ಕೊಡಿಗೇನಹಳ್ಳಿ: ಪಕ್ಕದ ಗೌರಿಬಿದನೂರು ತಾಲ್ಲೂಕಿನ ಗುಂಡಾಪುರದ ಗಾರ್ಮೆಂಟ್ಸ್ ಕೆಲಸಕ್ಕೆ ತೆರಳತಿದ್ದ ಆಟೋ ಹಾಗೂ ಕೆಎಸ್ಆರ್ ಟಿಸಿ ಬಸ್ ನಡುವೆ ಡಿಕ್ಕಿಯಾಗಿ ಮಹಿಳೆಯೊಬ್ಬಳು ಮೃತಪಟ್ಟ ಘಟನೆ ನಡೆದಿದೆ.
ತಾಲ್ಲೂಕಿನ ಕೊಡಿಗೇನಹಳ್ಳಿ ಜಯಮಂಗಲಿ ಸೇತುವೆ ಸಮೀಪ ಮಂಗಳವಾರ ಬೆಳಗ್ಗೆ ಗುಟ್ಟೆ ಕಡೆಯಿಂದ ಬರುತ್ತಿದ್ದ ಆಟೋ ಮತ್ತು ಕೊಡಿಗೇನಹಳ್ಳಿ ಮುಖಾಂತರ ಐ.ಡಿ.ಹಳ್ಳಿಗೆ ಹೋಗುತ್ತಿದ್ದ ಕೆಎಸ್ಆರ್ ಟಿಸಿ ಬಸ್ ನಡುವೆ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಜೋಗೇನಹಳ್ಳಿ ಗ್ರಾಮದ ಲಕ್ಷ್ಮೀ(35), ವರಲಕ್ಷ್ಮಿ (38) ಮಂಜಮ್ಮ (40) ಕೊಡಿಗೇನಹಳ್ಳಿಯ ವೆಂಕಟಲಕ್ಷ್ಮಮ್ಮ (45), ಉಮಾ(44), ಸಾವಿತ್ರಮ್ಮ (47), ಮಂಜುಳ (40), ಗಂಗರತ್ನಮ್ಮ (41) ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು ಆಟೋ ಚಾಲಕ ಶಾಂತರಾಜು ಎಂಬಾತನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಒಟ್ಟು 9 ಗಾಯಾಳುಗಳನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು ಇದರಲ್ಲಿ 7 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಎರಡು ವಾಹನಗಳ ಅಪಘಾತದಲ್ಲಿ ಆಟೋದಲ್ಲಿದ್ದ ಜೋಗೇನಹಳ್ಳಿ ಗ್ರಾಮದ ಲಕ್ಷ್ಮಿ(35) ಮೃತಪಟ್ಟಿದ್ದು ಕುಟುಂಬಸ್ಥರು ಆಸ್ಪತ್ರೆಯ ಬಳಿ ಜಮಾಯಿಸಿದ್ದು ಆಕ್ರಂದ ಮುಗಿಲು ಮುಟ್ಟಿದೆ.
ಗುಂಡಾಪುರದ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಲು ಬಸ್ ಸೌಕರ್ಯವಿಲ್ಲದೆ ಇಂತಹ ಅನಾಹುತ ಪದೇ ಪದೇ ಸಂಭವಿಸುತಿದ್ದು 3 ತಿಂಗಳಿಗೊಮ್ಮೆ ಇಂತಹ ಅಪಘಾತ ಸಂಭವಿಸಿ ಅಮಾಯಕ ಜೀವಗಳು ಬಲಿಯಾಗುತ್ತಿವೆ. ಈ ಬಗ್ಗೆ ಸಂಬಂಧಪಟ್ಟವರು ಬಸ್ ಸೌಕರ್ಯ ಕಲ್ಪಿಸಬೇಕೆಂದು ಮಹಿಳೆಯರು ಆಗ್ರಹಿಸಿದ್ದಾರೆ.
ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ಎಂಎಲ್ ಸಿ ಆರ್.ರಾಜೇಂದ್ರ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದು ಗಾಯಾಳುಗಳ ಯೋಗಕ್ಷೇಮ ವಿಚಾರಸಿದ್ದಾರೆ. ಈ ಬಗ್ಗೆ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.