ಬಡವರಿಗೆ ಮನೆ ನಿರ್ಮಾಣಕ್ಕೆ ಕ್ರಮ: ಕೆಎನ್ಆರ್

320

Get real time updates directly on you device, subscribe now.


ಮಧುಗಿರಿ: ಮುಂದಿನ ದಿನಗಳಲ್ಲಿ ನಿವೇಶನ ರಹಿತ ಬಡ ಜನರಿಗೆ ನಿವೇಶನದ ಜೊತೆಗೆ ಮನೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಭರವಸೆ ನೀಡಿದರು.

ಪಟ್ಟಣದ ಮಾಲಿ ಮರಿಯಪ್ಪ ರಂಗ ಮಂದಿರದಲ್ಲಿ ಬುಧವಾರ ತಾಪಂ ವತಿಯಿಂದ ಹಮ್ಮಿಕೊಂಡಿದ್ದ ಪ್ರಧಾನ ಮಂತ್ರಿ ಆವಾಸ್ ಯೋಜನೆಯ 624 ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಾರೊಬ್ಬರು ಗುಡಿಸಲಲ್ಲಿ ವಾಸ ಮಾಡಬಾರದೆಂಬ ಉದ್ದೇಶ ನನ್ನದು, ಈ ಹಿನ್ನೆಲೆಯಲ್ಲಿ 2013- 18 ರಲ್ಲಿ ನಾನು ಶಾಸಕನಾಗಿದ್ದಾಗ 16400 ಮನೆಗಳ ಮಂಜೂರು ಮಾಡಿ ಕೊಡಲಾಗಿತ್ತು. ಆದರೆ 2018- 23 ರ ಅವಧಿಯಲ್ಲಿ ಎಷ್ಟು ಮನೆಗಳು ನಿರ್ಮಾಣ ವಾದವು ಎಂಬುದನ್ನು ನಾನು ಟೀಕೆ ಮಾಡುವುದಿಲ್ಲ. ಮುಂದಿನ ದಿನಗಳಲ್ಲಿ ಬಡವರ ನಿರೀಕ್ಷೆಯಂತೆ ಕಾರ್ಯಕ್ರಮ ರೂಪಿಸಲಾಗುವುದು ಎಂದರು.
ಪಟ್ಟಣದಲ್ಲಿ ಈಗಾಗಲೇ ಬೀದಿ ವ್ಯಾಪಾರಿಗಳ ಸುಂಕ ರದ್ದುಗೊಳಿಸಲಾಗಿದ್ದು, ಆದರೆ ದೊಡ್ಡೇರಿ ಹೋಬಳಿಯ ಬಡವನ ಹಳ್ಳಿಯಲ್ಲಿ ಸುಂಕ ವಸೂಲು ಮಾಡಲಾಗುತ್ತಿದೆ ಎಂಬ ದೂರುಗಳಿದ್ದು, ಈ ಭಾಗದ ಗ್ರಾಪಂ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕು. ತಾಲೂಕಿನಲ್ಲಿ ಎಲ್ಲೂ ಬೀದಿ ಬದಿ ವ್ಯಾಪಾರಿಗಳ ಬಳಿ ಸುಂಕ ವಸೂಲು ಮಾಡುವಂತಿಲ್ಲ ಎಂದು ತಾಕೀತು ನೀಡಿದರು.

ನನ್ನ ಅವಧಿಯಲ್ಲಿ ಗ್ರಾಪಂ ವತಿಯಿಂದ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ನೋಟ್ ಪುಸ್ತಕಗಳ ವಿತರಣೆ ಮಾಡಲಾಗುತ್ತಿದ್ದು, ಆದರೆ 2018- 2023 ರ ಅವಧಿಯಲ್ಲಿ ಏಕೆ ನೀಡಲಿಲ್ಲ ಎಂಬುದರ ಬಗ್ಗೆ ಪ್ರಶ್ನಿಸುವುದಿಲ್ಲ . ಕ್ಷೇತ್ರದ ಶಾಸಕನಾದ ಮೇಲೆ ಕ್ಷೇತ್ರದ ಜನರ ಪರವಾಗಿ ಕೆಲಸ ನಿರ್ವಹಿಸುವುದು ಜನ ಪ್ರತಿನಿಧಿಗಳ ಕರ್ತವ್ಯ, ಜನರು ಯಾವುದೇ ಯೋಚನೆಗಳಿಲ್ಲದೆ ನೆಮ್ಮೆದಿ ಜೀವನ ಸಾಗಿಸುವ ಉದ್ದೇಶದಿಂದ ಜನಪರ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ. ಬಡತನವು ನಿಮ್ಮ ತಲೆಮಾರಿಗೆ ಅಂತ್ಯವಾಗಬೇಕು, ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವಂತೆ ಕಿವಿಮಾತು ಹೇಳಿದರು.

ಉಪ ಕಸುಬುಗಳನ್ನು ವ್ಯವಸಾಯದೊಂದಿಗೆ ರೂಡಿಸಿಕೊಳ್ಳುವುದರಿಂದ ಆರ್ಥಿಕವಾಗಿ ಸಧೃಢರಾಗಿ ಸ್ವಾವಲಂಬಿ ಜೀವನ ಸಾಗಿಸಲು ಅನೂಕೂಲ ಆಗಲಿದೆ. ನಾನು ಕೂಡ ನಿಮ್ಮ ಮನೆಯವನಾಗಿದ್ದು, ನೀವೆಲ್ಲರೂ ಮನೆಗಳನ್ನು ಕಟ್ಟಿಕೊಂಡು ನಿಮ್ಮ ಮನೆಯ ಗೃಹ ಪ್ರವೇಶಕ್ಕೆ ಆಹ್ವಾನ ನೀಡಿದರೆ ನಾನೇ ಖುದ್ದಾಗಿ ಬರುತ್ತೇನೆ ಎಂದು ತಿಳಿಸಿದರು.

ಅಕ್ಕಿ ಬೇಕೋ ಹಣ ಬೇಕೋ: ಅನ್ನ ಭಾಗ್ಯ ಯೋಜನೆ ಸಿದ್ದರಾಮಯ್ಯ ಬಡವರಿಗಾಗಿ ಜಾರಿಗೊಳಿಸಿದ್ದು, ಜನಪ್ರಿಯ ಯೋಜನೆಯಾಗಿದೆ. ಈಗ ನಿಮಗೆ ಅಕ್ಕಿ ಬೇಕೋ ಅಥವಾ ಹಣ ಬೇಕೋ ಎಂದು ಸಭಿಕರನ್ನು ಪ್ರಶ್ನಿಸಿದಾಗ ನಮಗೆ ಹಣ ಬೇಡ ಅಕ್ಕಿಯೇ ಬೇಕು ಎಂದು ಸಾರ್ವಜನಿಕರು ಸಚಿವರಲ್ಲಿ ಮನವಿ ಮಾಡಿದರು.
ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ರಾಜ್ಯಮಟ್ಟದ ಹಾಲು ಉತ್ಪಾದಕರ ಬೃಹತ್ ಸಮಾವೇಶ ಆಯೋಜಿಸಲಾಗುವುದು. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳನ್ನು ಆಹ್ವಾನ ನೀಡಿ ಮತದಾರರಿಗೆ ಗೌರವ ಸಮರ್ಪಣೆ ನೀಡಲಾಗುವುದು ಎಂದರು.

ತಾಲೂಕಿನಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದೆ ಎಂದು ಪತ್ರಿಕೆಯೊಂದರಲ್ಲಿ ಸುಳ್ಳು ವರದಿ ಬರೆದಿದ್ದು, ಮರಳನ್ನು ಸಂಗ್ರಹಿಸಿ ಅದನ್ನು ಹೊರಭಾಗಕ್ಕೆ ರವಾನಿಸಿದಲ್ಲಿ ಅಕ್ರಮ ಮರಳು ದಂಧೆಯಾಗಲಿದೆ. ಆದರೆ ಅಂತಹ ಯಾವುದೇ ಚಟುವಟಿಕೆಗಳು ತಾಲೂಕಿನಲ್ಲಿ ನಡೆಯುತ್ತಿಲ್ಲ. ಸ್ಥಳೀಯವಾಗಿ ಮನೆ ಕಟ್ಟಿಕೊಳ್ಳಲು ಮರಳನ್ನು ಬಳಸಿಕೊಂಡಿದ್ದು, ಅದನ್ನು ಅಕ್ರಮ ಮರಳು ದಂಧೆ ಎಂದು ಸುಳ್ಳು ವರದಿ ಬರೆದರೆ ಹೇಗೆ? ಇದರಿಂದ ತಾಲೂಕಿನ ಅಧಿಕಾರಿಗಳಿಗೆ ಹಿರಿಯ ಅಧಿಕಾರಿಗಳಿಂದ ವೃತಾ ತೊಂದರೆಯಾಗಲಿದೆ ಎಂದು ಸಚಿವರು ವರದಿಗಾರನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ ರಿಷಿ ಆನಂದ್, ತಹಸೀಲ್ದಾರ್ ಸಿಬ್ಗತ್ ವುಲ್ಲಾ, ಮುಖಂಡರಾದ ಎಂ.ಎಸ್.ಮಲ್ಲಿಕಾರ್ಜುನಯ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು, ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ತುಂಗೋಟಿ ರಾಮಣ್ಣ, ಡಿಸಿಸಿ ಬ್ಯಾಂಕ್ ನ ಮಾಜಿ ವ್ಯವಸ್ಥಾಪಕ ಟಿ.ವಿ.ನರಸಿಂಹಮೂರ್ತಿ, ಜಿಪಂ ಮಾಜಿ ಸದಸ್ಯ ಚೌಡಪ್ಪ, ಕೆ.ಪ್ರಕಾಶ್, ಸಾವಿತ್ರಮ್ಮ, ನಾಗರಾಜು, ಪ್ರಮೀಳಮ್ಮ, ನಾಗರತ್ನಮ್ಮ, ಸಾಧಿಕ್, ಸಿದ್ದಗಂಗಪ್ಪ, ಎಡಿಓ ಮಧುಸೂದನ್, ಶಿವಣ್ಣ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!