ರೈತಪರ ಯೋಜನೆ ರದ್ದುಖಂಡಿಸಿ ಬಿಜೆಪಿ ಪ್ರತಿಭಟನೆ

ಕಾಂಗ್ರೆಸ್ ಸರ್ಕಾರ ರೈತರ ಬೆನ್ನು ಮೂಳೆ ಮುರಿಯಲು ಹೊರಟಿದೆ

131

Get real time updates directly on you device, subscribe now.


ತುಮಕೂರು: ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಅನೇಕ ಜನಪರ, ರೈತಪರ ಯೋಜನೆಗಳನ್ನು ರದ್ದು ಮಾಡುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತರ ಬೆನ್ನು ಮೂಳೆ ಮುರಿಯಲು ಹೊರಟಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ ಆರೋಪಿಸಿದರು.

ಬಿಜೆಪಿ ಸರಕಾರದಲ್ಲಿ ಜಾರಿಯಲ್ಲಿದ್ದ ಕೃಷಿ ಸನ್ಮಾನ್, ವಿದ್ಯಾಸಿರಿ, ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದು ಸೇರಿದಂತೆ ಹಲವು ಯೋಜನೆ ಸ್ಥಗಿತಗೊಳಿಸಿರುವ ಕಾಂಗ್ರೆಸ್ ಸರಕಾರದ ವಿರುದ್ಧ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿ, ಬಿಜೆಪಿ ಪಕ್ಷದ ಜನಪರ, ಜೀವಪರ ಯೋಜನೆಗಳನ್ನು ರದ್ದು ಮಾಡಿ ಗ್ಯಾರೆಂಟಿಗಳ ಹೆಸರಿನಲ್ಲಿ ಜನರ ಕಣ್ಣಿಗೆ ಮಣ್ಣೆರೆಚಲು ಹೊರಟಿದೆ ಎಂದರು.

ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕು ಎಂಬ ಉದ್ದೇಶದಿಂದ ಸಾಧಕ, ಭಾದಕಗಳ ಬಗ್ಗೆ ತಿಳುವಳಿಕೆ ಇಲ್ಲದೆ, ಅತ್ಯಂತ ಚೀಪ್ ಪಾಪ್ಯುಲಾರಿಟಿ ಗ್ಯಾರೆಂಟಿ ಯೋಜನೆಗಳನ್ನು ಘೋಷಿಸಿ ಆ ಯೋಜನೆಗಳಿಗೆ ಹಣ ಹೊಂದಿಸಲು ಈ ಹಿಂದಿನ ಸರಕಾರದ ಜನಪರ ಯೋಜನೆಗಳನ್ನು ಕೈಬಿಟ್ಟಿದೆ. ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ್ದ ವಿದ್ಯಾಸಿರಿ ಯೋಜನೆಯಿಂದ ರಾಜ್ಯದ ಸುಮಾರು 11 ಲಕ್ಷ ವಿದ್ಯಾರ್ಥಿಗಳಿಗೆ 2 ಸಾವಿರದಿಂದ 20 ಸಾವಿರದ ವರೆಗೆ ವಿದ್ಯಾರ್ಥಿ ವೇತನ ದೊರೆಯುತ್ತಿತ್ತು. ಕೇಂದ್ರದ ಕೃಷಿ ಸನ್ಮಾನ ಯೋಜನೆಯಿಂದ ರಾಜ್ಯ 55 ಲಕ್ಷ ರೈತರಿಗೆ ವರ್ಷಕ್ಕೆ 10 ಸಾವಿರ ರೂ. ಸಹಾಯವಾಗುತ್ತಿತ್ತು. ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ರೈತ ತಾನು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಲು ಮುಕ್ತ ಅವಕಾಶ ಕಲ್ಪಿಸಿತ್ತು. ಆದರೆ ಇದನ್ನು ರದ್ದು ಮಾಡಿ ರೈತನಿಗೆ ಬಹಳ ನಷ್ಟ ಉಂಟು ಮಾಡಿದೆ, ಇದರ ವಿರುದ್ಧ ರೈತರೇ ಶೀಘ್ರದಲ್ಲಿಯೇ ದಂಗೆ ಏಳಲಿದ್ದಾರೆ ಎಂದರು.

ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ, ರಾಜ್ಯ ಸರಕಾರದ ನಡೆ ಒಂದುಕಡೆ ಹ್ಯಾಸ್ಯಾಸ್ಪದ ಎನಿಸಿದರೆ, ಮತ್ತೊಂದೆಡೆ ನಮ್ಮನ್ನು ಸಾಲದ ಸೂಲಕ್ಕೆ ಸಿಲುಕಿಸುತ್ತಾರೆನೋ ಎಂಬ ಭಯ ಕಾಡುತ್ತಿದೆ. ಕರ್ನಾಟಕ ಮತ್ತೊಂದು ಶ್ರೀಲಂಕ, ಪಾಕಿಸ್ತಾನ ಆಗುವ ಸಾಧ್ಯತೆ ಹೆಚ್ಚಿದೆ. ಕೇಂದ್ರ ಸರಕಾರ ಅಭಿವೃದ್ಧಿಯ ಕಡೆಗೆ ಚಿಂತನೆ ಮಾಡಿದರೆ, ರಾಜ್ಯ ಸರಕಾರ ಗ್ಯಾರೆಂಟಿಗಳ ಮೂಲಕ ರಾಜ್ಯವನ್ನು ದಿವಾಳಿಯತ್ತ ತೆಗೆದುಕೊಂಡು ಹೋಗುತ್ತಿದೆ. ಇವರ ಬಜೆಟ್ ನ ಲೋಪದೋಷಗಳು 2024ರ ಬಜೆಟ್ ತಯಾರಿ ವೇಳೆ ಗೋಚರಿಸಲಿವೆ. ಪ್ರಧಾನಿ ಮೋದಿ ಅವರು ಆತ್ಮನಿರ್ಭರ್ ಭಾರತ್, ಮೇಕ್ ಇನ್ ಇಂಡಿಯಾ ದಂತಹ ಕಾರ್ಯಕ್ರಮಗಳ ಮೂಲಕ ಕೈಗಾರಿಕೆಗಳಿಗೆ ಹೂಡಿಕೆ ಮಾಡುತಿದ್ದರೆ, ಕಾಂಗ್ರೆಸ್ ಬಿಟ್ಟಿ ಯೋಜನೆಗಳ ಮೂಲಕ ದೇಶದ ಹಣಕಾಸು ಸ್ಥಿತಿ ಹಾಳು ಮಾಡುತ್ತಿದೆ ಎಂದು ದೂರಿದರು.

ಮಾಜಿ ಶಾಸಕ ಮಸಾಲೆ ಜಯರಾಮ್ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ 60 ಸಾವಿರ ಕೋಟಿ ರೂ. ಗಳನ್ನು ತನ್ನ ಗ್ಯಾರಂಟಿ ಯೋಜನೆಗೆ ಖರ್ಚು ಮಾಡುತ್ತಿದೆ. ಇದರಿಂದ ಅಭಿವೃದ್ಧಿ ಕಾರ್ಯ ಕುಂಠಿತವಾಗುತ್ತಿವೆ. ಉಚಿತ ಬಸ್ ಪ್ರಯಾಣದಿಂದಾಗಿ ಕೆಎಸ್ಆರ್ ಟಿಸಿ ನಿಗಮ ಸಹ ಸಂಕಷ್ಟಕ್ಕೆ ತಲುಪುತ್ತಿದೆ. ಈ ಸರ್ಕಾರ ನವೆಂಬರ್ ವರೆಗೆ ಮಾತ್ರ ಅಸ್ತಿತ್ವದಲ್ಲಿರಲಿದೆ ಎಂದರು.

ಬಿಜೆಪಿ ರೈತಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಮಾತನಾಡಿ, ರಾಜ್ಯದಲ್ಲಿ ಹೊಸ ಸರಕಾರ ಬಂದು 75 ದಿನಗಳು ಪೂರೈಸಿವೆ. ಇಷ್ಟು ದಿನಗಳಲ್ಲಿಯೇ ಈ ರಾಜ್ಯದ ಜನರಿಗೆ ಕಾಂಗ್ರೆಸ್ ಮಾಡಿರುವ ಮೋಸ ಗೊತ್ತಾಗಿದೆ. ಶೇ.50 ರಷ್ಟಿರುವ ರೈತರಿಗಾಗಿ ಈ ಹಿಂದಿನ ಬಿಜೆಪಿ ಸರಕಾರ ಜಾರಿಗೆ ತಂದಿದ್ದ ಹಲವಾರು ಯೋಜನೆ ಕೈಬಿಡುವ ಮೂಲಕ ರೈತ ದೇಶದ ಬೆನ್ನೆಲುಬು ಎನ್ನುವ ಘೋಷಣೆಗೆ ತಿಲಾಂಜಲಿ ಇಟ್ಟಿದೆ ಎಂದರು.

ಬಿಜೆಪಿ ಒಬಿಸಿ ಮೋರ್ಚಾ ಕಾರ್ಯಕಾರಣಿ ಸದಸ್ಯ ಸ್ಪೂರ್ತಿ ಚಿದಾನಂದ್, ಟೂಡಾ ಮಾಜಿ ಅಧ್ಯಕ್ಷ ಬಿ.ಎಸ್.ನಾಗಣ್ಣ, ಎಂ.ಬಿ.ನಂದೀಶ್, ಮಹಿಳಾ ಮೋರ್ಚಾ ಅಧ್ಯಕ್ಷೆ ಅಂಬಿಕಾ ಹುಲಿನಾಯ್ಕರ್, ಮಧುಗಿರಿ ಜಿಲ್ಲಾ ಅಧ್ಯಕ್ಷ ಬಿ.ಕೆ.ಮಂಜುನಾಥ್, ಉಸ್ತುವಾರಿ ರುದ್ರೇಶ್, ಸ್ನೇಕ್ ನಂದೀಶ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!