ಕಾಂಗ್ರೆಸ್ ಸರ್ಕಾರ ಇರೋದೆ ಬಡವರಿಗೋಸ್ಕರ: ಪರಂ

ತುಮಕೂರಿನಲ್ಲಿ ಶೂನ್ಯ ಬಿಲ್ ವಿತರಿಸಿ ಗೃಹಜ್ಯೋತಿಗೆ ಚಾಲನೆ

153

Get real time updates directly on you device, subscribe now.


ತುಮಕೂರು: ರಾಜ್ಯದ ಮಹತ್ವಾಕಾಂಕ್ಷಿ ಯೋಜನೆ ಗೃಹಜ್ಯೋತಿಯನ್ನು ಸಿಎಂ ಉದ್ಘಾಟಿಸಿದ್ದಾರೆ, ಅದೇ ರೀತಿ ತುಮಕೂರು ಜಿಲ್ಲೆಯಲ್ಲೂ ಉದ್ಘಾಟಿಸುತ್ತಿರುವುದು ಸಂತಸ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ನಗರದ ಎಂಪ್ರೆಸ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಗೃಹಜ್ಯೋತಿ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿ, ಈ ಯೋಜನೆ ಎಲ್ಲಾ ವರ್ಗದವರಿಗೆ ಅನುಕೂಲವಾಗಲಿದೆ, ಅದರಲ್ಲೂ ಬಡವರಿಗೆ ಹೆಚ್ಚು ಸಹಾಯವಾಗಲಿದೆ ಎಂದರು.

ಕಾಂಗ್ರೆಸ್ ಪಕ್ಷ ಪ್ರಣಾಳಿಕೆ ರಚಿಸುವಾಗ ಐದು ಪ್ರಮುಖ ವಿಚಾರಗಳ ಬಗ್ಗೆ ಚಿಂತನೆ ಮಾಡಿದೆವು, ಬಡತನ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಐದು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದೆವು, ಜನರು ನಮಗೆ ಅಧಿಕಾರ ನೀಡಿದರು, ನಾವು ನುಡಿದಂತೆ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ ಎಂದರು.

ಹಿಂದೆ ಲ್ಯಾಂಟೀನ್, ಸೀಮೆಎಣ್ಣೆ ಬುಡ್ಡಿ ಇಟ್ಟುಕೊಂಡು ಓದಿದೆವು, ಬದಲಾದ ಕಾಲಘಟ್ಟದಲ್ಲಿ ವಿದ್ಯುತ್ ಚ್ಛಕ್ತಿ ಉತ್ಪಾದನೆ ಶುರುವಾಯಿತು, ವಿದ್ಯುತ್ ಪ್ರತಿ ಮನೆಯ ಬೆಳಕಾಗಿದೆ, ಇಡೀ ಕುಟುಂಬದ ಬದುಕಿನ ಬೆಳಕಾಗಿದೆ, ಆದರೆ ಬೇರೆ ಬೇರೆ ಕಾರಣದಿಂದು ಇಂದು ವಿದ್ಯುತ್ ಬಿಲ್ ಹೆಚ್ಚಾಗುತ್ತಲೇ ಇದೆ, ಬಡವರಿಗೆ ವಿದ್ಯುತ್ ಬಿಲ್ ಬರಿಸುವುದು ಕಷ್ಟವಾಗುತ್ತಿತ್ತು, ಇದನ್ನು ಮನಗಂಡು ಬಡವರಿಗೆ ಅನುಕೂಲ ಕಲ್ಪಿಸಲು ಇನ್ನೂರು ಯೂನಿಟ್ ವಿದ್ಯುತ್ ಘೋಷಿಸಿ ಈಗ ಅನುಷ್ಠಾನಕ್ಕೆ ತರಲಾಗಿದೆ ಎಂದರು.

ಅದೇ ರೀತಿ ಎರಡನೆಯದ್ದು ಶಕ್ತಿ ಯೋಜನೆ ಜಾರಿಗೆ ತಂದು ಎಲ್ಲಾ ವರ್ಗದ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅನುಕೂಲ ಕಲ್ಪಿಸಲಾಗಿದೆ, ಪ್ರತಿದಿನ ಐವತ್ತು ಲಕ್ಷ ಮಹಿಳೆಯರು ಪ್ರಯಾಣ ಮಾಡಿದ್ದಾರೆ, ಪ್ರವಾಸಿ ತಾಣ, ಪುರಾತನ ದೇವಾಲಯಗಳಿಗೆ ಹೋಗಿ ದೇವರ ದರ್ಶನ ಪಡೆಯುತ್ತಿದ್ದಾರೆ, ಇದು ಒಂದು ಕ್ರಾಂತಿಯೇ ಸರಿ ಎಂದರು.

ಇದಲ್ಲದೆ ಗೃಹ ಲಕ್ಷ್ಮಿ ಯೋಜನೆ ಜಾರಿಗೆ ತಂದು ಮನೆಯ ಯಜಮಾನಿಗೆ ಎರಡು ಸಾವಿರ ನೀಡುವ ಕೆಲಸ ಮಾಡಿದ್ದೇವೆ, ಈ ಹಣದಿಂದ ಮನೆಯ ಖರ್ಚು ತೂಗಿಸಿಕೊಳ್ಳಲಿ ಎಂಬ ನಿಟ್ಟಿನಲ್ಲಿಅಕೌಂಟ್ಗೆ ಹಣ ಹಾಕುತ್ತಿದ್ದೇವೆ, ಒದರಿಂದ ಮನೆ ಯಜಮಾನಿ ಮನೆಗೆ ಬೇಕಾದ ಅಗತ್ಯ ವಸ್ತು ಕೊಳ್ಳಲು ನೆರವಾಗಿದೆ ಎಂದರು.

ಇನ್ನು ಆಹಾರ ಪ್ರತಿ ಪ್ರಜೆಯ ಹಕ್ಕು, ಇದನ್ನು ಮನಗಂಡು ನಾವು ಅನ್ನಭಾಗ್ಯ ಮೂಲಕ ಹತ್ತು ಕೆಜಿ ನೀಡಲು ಚಿಂತನೆ ನಡೆಸಿದೆವು, ಆದರೆ ಕೇಂದ್ರ ಸರ್ಕಾರ ಅಕ್ಕಿ ಕೊಡಲು ಒಪ್ಪಿ ನಂತರ ತಿರಸ್ಕರಿಸಿತು, ಆದರೆ ಹೆಚ್ಚುವರಿ ಅಕ್ಕಿ ನೀಡದ ಕಾರಣ ನಾವು ಜನರಿಗೆ ಕೊಟ್ಟ ಮಾತಿನಂತೆ ಅಕ್ಕಿ ಬದಲಾಗಿ ಐದು ಕೆಜಿಗೆ ಹಣ ನೀಡುತ್ತಿದ್ದೇವೆ, ಇಲ್ಲಿಯೂ ನುಡಿದಂತೆ ನಡೆದಿದ್ದೇವೆ ಎಂದರು.

ನಮ್ಮ ಯುವಕರು ಹೆಚ್ಚು ಓದಿದುತ್ತಿದ್ದಾರೆ, ಪದವೀಧರರಾಗಿ ಹೊರ ಹೊಮ್ಮುತ್ತಿದ್ದಾರೆ, ಆದರೆ ಕೆಲಸವಿಲ್ಲದಂತಾಗಿದೆ, ಕೆಲಸಕ್ಕೆ ಹೋಗುವವರೆಗೂ ಪದವೀಧರನಿಗೆ ಮೂರು ಸಾವಿರ, ಡಿಪ್ಲೋಮಾ ಮಾಡಿದವರಿಗೆ ಒಂದುವರೆ ಸಾವಿರ ನೀಡುವುದಾಗಿ ಹೇಳಿದ್ದೇವೆ, ಅದನ್ನು ನೀಡುತ್ತೇವೆ ಎಂದರು.

ನಮ್ಮ ಯೋಜನೆಗಳ ಬಗ್ಗೆ ವಿರೋಧ ಪಕ್ಷದವರು ಟೀಕೆ ಮಾಡಿದರು, ರಾಜ್ಯದಲ್ಲಿ ಆರ್ಥಿಕ ದಿವಾಳಿಯಾಗಲಿದೆ ಎಂದು ಆಪಾದಿಸಿದರು, ನಮ್ಮ ಯೋಜನೆಗೆ 36 ಸಾವಿರ ಕೋಟಿ ಬೇಕಿದೆ, ನಾವು ಅದನ್ನು ಒದಗಿಸಿದ್ದೇವೆ, ಮುಂದಿನ ವರ್ಷಕ್ಕೆ 52 ಸಾವಿರ ಕೋಟಿ ಬೇಕಿದೆ, ಅದನ್ನು ಬಜೆಟ್ನಲ್ಲಿ ನೀಡುತ್ತೇವೆ, ನಮ್ಮ ಕಾಂಗ್ರೆಸ್ ಸರ್ಕಾರ ಇರೋದೆ ಬಡವರಿಗೋಸ್ಕರ, ಬಡವರ ಮೇಲೆತ್ತುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಇದೇ ವೇಳೆ ಫಲಾನುಭವಿಗಳಿಗೆ ಶೂನ್ಯ ವಿದ್ಯುತ್ ಬಿಲ್ ವಿತರನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಮೇಯರ್ ಪ್ರಭಾವತಿ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಪಂ ಸಿಇಒ ಪ್ರಭು, ಪಾಲಿಕೆ ಆಯುಕ್ತೆ ಅಶ್ಚಿಜಾ, ಎಸ್ಪಿ ರಾಹುಲ್ ಕುಮಾರ್, ಮಾಜಿ ಶಾಸಕ ರಫಿಕ್ ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!