ತಿಪಟೂರು: ಕೊಬ್ಬರಿಗೆ ಬೆಂಬಲ ಬೆಲೆ 25 ಸಾವಿರಕ್ಕೆ ಆಗ್ರಹಿಸಿ ರೈತ ಸಂಘಟನೆಗಳು ಕರೆದಿದ್ದ ಸ್ವಯಂ ಪ್ರೇರಿತ ತಿಪಟೂರು ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ ಕಲ್ಪತರು ನಾಡು ತಿಪಟೂರು ನಗರ ಸ್ಥಬ್ದವಾಗಿತ್ತು. ಗುರುವಾರ ಬೆಳಗ್ಗೆಯಿಂದಲೇ ಸ್ವಯಂ ಅಂಗಡಿ ಮುಗ್ಗಟ್ಟುಗಳು ಹೋಟೆಲ್ ಗಳು ಬಾಗಿಲು ಮುಚ್ಚಿ ಬೆಂಬಲ ಸೂಚಿಸಿದವು. ಎಂದಿನಂತೆ ಶಾಲಾ- ಕಾಲೇಜುಗಳು ಆಸ್ಪತ್ರೆ ಕಾರ್ಯ ನಿರ್ವಹಿಸಿದವು.
ರೈತ ಸಂಘಟನೆ ಪದಾಧಿಕಾರಿಗಳು ನಗರದಾದ್ಯಂತ ಸಂಚರಿಸಿ ಸರ್ಕಾರದ ವಿರುದ್ಧ ಘೋಟಣೆ ಕೂಗಿ ಕೂಡಲೇ ಕೊಬ್ಬರಿಗೆ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿ ತಾಲ್ಲೂಕು ಕಚೇರಿಯ ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಕೊಬ್ಬರಿಗೆ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಲು ಹಿಂದೇಟು ಹಾಕುತ್ತಿದೆ. 140 ರೂ. ಇದ್ದ ರಸಗೊಬ್ಬರದ ಬೆಲೆ ಸಾವಿರ ಆಸು ಪಾಸಿನಲ್ಲಿದೆ, ಪೆಟ್ರೋಲ್ ಬೆಲೆ ಗಗನಕ್ಕೇರಿದೆ. ಸರ್ಕಾರಿ ನೌಕರರ ಸಂಬಳ ನಾಲ್ಕು ಪಟ್ಟು ಜಾಸ್ತಿಯಾಗಿದೆ, ಆದರೆ ರೈತರು ಬೆಳೆದ ಕೊಬ್ಬರಿ ಬೆಳೆ ಮಾತ್ರ 40 ವರ್ಷಗಳ ಹಿಂದಿನ ಬೆಲೆಗಿಂತ ಕುಸಿತ ಕಂಡಿದ್ದು ಸರ್ಕಾರಗಳು ಅನ್ನದಾತನನ್ನು ಕಡೆಗಣಿಸಿವೆ ಎಂದು ಕಿಡಿಕಾರಿದರು.
ರೈತರಿಗೆ ಅನ್ಯಾಯವೆಸಗಿದ ಸರ್ಕಾರಗಳು ರೈತ ವಿರೋಧಿ ಸರ್ಕಾರಗಳಾಗಿರುತ್ತವೆ, ಕೂಡಲೇ ಜಿಲ್ಲೆಯ ಕೊಬ್ಬರಿ ಬೆಳೆಗಾರರ ಹಿತದೃಷ್ಟಿಯಿಂದ ಇರುವ ಬೆಂಬಲ ಬೆಲೆಗೆ ಕೇಂದ್ರ ಸರ್ಕಾರ 5 ಸಾವಿರ ಹಾಗೂ ರಾಜ್ಯ ಸರ್ಕಾರ 5 ಸಾವಿರ ಬೆಂಬಲ ಬೆಲೆ ನೀಡಬೇಕು. ಹೊರ ರಾಜ್ಯದ ಆಮದು ವಸ್ತುಗಳಿಗೆ ಶೇ.45 ತೆರಿಗೆ ವಿಧಿಸಿ ಅದೇ ತೆರಿಗೆ ಹಣವನ್ನು ಕೂಬ್ಬರಿಗೆ ನೀಡಬೇಕು ಎಂದು ಆಗ್ರಹಿಸಿದರು.
ರೈತ ಹೋರಾಟಗಾರ ಹಾಗೂ ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಮಾತನಾಡಿ, ಕೊಬ್ಬರಿ ಬೆಂಬಲ ಬೆಲೆಗೆ ರೈತರೊಂದಿಗೆ ಸಾಕಷ್ಟು ಹೋರಾಟ ಮಾಡಿದ್ದೇನೆ, ಜಿಲ್ಲೆಯ ಸಚಿವದ್ವಯರು ಹಿಂದಿನ ಸರ್ಕಾರ ಅಧಿಕಾರದಲ್ಲಿದ್ದಾಗ ರೈತರ ಪರ ಧ್ವನಿ ಎತ್ತಿ ಮಾತನಾಡಿದರು. ಆದರೆ ಅಧಿಕಾರದ ಗದ್ದುಗೆ ಸಿಕ್ಕಿದಾಗ ಮೈ ಮರೆತಿದ್ದಾರೆ. ಜಿಲ್ಲೆಯ ಜನರು, ರೈತರು ಬುದ್ಧಿವಂತರಿದ್ದು ಘಟಾನುಘಟಿ ಸಚಿವರು ಮತ್ತು ಶಾಸಕರನ್ನು ಮನೆಗೆ ಕಳಿಸಿದ್ದಾರೆ. ಚುನಾವಣಾ ಸಮಯದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 15 ಸಾವಿರ ಬೆಂಬಲ ಬೆಲೆ ನೀಡುತ್ತೇವೆ ಎಂದು ಅಧಿಕಾರ ಪಡೆದು ಸುಮ್ಮನಾಗಿದ್ದಾರೆ. ಮುಂದಿನ ಹೋರಾಟದಲ್ಲಿ ಅರಸೀಕೆರೆಯಿಂದ ಬೆಂಗಳೂರಿನ ವಿಧಾನಸೌಧಕ್ಕೆ ರೈತರೊಂದಿಗೆ ಮುತ್ತಿಗೆ ಹಾಕುವ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದರು.
ಹಸಿರು ಸೇನೆ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಮಾತನಾಡಿ, ಸ್ವಾಮಿನಾಥನ್ ವರದಿ ಆಯೋಗದಂತೆ ಉತ್ಪಾದನಾ ವೆಚ್ಚದ ರೈತರ ಲಾಭ ಶೇ.50% ನೀಡಬೇಕು, ಎಂಎಸ್ ಪಿ ಬೆಲೆ ದಕ್ಷಿಣ ಕನ್ನಡ ಕರಾವಳಿ ತೆಂಗು ಬೆಳೆ ಆಧಾರದ ಮೇಲೆ ಬೆಲೆ ನಿಗದಿ ಮಾಡಬಾರದು, ಒಂದು ಬೆಳೆ ಒಂದು ಜಿಲ್ಲೆ ಆಯ್ಕೆಯಂತೆ ತುಮಕೂರು ಜಿಲ್ಲೆ ಕೊಬ್ಬರಿ ಬೆಲೆಗೆ ಆಯ್ಕೆ ಮಾಡಿ ಬೆಲೆ ನೀಡಬೇಕು. ರಾಜ್ಯದ ಎಲ್ಲಾ ಉತ್ಪನ್ನಗಳಿಗೆ ಎಂಆರ್ ಪಿ ಬೆಲೆಯಂತೆ ಕೊಬ್ಬರಿಗೆ ಏಕೆ ನಿಗದಿ ಮಾಡಬಾರದು ಎಂದು ಪ್ರಶ್ನಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಬಸ್ತೀಹಳ್ಳಿ ರಾಜಣ್ಣ ಮಾತನಾಡಿ, ಈ ದಿನದ ಬಂದ್ ಗೆ ಇಡೀ ತಿಪಟೂರು ಸಂಪೂರ್ಣ ಬೆಂಬಲ ನೀಡಿದ್ದು, ರೈತರ ಪರ ನಿಂತಿರುವುದು ಉತ್ತೇಜನ ನೀಡಿದೆ ರೈತರ ಪರ ನಿಲ್ಲುತ್ತೇವೆ ಎಂದು ಅಧಿಕಾರ ಪಡೆದು ರೈತರಿಗೆ ವಂಚಿಸುವ ಸರ್ಕಾರ ಮುಂದಿನ ಚುನಾವಣೆಯಲ್ಲಿ ಭಿಕ್ಷುಕರಂತೆ ಮತ ಕೇಳಲು ಮನೆ ಬಾಗಿಲಿಗೆ ಬರುತ್ತಾರೆ. ರೈತ ದೇಶಕ್ಕೆ ಅನ್ನ ನೀಡುತ್ತಾನೆ ಅನ್ನದಾತನದ ಬೆಂಬಲಕ್ಕೆ ದೇಶ ನಿಲ್ಲಬೇಕು ಎಂದರು
ಈ ಸಮಯದಲ್ಲಿ ಮನವಿ ಸ್ವೀಕರಿಸಿದ ತಾಲ್ಲೂಕು ದಂಡಾಧಿಕಾರಿ ಪವನ್ ಕುಮಾರ್ ಮಾತನಾಡಿ ರೈತರ ಹೋರಾಟ ಮತ್ತು ಬಂದ್ ಶಾಂತಿಯುತವಾಗಿದೆ. ಇಂತಹ ಹೋರಾಟಕ್ಕೆ ಸ್ವಾಗತ, ಮನವಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸುತ್ತೇನೆ ಎಂದರು.
ಪ್ರತಿಭಟನೆಯಲ್ಲಿ ಜಕ್ಕನಹಳ್ಳಿ ಲಿಂಗರಾಜು, ಗೊರಗುಂಡನ ಹಳ್ಳಿ ಸುದರ್ಶನ್, ರಂಜಿತ್, ಗೋಪಾಲ್, ನೂರಾರು ರೈತರು ಇದ್ದರು.
Comments are closed.