ಶಿಕ್ಷಣ ಸಂಸ್ಥೆಗಳು ಡ್ರಾಪ್ಔಟ್ ಸಮಸ್ಯೆ ಬಗೆಹರಿಸಲಿ: ರಾಜ್ಯಪಾಲರು

ಟಿ.ಎಸ್.ನಾಗಭರಣ, ರಮೇಶ್ ಬಾಬುಗೆ ಡಾಕ್ಟರೇಟ್ ಪ್ರದಾನ - ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳ ಸಂಭ್ರಮ

139

Get real time updates directly on you device, subscribe now.


ತುಮಕೂರು: ವಿಶ್ವವಿದ್ಯಾಲಯಗಳು ಮತ್ತು ಅದರ ಸಂಯೋಜಿತ ಕಾಲೇಜುಗಳು ಒಂದು ಕಾಲೇಜು, ಒಂದು ಗ್ರಾಮ ಅಂದರೆ ಒಂದು ಗ್ರಾಮವನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸಲು ಮುಂದಾಗಬೇಕು ಹಾಗೂ ಶಾಲಾ ಕಾಲೇಜುಗಳಲ್ಲಿ ಡ್ರಾಪ್ ಔಟ್ ಸಮಸ್ಯೆಯನ್ನು ತಡೆಯಲು ಪ್ರಯತ್ನಿಸಬೇಕು ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

ತುಮಕೂರು ವಿಶ್ವವಿದ್ಯಾಲಯದ 16ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಬೇಕಾದರೆ, ಮೊದಲಿಗೆ ಡ್ರಾಪ್ ಔಟ್ ಸಮಸ್ಯೆ ಬಗೆಹರಿಸಬೇಕು, ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ, ಬಗೆಹರಿಸಲು ಪ್ರಯತ್ನಿಸಬೇಕು ಹಾಗೂ ಆದಷ್ಟು ಉತ್ತಮ ಶಿಕ್ಷಣ ಪಡೆಯಲು ಅವರಿಗೆ ಅನುಕೂಲ ಮಾಡಿಕೊಡಬೇಕು ಎಂದರು.

ನಮ್ಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯವು ಬಹಳ ಪುರಾತನವಾಗಿದೆ ಮತ್ತು ಅನಾದಿ ಕಾಲದಿಂದಲೂ ವಸುಧೈವ ಕುಟುಂಬಕಂ ತತ್ವಶಾಸ್ತ್ರ ಮತ್ತು ಧ್ಯಾನದ ಮೇಲೆ ಕೇಂದ್ರೀಕೃತವಾಗಿದೆ ಮತ್ತು ಸರ್ವೇ ಭವಂತು ಸುಖಿನೋ, ಸರ್ವೇ ಸಂತು ನಿರಾಮಯ ಎಂಬ ಮನೋಭಾವದಿಂದ ಪ್ರೇರಿತವಾಗಿದೆ. ನಾವು ಸಾರ್ವತ್ರಿಕ ಸಹೋದರತ್ವ ಮತ್ತು ವಿಶ್ವಶಾಂತಿಗಾಗಿ ಶ್ರಮಿಸುತ್ತೇವೆ ಮತ್ತು ಸಮಾನತೆ ಮತ್ತು ಸಾಮರಸ್ಯವನ್ನು ಶಿಕ್ಷಣ ನೀಡುತ್ತದೆ ಎಂದು ಹೇಳಿದರು.

ಪ್ರಾಚೀನ ಶಿಕ್ಷಣ ವ್ಯವಸ್ಥೆಯು ವ್ಯಕ್ತಿತ್ವ ನಿರ್ಮಾಣ, ಆಧ್ಯಾತ್ಮಿಕ ಜ್ಞಾನದ ಜೊತೆಗೆ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಯ ಮೇಲೆ ಕೇಂದ್ರೀಕರಿಸಿದೆ, ಇದರಿಂದಾಗಿ ನಾವು ವಿಶ್ವಗುರು ಎಂದು ಪರಿಗಣಿಸಲ್ಪಟ್ಟಿದ್ದೇವೆ ಮತ್ತು ನಮ್ಮ ಆರ್ಥಿಕತೆಯು ನಮ್ಮ ದೇಶವನ್ನು ಚಿನ್ನದ ಹಕ್ಕಿ ಎಂದು ಕರೆಯುವಷ್ಟು ಪ್ರಬಲವಾಗಿದೆ. ಮತ್ತೆ ದೇಶವನ್ನು ವಿಶ್ವಗುರುವನ್ನಾಗಿಸಲು ನಾವು ಶ್ರಮಿಸಬೇಕು ಎಂದು ಕರೆ ನೀಡಿದರು.

ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗ ಪಡೆಯಲು ತಾಂತ್ರಿಕ ಶಿಕ್ಷಣವು ಸುಲಭವಾದ ಮಾರ್ಗವಾಗಿದೆ. ವಿದ್ಯಾರ್ಥಿಗಳ ಕೌಶಲ್ಯ ಹೆಚ್ಚಿಸುವ ಮತ್ತು ಉದ್ಯೋಗಕ್ಕೆ ಅರ್ಹವಾದ ತಾಂತ್ರಿಕ ಮತ್ತು ವೃತ್ತಿಪರ ಕೋರ್ಸ್ಗಳೊಂದಿಗೆ ಅವರನ್ನು ಸಂಪರ್ಕಿಸುವ ಕೆಲಸ ಮಾಡಿದರೆ ನಂತರ ಅವರು ಉದ್ಯೋಗ ಹುಡುಕುವ ಬದಲು ಅವರು ಉದ್ಯೋಗ ನೀಡುವವರಾಗುತ್ತಾರೆ ಎಂದು ತಿಳಿಸಿದರು.

ಸ್ವಾತಂತ್ರ್ಯದ 75 ವರ್ಷಗಳಲ್ಲಿ ದೇಶವು ಎಲ್ಲಾ ಕ್ಷೇತ್ರಗಳಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದೆ ಮತ್ತು ದೇಶದ ಆರ್ಥಿಕತೆಯು ಅತ್ಯಂತ ಬಲಿಷ್ಠವಾಗಿದೆ. ಇಂದು ನಮ್ಮ ಆರ್ಥಿಕತೆಯು ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಮುಂಬರುವ ವರ್ಷಗಳಲ್ಲಿ ವಿಶ್ವದ 3 ನೇ ಅತಿದೊಡ್ಡ ಆರ್ಥಿಕತೆಯಾಗಿ ಮಾಡುವಲ್ಲಿ ನಾವೆಲ್ಲರೂ ಬಹಳ ಮುಖ್ಯವಾದ ಪಾತ್ರ ಹೊಂದಿದ್ದೇವೆ. ಮುಂದಿನ 25 ವರ್ಷಗಳ ಅಮೃತ ಕಾಲವು ನಮ್ಮ ದೇಶವನ್ನು ವಿಶ್ವದ ಅತ್ಯುತ್ತಮ ದೇಶಗಳ ವರ್ಗಕ್ಕೆ ತರುವ ಕರ್ತವ್ಯದ ಅವಧಿಯಾಗಿದೆ. ಈ ಕರ್ತವ್ಯದ ಅವಧಿಯನ್ನು ಅವಕಾಶವನ್ನಾಗಿ ಪರಿವರ್ತಿಸುವಲ್ಲಿ ನಾವು ಪಾಲುದಾರರಾಗಬೇಕು ಎಂದು ಹೇಳಿದರು.
ತುಮಕೂರು ವಿಶ್ವ ವಿದ್ಯಾಲಯವು ಕರ್ನಾಟಕ ರಾಜ್ಯದ ಪ್ರಮುಖ ವಿಶ್ವ ವಿದ್ಯಾಲಯಗಳಲ್ಲಿ ಒಂದಾಗಿದೆ. ವಿಶ್ವ ವಿದ್ಯಾಲಯವು ಬಹುಶಿಸ್ತೀಯ, ತಂತ್ರಜ್ಞಾನ- ಶಕ್ತಗೊಂಡ ಶಿಕ್ಷಣವನ್ನು ಬಲಪಡಿಸಲು, ಉತ್ಕೃಷ್ಟತೆಗಾಗಿ ನಾವೀನ್ಯತೆ ಮತ್ತು ಸಂಶೋಧನೆ ಉತ್ತೇಜಿಸಲು, ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆ ಮತ್ತು ಸುಸ್ಥಿರ ಅಭಿವೃದ್ಧಿಯ ಮೂಲಕ ಅಂತರ್ಗತ ಬೆಳವಣಿಗೆ ಉತ್ತೇಜಿಸಲು ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಶ್ಲಾಸಿದರು.

ಜೆಎನ್ ಯುನಲ್ಲಿ ಕನ್ನಡ ಪೀಠ ಅಭಿವೃದ್ಧಿಗೆ ಸಹಕಾರ
ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಸಾಂತಿ ಶ್ರೀ ಧೂಳಿಪುಡಿ ಪಂಡಿತ್ ಅವರು ಘಟಿಕೋತ್ಸವ ಭಾಷಣ ಮಾಡಿ ಜೆಎನ್ ಯುನಲ್ಲಿ ಕನ್ನಡ ಪೀಠ ಸ್ಥಾಪಿಸಿದ್ದು, ಕರ್ನಾಟಕದ ಹಾಗೂ ಕನ್ನಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪೀಠವನ್ನು ಅಭಿವೃದ್ಧಿ ಪಡಿಸಲು ಕರ್ನಾಟಕ ಸರ್ಕಾರ ಅನುದಾನ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಕುಲಾಧಿಪತಿಗಳೂ ಆದ ರಾಜ್ಯಪಾಲರು, ಕನ್ನಡದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕನ್ನಡ ಪೀಠ ಅಭಿವೃದ್ಧಿ ಪಡಿಸಲು ಸಹಕಾರ ನೀಡಲಾಗುವುದು. ಈ ಸಂಬಂಧ ಉನ್ನತ ಶಿಕ್ಷಣ ಸಚಿವರು, ಸರ್ಕಾರ ಕ್ರಮ ವಹಿಸಲಿದೆ ಎಂದರು.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ಈ ಬಾರಿಯ ಘಟಿಕೋತ್ಸವದಲ್ಲಿ ವಿದ್ಯಾರ್ಥಿನಿಯರೆ ಹೆಚ್ಚಿನ ಚಿನ್ನದ ಪದಕಗಳನ್ನು ಗಳಿಸಿರುವುದು ಹೆಮ್ಮೆಯ ವಿಷಯವಾಗಿದೆ. ಪೋಷಕರು ಆ ವಿದ್ಯಾರ್ಥಿನಿಯರ ಶಿಕ್ಷಣವನ್ನು ಇಲ್ಲಿಗೆ ನಿಲ್ಲಿಸದೆ ಮುಂದುವರೆಸಬೇಕು ಎಂದು ಹೇಳಿದರು.

ನಾಗಾಭರಣಗೆ ಡಾಕ್ಟರೇಟ್ ಪ್ರದಾನ
ಇದೇ ವೇಳೆ ಕನ್ನಡ ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ಹಾಗೂ ಸಮಾಜ ಸೇವಕ ಆರ್.ಎಲ್.ರಮೇಶ್ ಬಾಬು ಅವರಿಗೆ ರಾಜ್ಯಪಾಲರು ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
ಜೊತೆಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಎಂಎ ಕನ್ನಡದಲ್ಲಿ ಕಾವ್ಯ ಡಿ.ಸಿ. ಅವರಿಗೆ 4 ಚಿನ್ನದ ಪದಕ, ಎಂಕಾಂನಲ್ಲಿ ಸಂಧ್ಯಾ.ಎಸ್. 3 ಚಿನ್ನದ ಪದಕ, ಬಿಕಾಂ ನಲ್ಲಿ ದೀಪಿಕಾ ಡಿ. ಜೈನ್ 3 ಚಿನ್ನದ ಪದಕ, ಎಂಎಸ್ಸಿ ಗಣಿತದಲ್ಲಿ ಆಶಾ.ಎಲ್.ಇ. ಅವರು 3 ಚಿನ್ನದ ಪದಕ ಪಡೆದು ಸಂಭ್ರಮಿಸಿದರು.
ಘಟಿಕೋತ್ಸದಲ್ಲಿ ಕುಲಪತಿ ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಕುಲಸಚಿವರಾದ ನಹೀದಾ ಜಮ್ ಜಮ್ ಹಾಗೂ ಗಣ್ಯರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!