ತುಮಕೂರು: ವೈದ್ಯಕೀಯ ಸೇವೆಗೆ ವಿಶ್ವ ದರ್ಜೆಯ ತಂತ್ರಜ್ಞಾನ ಪರಿಚಯಿಸುವಲ್ಲಿ ಸದಾ ಮುಂದಿರುವ ಸಿದ್ಧಗಂಗಾ ಆಸ್ಪತ್ರೆ ಇದೀಗ ಹೃದ್ರೋಗ ವಿಭಾಗದಲ್ಲಿ ಒಸಿಟಿ ತಂತ್ರಜ್ಞಾನ ಬಳಕೆ ಮಾಡುತ್ತಿರುವುದು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಎಂದು ಖ್ಯಾತ ಹಿರಿಯ ಹೃದ್ರೋಗ ತಜ್ಞ ಡಾ.ಪ್ರಭಾಕರ್ ಕೋರೆಗಲ್ ತಿಳಿಸಿದರು.
ನಗರದ ಸಿದ್ಧಗಂಗಾ ಆಸ್ಪತ್ರೆಯಲ್ಲಿ ನಡೆದ ಹೃದ್ರೋಗ ಸಮಸ್ಯೆಗಳಿಗೆ ಒಸಿಟಿ ಟೆಕ್ನಾಲಜಿ ಬಳಕೆಗೆ ಚಾಲನೆ ಹಾಗೂ ಶಸ್ತ್ರ ಚಿಕಿತ್ಸೆಯ ನೇರ ಪ್ರಸಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಒಸಿಟಿ ತಂತ್ರಜ್ಞಾನ ಹೃದ್ರೋಗಿಗಳಿಗೆ ಹೊಸ ಭರವಸೆಯಾಗಿದ್ದು, ತ್ವರಿತ, ನಿಖರ, ಪರಿಣಾಮಕಾರಿ ಚಿಕಿತ್ಸೆಗೆ ಬಳಕೆಯಾಗುತ್ತಿದೆ. ಇದೀಗ ಸಿದ್ಧಗಂಗಾ ಆಸ್ಪತ್ರೆ ಈ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಹೃದ್ರೋಗಿಗಳಿಗೆ ಸಂಜೀವಿನಿಯಾಗಿದೆ ಎಂದರು.
ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ಮಾತನಾಡಿ, ಸಿದ್ಧಲಿಂಗ ಸ್ವಾಮೀಜಿಯವರ ದೂರದೃಷ್ಟಿ ಹಾಗೂ ತಂತ್ರಜ್ಞಾನ ಅಳವಡಿಕೆಯಲ್ಲಿ ತೋರುವ ಆಸಕ್ತಿಯ ಫಲವಾಗಿ ರಾಜ್ಯದ ಕೆಲವೇ ಕೆಲವು ಆಸ್ಪತ್ರೆಗಳಲ್ಲಿ ಕಂಡು ಬರುವ ಒಸಿಟಿ ತಂತ್ರಜ್ಞಾನ ನಮ್ಮ ಆಸ್ಪತ್ರೆಯಲ್ಲಿ ಬಳಸಲಾಗುತ್ತಿದೆ. ದುಬಾರಿಯಾಗಿರುವ ಶಸ್ತ್ರ ಚಿಕಿತ್ಸೆಯನ್ನು ಸಾರ್ವಜನಿಕರ ಕೈಗೆಟುಕುವ ದರದಲ್ಲಿ ನೀಡಿ ಈ ಭಾಗದ ಹೃದ್ರೋಗಿಗಳಿಗೆ ತುರ್ತು ಸೇವೆ ಒದಗಿಸುವುದೇ ನಮ್ಮ ಧ್ಯೇಯವಾಗಿದೆ ಎಂದರು.
ಸೂಪರ್ ಸ್ಪೆಷಾಲಿಟಿ ಮುಖ್ಯಸ್ಥ ಹಾಗೂ ಹಿರಿಯ ಹೃದ್ರೋಗ ತಜ್ಞ ಡಾ.ಭಾನುಪ್ರಕಾಶ್.ಹೆಚ್.ಎಂ. ನೇತೃತ್ವದ ಡಾ.ಶರತ್, ಡಾ.ಸುರೇಶ್, ಡಾ.ನಿಲೇಶ್ ಒಳಗೊಂಡ ತಂಡ ಹೃದಯಾಘಾತಕ್ಕೆ ಒಳಗಾಗಿ ತುರ್ತು ಚಿಕಿತ್ಸೆ ಅವಶ್ಯಕತೆಯಿದ್ದ 65 ವರ್ಷದ ಪುರುಷ ಹಾಗೂ 75 ವರ್ಷದ ಮಹಿಳಾ ಹೃದ್ರೋಗಿಗಳಿಗೆ ಒಸಿಟಿ ತಂತ್ರಜ್ಞಾನ ಬಳಸಿಕೊಂಡು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದರು. ತುಮಕೂರು ಜಿಲ್ಲೆಯ 100 ಕ್ಕೂ ಹೆಚ್ಚು ವೈದ್ಯರು ಶಸ್ತ್ರ ಚಿಕಿತ್ಸೆಯ ನೇರಪ್ರಸಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚರ್ಚೆ ನಡೆಸಿದರು. ಯಾವುದೇ ಅಡ್ಡ ಪರಿಣಾಮ ಎದುರಿಸದೆ ಸ್ಪಷ್ಟ ನಿರ್ದೇಶನದ ಮೂಲಕ ನಡೆದ ಒಸಿಟಿ ಶಸ್ತ್ರಚಿಕಿತ್ಸೆಗೆ ವೈದ್ಯರುಗಳಿಂದ ಪ್ರಶಂಸೆ ವ್ಯಕ್ತವಾಯಿತು.
Comments are closed.