ತುಮಕೂರು: ಯಂತ್ರ ಮಾನವರಾಗದೆ ಮಂತ್ರ ಮಾನವರಾಗಬೇಕು. ಮನಸಿನ ಮಾತು ಕೇಳಬೇಕು, ಬದುಕನ್ನು, ಜಗತ್ತನ್ನು ತೆರೆದ ಕಣ್ಣುಗಳಿಂದ ನೋಡಬೇಕು ಎಂದು ಚಲನಚಿತ್ರ ನಿರ್ದೇಶಕ ಡಾ.ಟಿ. ಎಸ್.ನಾಗಾಭರಣ ಹೇಳಿದರು.
ತುಮಕೂರು ವಿಶ್ವ ವಿದ್ಯಾಲಯದ ಕಲಾ ಕಾಲೇಜು ಬುಧವಾರ ಆಯೋಜಿಸಿದ್ದ ಕಾಲೇಜು ವಾರ್ಷಿಕೋತ್ಸವ ಹಾಗೂ ಜಾನಪದ ಕಲಾ ಮೇಳ ಕಲಾಸಿರಿ- 2023 ಉದ್ಘಾಟಿಸಿ ಮಾತನಾಡಿ, ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುತ್ತದೆ. ನಾವು ಮಾಡುವ ಉತ್ತಮ ಕಾರ್ಯ ವ್ಯಕ್ತಿತ್ವವನ್ನು ವಿಕಸನಗೊಳಿಸುತ್ತದೆ. ನಮ್ಮ ನೆಲದ ಕಲೆ, ಸಂಸ್ಕೃತಿ ಆಚಾರ ವಿಚಾರಗಳನ್ನು ವಿದ್ಯಾರ್ಥಿಗಳೇ ಉಳಿಸಿಕೊಳ್ಳಬೇಕು. ಆದರೆ ಇಂದು ವಿದ್ಯಾರ್ಥಿಗಳು ತಮ್ಮ ಬದುಕಲ್ಲಿ ಸ್ವದೇಶಿ ಮನೋಭಾವ ರೂಢಿಸಿಕೊಳ್ಳುವಲ್ಲಿ ಹಿಂದೆ ಬಿದ್ದಿದ್ದಾರೆ ಎಂದರು.
ತಂತ್ರಜ್ಞಾನದ ಬಳಕೆ ಇತಿಹಾಸದ ಸಂಸ್ಕೃತಿ ಉಳಿಸಿಕೊಳ್ಳುವ ಬದಲು ನಮ್ಮ ನೈಜತೆ ಕಸಿದುಕೊಳ್ಳುತ್ತಿದೆ. ಇದಕ್ಕೆ ರಂಗ ಭೂಮಿಯೂ ಹೊರತಾಗಿಲ್ಲ, ವಿದ್ಯೆ ಕಲೆಯ ವೈಭವ ಸಾರುವ ಬೆಳಕಾಗಬೇಕು. ಸ್ವಂತಿಕೆಯ ಮಾರ್ಗದಲ್ಲಿ ಸಾಗಿ ಸಾಧಿಸುವ ಬಿಂದುವಾಗಬೇಕು ಎಂದು ಹೇಳಿದರು.
ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ ಕಲಾ ಕಾಲೇಜಿನ ವಾರ್ಷಿಕ ವರದಿ ಮಂಡಿಸಿದರು. ವಾರ್ಷಿಕ ಸಂಚಿಕೆ ಕಲಾಸಿರಿ- 2023 ಬಿಡುಗಡೆ ಮಾಡಲಾಯಿತು, ಜನಪ್ರಿಯ ವಿಜ್ಞಾನ ಲೇಖಕ ಡಾ.ಹೆಚ್.ಎಸ್.ನಿರಂಜನಾರಾಧ್ಯ ಅವರಿಗೆ ವಿವಿ ಕಲಾ ಕಾಲೇಜಿನ ವಾರ್ಷಿಕ ಕಲಾ ಸಿರಿ- 2023 ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಾಂಸ್ಕೃತಿಕ ಸಮಿತಿಯ ಸಂಯೋಜಕ ಡಾ.ರವಿಸಿ.ಎಂ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕದ ಸಂಯೋಜಕಿ ಡಾ.ಗಿರಿಜಾ.ಎಸ್, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸುದೀಪ್ ಕುಮಾರ್.ಆರ್, ಮಲೆ ಮಾದೇಶ್ವರ ಬೆಟ್ಟದ ಜಾನಪದ ಗಾಯಕ ಡಾ.ಎಂ.ಮಹಾದೇವ ಸ್ವಾಮಿ, ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್.ಕೆ, ಸಮಾಜ ಸೇವಕ ಬಿ.ಆರ್.ನಟರಾಜಶೆಟ್ಟಿ, ರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ಮತ್ತು ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್.ಟಿ.ಬಿ. ಭಾಗವಹಿಸಿದ್ದರು.
Comments are closed.