ತುಮಕೂರು: ನಗರದ ಶ್ರೀಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜಿನ ಸ್ಪೂರ್ತಿ ಎನ್ಎಸ್ಎಸ್ ರೆಡ್ ಕ್ರಾಸ್ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ ಕಾಲೇಜಿನ ಆವರನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಿ ಮಾತನಾಡಿದ ಕಲಾವಿದ ವಿಮಿಕ್ರಿ ಗೋಪಿ, ನಡೆದಾಡು ಎಂದು ಭಕ್ತರಿಂದ ಕರೆಯಿಸಿಕೊಂಡಿರುವ ಡಾ.ಶಿವಕುಮಾರ ಸ್ವಾಮೀಜಿಗಳು ನಡೆದಾಡಿದ ಜಾಗವಿದು, ನಾನು ಕೂಡ ಈ ಕಾಲೇಜಿನ ಹಳೆಯ ವಿದ್ಯಾರ್ಥಿ, ನಾನು ಓದಿದ ಕಾಲೇಜಿಗೆ ಅತಿಥಿಯಾಗಿ ಬಂದು, ಸಾವಿರಾರು ಮಕ್ಕಳನ್ನು ಉದ್ದೇಶಿ ಮಾತನಾಡುತಿರುವುದು ಸಂತಸ ತಂದಿದೆ ಎಂದರು.
ಓದು ಮನುಷ್ಯನಲ್ಲಿ ಜ್ಞಾನವನ್ನು ವೃದ್ಧಿಸಿದರೆ, ಕಲೆ, ಸಂಗೀತ, ಸಾಹಿತ್ಯ, ಹಾಸ್ಯ ಎಲ್ಲವೂ ಮನುಷ್ಯನಲ್ಲಿ ಲೋಕ ಜ್ಞಾನ ಕಲಿಸುತ್ತವೆ. ಹಾಗಾಗಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಕಡೆಗೂ ವಿದ್ಯಾರ್ಥಿನಿಯರು ಗಮನ ಹರಿಸಬೇಕೆಂದು ಸಲಹೆ ನೀಡಿ, ಹಲವಾರು ಹಾಸ್ಯ ಪ್ರಸಂಗಗಳನ್ನು ಪ್ರಸ್ತುತ ಪಡಿಸುವ ಮೂಲಕ ವಿದ್ಯಾರ್ಥಿ ಸಮೂಹವನ್ನು ರಂಜಿಸಿದರು.
ಶ್ರೀ ಸಿದ್ದಗಂಗಾ ಪದವಿ ಕಾಲೇಜುಗಳ ಸಂಯೋಜನಾಧಿಕಾರಿ ಡಾ.ಡಿ.ಎನ್.ಯೋಗೀಶ್ವರಪ್ಪ ಮಾತನಾಡಿ, ಶಾಲಾ, ಕಾಲೇಜಿನ ಇಂತಹ ವೇದಿಕೆಗಳು ಮಕ್ಕಳಲ್ಲಿ ಅಡಗಿರುವ ಪಠ್ಯೇತರ ಪ್ರತಿಭೆಗಳಾದ ಕಲೆ, ಸಾಹಿತ್ಯ, ಸಂಗೀತ ದಂತಹ ಚಟುವಟಿಕೆ ಪ್ರದರ್ಶಿಸಲು ಒಂದು ವೇದಿಕೆಯಾಗಿದೆ. ನಮ್ಮ ಕಾಲೇಜಿನಲ್ಲಿ ಪ್ರತಿವರ್ಷ ಸ್ಪೂರ್ತಿ ಹೆಸರಿನಲ್ಲಿ ವಿಶೇಷ ಚಟುವಟಿಕೆ ನಡೆಸಿ ಮಕ್ಕಳನ್ನು ಪ್ರೋತ್ಸಾಹಿಸಿಕೊಂಡು ಬರಲಾಗುತ್ತಿದೆ, ಅಲ್ಲದೆ ನಿವೃತ್ತ ಉಪನ್ಯಾಸಕರ ಸಂಘದ ನೀಡಿದ ದತ್ತಿಯಲ್ಲಿ ಕಾಲೇಜಿನ ರ್ಯಾಂಕ್ ವಿಜೇತರನ್ನು ಅಭಿನಂದಿಸುವ ಮೂಲಕ ಇತರೆಯವರಿಗೆ ಸ್ಪೂರ್ತಿ ತುಂಬಲಾಗುತ್ತಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಹೆಚ್.ಎಂ.ದಕ್ಷಿಣಮೂರ್ತಿ ಮಾತನಾಡಿ, ಶ್ರೀಸಿದ್ದಗಂಗಾ ಕಾಲೇಜಿನಲ್ಲಿ ಹಲವಾರು ವರ್ಷಗಳಿಂದ ಸ್ಪೂರ್ತಿ ಹೆಸರಿನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲಾಗುತ್ತಿದೆ, ಹಿರಿಯ ಪ್ರಾಂಶುಪಾಲರ ರೀತಿ ನಮ್ಮ ಅವಧಿಯಲ್ಲಿಯೂ ಅನೇಕ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ, ಪಠ್ಯದ ಜೊತೆಗೆ, ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ವೇದಿಕೆಯಲ್ಲಿ ಕನ್ನಡ ಕೋಗಿಲೆ ಖ್ಯಾತಿಯ ಗುರು ಪಾಟೀಲ್, ಹಾಸ್ಯ ನಟ ಟಿ.ಆರ್.ಸಂಜು, ಸಹಾಯಕ ಪ್ರಾಧ್ಯಾಪಕರಾದ ಪ್ರೊ.ಶೀಲಾ.ಕೆ.ಪಿ, ದಿವ್ಯಾ ಮತ್ತಿತರರು ಪಾಲ್ಗೊಂಡಿದ್ದರು.
ರ್ಯಾಂಕ್ ವಿಜೇತರಾದ ರಮ್ಯಶ್ರೀ, ನೇಹಾ, ಸಂಧ್ಯಾ, ರಾಧಿಕಾ, ರಚನಾ, ರಂಜಿತ, ನಿವೃತ್ತ ಉಪನ್ಯಾಸಕ ಡಾ.ಸಣ್ಣಸ್ವಾಮಿ, ಜಯಶಂಕರ್, ಸಿ.ಟಿ.ಚಂದ್ರಪ್ಪ ಅವರನ್ನು ಅಭಿನಂದಿಸಲಾಯಿತು.
Comments are closed.