಬಂದಲ್ಲಿ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಇಂತಹ ಪದ್ಧತಿ ಹೆಣ್ಣಿನ ಮೇಲೆ ನಡೆಸುವ ಶೋಷಣೆಯಾಗಿದ್ದು ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮಸ್ಥರು ಹಲವಾರು ತಲೆಮಾರುಗಳಿಂದ ರೂಢಿಸಿಕೊಂಡು ಬಂದಿರುವ ಪದ್ಧತಿಯನ್ನು ಏಕಾಏಕಿ ಬಿಡಲು ಕಷ್ಟವಾದರೂ ಮುಂದೆ ಇಂತಹ ಪ್ರಕರಣ ನಡೆಯದಂತೆ ಎಚ್ಚರ ವಹಿಸುತ್ತೇವೆ, ಗೊಲ್ಲರ ಹಟ್ಟಿಗಳಲ್ಲಿ ಕಾನೂನು ಅರಿವು ಮೂಡಿಸಿದರೆ ಇಂತಹ ಪ್ರಕರಣ ಕಡಿಮೆಯಾಗಲು ಸಾಧ್ಯವಾಗಲಿದೆ ಎಂದು ಹೇಳಿದರು.

ಕಾರ್ಯಾಚರಣೆಯಲ್ಲಿ ಗುಬ್ಬಿ ಪಿಎಸ್ಐ ದೇವಿಕಾ ರಾಣಿ ಸೇರಿದಂತೆ ಪೊಲೀಸ್ ಸಿಬ್ಬಂದಿ, ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರದ ಸಿಬ್ಬಂದಿ ಭಾಗಿಯಾಗಿದ್ದರು.

Get real time updates directly on you device, subscribe now.

Comments are closed.

error: Content is protected !!