ತುಮಕೂರು: ತುಮಕೂರು ವಿಶ್ವ ವಿದ್ಯಾಲಯದ 16ನೇ ವಾರ್ಷಿಕ ಘಟಿಕೋತ್ಸವ ಆಗಸ್ಟ್ 07 ರ ಸೋಮವಾರ ಬೆಳಗ್ಗೆ 11 ಗಂಟೆಗೆ ವಿಶ್ವವಿದ್ಯಾನಿಲಯದ ಡಾ.ಶಿವಕುಮಾರ ಮಹಾ ಸ್ವಾಮೀಜಿ ಸಭಾಂಗಣದಲ್ಲಿ ಜರುಗಲಿದೆ ಎಂದು ತುಮಕೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕದ ಘನತೆವೆತ್ತ ರಾಜ್ಯಪಾಲರೂ, ತುಮಕೂರು ವಿಶ್ವವಿದ್ಯಾಲಯದ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ, ಉನ್ನತ ಶಿಕ್ಷಣ ಸಚಿವ, ತುಮಕೂರು ವಿಶ್ವ ವಿದ್ಯಾಲಯದ ಸಮ ಕುಲಾಧಿಪತಿಗಳೂ ಆಗಿರುವ ಡಾ.ಎಂ.ಸಿ.ಸುಧಾಕರ್ ಉಪಸ್ಥಿತರಿರುವರು, ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಸಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಘಟಿಕೋತ್ಸವ ಭಾಷಣ ನೆರವೇರಿಸಲಿರುವರು, ಕುಲಸಚಿವರಾದ ನಾಹಿದಾ ಜಮ್ ಜಮ್ ಉಪಸ್ಥಿತರಿರುವರು ಎಂದರು.
ತುಮಕೂರಿನ ಸಮಾಜ ಸೇವಕ ಆರ್.ಎಲ್. ರಮೇಶ್ ಬಾಬು ಹಾಗೂ ಕನ್ನಡ ಚಿತ್ರ ನಿರ್ದೇಶಕ ಟಿ.ಎಸ್.ನಾಗಭರಣ ಅವರಿಗೆ ಈ ಘಟಿಕೋತ್ಸವದ ಸಂದರ್ಭದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಈ ಬಾರಿಯ ಘಟಿಕೋತ್ಸವದಲ್ಲಿ 5 ಅಭ್ಯರ್ಥಿಗಳು ಡಿಲಿಟ್ ಪದವಿ, 78 ಅಭ್ಯರ್ಥಿಗಳು ಪಿಎಚ್ಡಿ ಪದವಿ, 1517 ಅಭ್ಯರ್ಥಿಗಳು ಸ್ನಾತಕೋತ್ತರ ಹಾಗೂ 8756 ಅಭ್ಯರ್ಥಿಗಳು ಸ್ನಾತಕ ಪದವಿ ಪಡೆಯಲು ಅರ್ಹರಾಗಿರುತ್ತಾರೆ.
ವಿಶ್ವ ವಿದ್ಯಾಲಯವು ಎಲ್ಲಾ ಸ್ನಾತಕೋತ್ತರ ಪದವಿಗಳಿಗೆ ತಲಾ ಐದು ರ್ಯಾಂಕ್, ಬಿಎ, ಬಿಎಸ್ಡಬ್ಲ್ಯೂ, ಎಸ್ಸಿ, ಬಿಕಾಂ, ಬಿಬಿಎಂ, ಬಿಇಡಿ (ಸೆಮಿಸ್ಟರ್ ಪದ್ಧತಿ) ಗಳಿಗೆ ತಲಾ ಹತ್ತು ರ್ಯಾಂಕ್, ಬಿಎಫ್ಎ, ಬಿವಿಎ ಹಾಗೂ ಬಿಎ ಇಂಟಗ್ರೇಟೆಡ್ ಕನ್ನಡ ಪಂಡಿತ್ಗೆ ತಲಾ ಒಂದು ರ್ಯಾಂಕ್ ಘೋಷಿಸಿದೆ, ಒಟ್ಟು 80 ವಿದ್ಯಾರ್ಥಿಗಳಿಗೆ 99 ಚಿನ್ನದ ಪದಕ ಹಾಗೂ ಹತ್ತು ನಗದು ಬಹುಮಾನಗಳನ್ನು ವಿಶ್ವ ವಿದ್ಯಾನಿಲಯವು ಈ ಬಾರಿಯ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಿದೆ ಎಂದು ವಿವರ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕುಲಸಚಿವರಾದ ನಾಹಿದಾ ಜಮ್ ಜಮ್ ಇದ್ದರು.
ರಮೇಶ್ಬಾಬುಗೆ ಡಾಕ್ಷರೇಟ್ ನೀಡುವುದಕ್ಕೆ ಅಪಸ್ವರ
ತುಮಕೂರಿನಲ್ಲಿ ಸಮಾಜ ಸೇವೆ ಮೂಲಕ ಗುರ್ತಿಸಿಕೊಂಡಿರುವ ಉದ್ಯಮಿ ಆರ್.ಎಲ್. ರಮೇಶ್ ಬಾಬು ಅವರಿಗೆ ಗೌರವ ಡಾಕ್ಟರೇಟ್ ನೀಡುತ್ತಿರುವುದಕ್ಕೆ ಅಪಸ್ವರ ವ್ಯಕ್ತವಾಗಿದೆ.
ರಮೇಶ್ ಬಾಬು ಮತ್ತು ಕುಲಪತಿ ತುಮಕೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಒಂದೇ ಜಾತಿಯವರಾಗಿದ್ದು, ತಮ್ಮ ಜಾತಿಯವರನ್ನು ಗುರ್ತಿಸಿ ಡಾಕ್ಟರೇಟ್ ಕೊಡಿಸಲಾಗಿದೆ ಎಂಬ ಆಪಾದನೆ ಕೇಳಿ ಬಂದಿದೆ.
Comments are closed.