ತುಮಕೂರು: ಕುಸಿದಿರುವ ಕೊಬ್ಬರಿ ಬೆಲೆ ಹೆಚ್ಚಳದ ಬಗ್ಗೆ ಸಂಸತ್ ಸದಸ್ಯರು ಅಧಿವೇಶನದಲ್ಲಿ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿ ಸಂಯುಕ್ತ ಹೋರಾಟ- ಕರ್ನಾಟಕ ವತಿಯಿಂದ ನಗರದ ಸಂಸದರ ಕಚೇರಿ ಇರುವ ಜಿಲ್ಲಾಧಿಕಾರಿಗಳ ಕಚೇರಿ ಬಳಿ ವಿವಿಧ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಸಂಯುಕ್ತ ಹೋರಾಟ- ಕರ್ನಾಟಕ ತುಮಕೂರು ಜಿಲ್ಲಾ ಘಟಕದ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ವಿವಿಧ ರೈತಪರ ಸಂಘಟನೆಗಳು ಮುಖಂಡರು, ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ ಕ್ವಿಂಟಾಲ್ಗೆ 20 ಸಾವಿರ ರೂ. ನೀಡಬೇಕು.ಹೋಬಳಿಗೊಂದು ನ್ಯಾಫೆಡ್ ಕೇಂದ್ರಗಳನ್ನು ತೆರೆದು ವರ್ಷವಿಡಿ ಕೊಬ್ಬರಿ ಖರೀದಿಸ ಬೇಕೆಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಕೊಬ್ಬರಿ ಬೆಲೆ ತೀವ್ರವಾಗಿ ಕುಸಿದಿದ್ದು, ಬೆಂಬಲ ಬೆಲೆಗಿಂತಲೂ ಕಡಿಮೆ ಅಂದರೆ 7500 ರೂ. ಗಳಿಗೆ ಕ್ವಿಂಟಾಲ್ ಕೊಬ್ಬರಿ ಖರೀದಿಸಲಾಗುತ್ತಿದೆ, ತೋಟಗಾರಿಕಾ ಇಲಾಖೆಯೇ ಕೃಷಿ ಉತ್ಪನ್ನಗಳ ಬೆಲೆ ನಿಗದಿ ಆಯೋಗ ನೀಡಿರುವ ವರದಿಯ ಪ್ರಕಾರ ಒಂದು ಕ್ವಿಂಟಾಲ್ ಕೊಬ್ಬರಿ ಬೆಳೆಯಲು 16730 ರೂ ಖರ್ಚಾಗುತ್ತದೆ.ಡಾ.ಎಂ.ಎಸ್.ಸ್ವಾಮಿನಾಥನ್ ಆಯೋಗದ ವರದಿ ಅನ್ವಯ ಉತ್ಪಾದನಾ ವೆಚ್ಚ +ಶೇ.50ರ ಲಾಭ ಸೇರಿ ಬೆಂಬಲ ಬೆಲೆ ನಿಗದಿ ಪಡಿಸಬೇಕಾಗಿದೆ, ಇದರ ಪ್ರಕಾರ ಒಂದು ಕ್ವಿಂಟಾಲ್ ಕೊಬ್ಬರಿಗೆ ಕನಿಷ್ಠ 25000 ರೂ. ನೀಡಬೇಕಾಗುತ್ತದೆ, ಕೇಂದ್ರ ಸರಕಾರ ಕೂಡಲೇ ವೈಜ್ಞಾನಿಕ ಬೆಂಬಲ ಬೆಲೆ ಘೋಷಿಸಬೇಕು ಹಾಗೂ ವರ್ಷವಿಡಿ ನ್ಯಾಫೆಡ್ ಮೂಲಕ ಕೊಬ್ಬರಿ ಖರೀದಿ ಮಾಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದರು.
ರಾಜ್ಯದಿಂದ ಸುಮಾರು 28 ಜನ ಸಂಸದರು ಆಯ್ಕೆಯಾಗಿದ್ದರೂ ಯಾರೊಬ್ಬರು ಕೊಬ್ಬರಿ ದರ ಕುಸಿತದ ಬಗ್ಗೆ ಅಧಿವೇಶನದಲ್ಲಿ ಮಾತನಾಡುತ್ತಿಲ್ಲ, ಸುಮಾರು 15 ಜಿಲ್ಲೆಗಳ ಸಂಸದರು ಈ ಬಗ್ಗೆ ಚಕಾರವೆತ್ತುತ್ತಿಲ್ಲ, ಹಾಗಾಗಿ ಈ ಅಧಿವೇಶನದಲ್ಲಿ ಕೊಬ್ಬರಿ ದರ ಕುಸಿತದ ಬಗ್ಗೆ ಸಂಸದರು ಚರ್ಚಿಸಬೇಕು, ಅಲ್ಲದೆ ಶೂನ್ಯ ತೆರಿಗೆ ಅಡಿಯಲ್ಲಿ ನೆರೆ ಹೊರೆಯ ದೇಶಗಳಿಂದ ರಫ್ತಾಗುತ್ತಿರುವ ಖಾದ್ಯ ತೈಲ ಮತ್ತು ತೆಂಗಿನ ಉತ್ಪನ್ನಗಳನ್ನು ತಡೆ ಹಿಡಿಯುವಂತೆ ಸರಕಾರದ ಮೇಲೆ ಒತ್ತಡ ತರಬೇಕೆಂಬುದು ನಮ್ಮ ಹೋರಾಟವಾಗಿದೆ, ಇದರ ಭಾಗವಾಗಿಯೇ ಇಂದು ರಾಜ್ಯದ ಎಲ್ಲಾ ಸಂಸದ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗುತ್ತಿದೆ ಎಂದು ಎ.ಗೋವಿಂದರಾಜು ತಿಳಿಸಿದರು.
ಸಂಯುಕ್ತ ಹೋರಾಟ-ಕರ್ನಾಟಕದದ ತುಮಕೂರು ಜಿಲ್ಲಾ ಸಂಚಾಲಕ ಸಿ.ಯತಿರಾಜು ಮಾತನಾಡಿ, ತಾಳೆ ಎಣ್ಣೆ ಮತ್ತು ಖಾದ್ಯ ತೈಲಗಳ ಯತ್ತೇಚ್ಚ ಆಮದಿನ ಫಲವಾಗಿ ಇಂದು ಕೊಬ್ಬರಿ ಬೆಲೆ ಕುಸಿದಿದೆ, ಹಾಗಾಗಿ ಕೇಂದ್ರ ಸರಕಾರ ಕೂಡಲೇ ಶೂನ್ಯ ತೆರಿಗೆಯಲ್ಲಿ ಆಮದಾಗುತ್ತಿರುವ ಎಣ್ಣೆ ಕಾಳು ಮತ್ತು ಕೊಬ್ಬರಿ ಎಣ್ಣೆಯನ್ನು ಸಂಪೂರ್ಣ ನಿಷೇಧಿಸಬೇಕು, ಹಾಗೆಯೇ ರಾಜ್ಯದ ವಿಷಯದಲ್ಲಿ ಬರುವ ಕೃಷಿಯ ಸಂಪೂರ್ಣ ಜವಾಬ್ದಾರಿಯನ್ನು ರಾಜ್ಯಕ್ಕೆ ಬಿಡಬೇಕು, ಹಾಗಾದಾಗ ಮಾತ್ರ ಪ್ರಕಾಶ್ ಕಮ್ಮರಡಿ ಅವರ ಕೃಷಿ ಬೆಲೆ ನಿಗದಿ ಆಯೋಗದ ವರದಿ ಜಾರಿಗೆ ಬರಲು ಸಾಧ್ಯ ಎಂದರು.
ಕೊಬ್ಬರಿ ದರ ಕುಸಿತದ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ತೆಂಗು ಸೇರಿದಂತೆ ಒಟ್ಟಾರೆ ರೈತರ ಸ್ಥಿತಿ ಚಿಂತಾಜನಕವಾಗಿದೆ, ಅಣಬೆ ರೋಗ, ಸುಳಿಕೊಳೆ ರೋಗಗಳಿಗೆ ತುತ್ತಾಗಿ ಶೇ.25 ರಷ್ಟು ಬೆಳೆ ಹಾಳಾಗಿದೆ, ಈ ಕುರಿತು ಕೇಂದ್ರ ಕೃಷಿ ಮಂತ್ರಿ ಮತ್ತು ಕೃಷಿ ಮಾರುಕಟ್ಟೆ ಮಂತ್ರಿ ಶೋಭ ಕರಂದ್ಲಾಜೆ ಅವರೊಂದಿಗೆ ಮಾತನಾಡಿದ್ದೇನೆ, ಕೊಕನೆಟ್ ಬೋರ್ಡ್ ಕೂಡ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ, ಹಾಗಾಗಿ ನಿಮ್ಮ ಮನವಿಯ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಕೆಪಿಆರ್ಎಸ್ನ ಬಿ.ಉಮೇಶ್, ಅಜ್ಜಪ್ಪ, ಚನ್ನಬಸಣ್ಣ, ಗಿರೀಶ್, ಶಂಕರಪ್ಪ, ದೇವರಾಜು, ಸಿಐಟಿಯುನ ಸೈಯದ್ ಮುಜೀಬ್ ಸೇರಿದಂತೆ ಹಲವರು ಹೋರಾಟದಲ್ಲಿ ಪಾಲ್ಗೊಂಡಿದ್ದರು.
Comments are closed.