ಗ್ರಾಮಾಂತರದಲ್ಲಿ ಅಕ್ರಮ ಮದ್ಯಕ್ಕೆ ಕಡಿವಾಣ ಹಾಕಿ

ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಶಾಸಕ ಬಿ.ಸುರೇಶ್ ಗೌಡ ಸೂಚನೆ

115

Get real time updates directly on you device, subscribe now.


ತುಮಕೂರು: ತುಮಕೂರು ತಾಲೂಕು, ಅದರಲ್ಲಿಯೂ ಗ್ರಾಮಾಂತರ ಕ್ಷೇತ್ರದಲ್ಲಿ ಅಬಕಾರಿ ಇಲಾಖೆ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದ್ದು, ಗ್ರಾಮಾಂತರ ಪ್ರದೇಶದ ಮನೆ ಮನೆಗಳಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಮದ್ಯಕ್ಕೆ ಕಡಿವಾಣ ಹಾಕದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತುಕ್ರಮಕ್ಕೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುವುದಾಗಿ ಶಾಸಕ ಬಿ.ಸುರೇಶಗೌಡ ಎಚ್ಚರಿಕೆ ನೀಡಿದ್ದಾರೆ.

ನಗರದ ತಾಪಂ ಸಭಾಂಗಣದಲ್ಲಿ ಶಾಸಕ ಅಧ್ಯಕ್ಷತೆಯಲ್ಲಿ ನಡೆದ 2023- 24 ನೇ ಸಾಲಿನ ಮೊದಲ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿ, ಗಂಗೋನ ಹಳ್ಳಿಯಲ್ಲಿ ಯುವಕನೊಬ್ಬ ಮದ್ಯ ಕುಡಿದ ಅವಲಿನಲ್ಲಿ ಕೆರೆಗೆ ಹಾರಿದ್ದಾನೆ. ಪ್ರತಿ ಗ್ರಾಮದ ಹತ್ತಾರು ಮನೆಗಳಲ್ಲಿ ಮದ್ಯ ಮಾರಾಟ ಯಾವುದೇ ಎಗ್ಗಿಲ್ಲದೆ ನಡೆಯುತ್ತಿದೆ. ಕೆಲವೊಂದು ಮದ್ಯದಂಗಡಿ ಮಾಲೀಕರೇ ತಮ್ಮ ವ್ಯಾಪಾರ ಹೆಚ್ಚಿಸಿಕೊಳ್ಳಲು ಮನೆ ಮನೆಗಳಲ್ಲಿ ಮದ್ಯ ಮಾರಾಟಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂಬ ಆರೋಪವಿದೆ. ಕೂಡಲೇ ಆರೋಪವಿರುವ ಹಳ್ಳಿಗಳ ಮೇಲೆ ದಾಳಿ ಮಾಡಿ, ಕ್ರಮ ಕೈಗೊಳ್ಳದಿದ್ದರೆ ಮಹಿಳೆಯರೊಂದಿಗೆ ನಿಮ್ಮ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಶಾಸಕರು ಎಚ್ಚರಿಸಿದರು.

ಅಬಕಾರಿ ನಿಯಮದ ಪ್ರಕಾರ ಸಿಎಂ 07 ಮತ್ತು 09 ಅಂಗಡಿಗಳನ್ನು ಇಂತಿಷ್ಟು ಗಂಟೆಯಿಂದ ತೆರೆಯಬೇಕೆಂಬ ನಿಯಮವಿದ್ದರೂ ಬೆಳಗ್ಗೆ 7 ಗಂಟೆಗೆ ತೆರೆಯಲಾಗುತ್ತಿದೆ. ಅಲ್ಲದೆ ಗ್ರಾಮೀಣ ಭಾಗದಲ್ಲಿ ರೈತಾಪಿ ಜನರಿಗೆ ಕುಡಿಯಲು ಮದ್ಯ ಸಾಲ ನೀಡಿ ದುಬಾರಿ ಹಣ ವಸೂಲಿ ಮಾಡಿರುವ ಕ್ರಮಗಳಿವೆ. ನಿಮ್ಮ ಇಲಾಖೆಗೆ ಜನರ ಪ್ರಾಣಕ್ಕಿಂತ ಆದಾಯಕ್ಕಷ್ಟೇ ಸೀಮಿತವಾಗಿದೆ, ಹಾಗಾಗಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕದಿದ್ದರೆ ಇಲ್ಲಿನ ಅಧಿಕಾರಿಗಳ ವಿರುದ್ಧ ನೇರ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆಯುತ್ತೇನೆ. ಅಲ್ಲದೆ ಸದನದಲ್ಲಿಯೂ ಪ್ರಾಸ್ತಾಪಿಸುತ್ತೇನೆ ಎಂದು ಶಾಸಕ ಬಿ.ಸುರೇಶಗೌಡ ತಿಳಿಸಿದರು.

ಎಸ್ ಸಿಪಿ, ಟಿಎಸ್ ಪಿ ಕಾಮಗಾರಿ ಪೂರ್ಣಗೊಳಿಸಲು ತಾಕೀತು: ಲೋಕೋಪಯೋಗಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಸೇರಿದಂತೆ ವಿವಿಧ ಇಲಾಖೆಗಳ ಅಡಿಯಲ್ಲಿ ಕಾರ್ಯ ನಿರ್ವ ಹಿಸುತ್ತಿರುವ ನಿರ್ಮಾಣ ಕೆಲಸದಲ್ಲಿ ತೊಡಗಿರುವ ಏಜೆನ್ಸಿಗಳು ಮುಂದಿನ ಮೂರು ತಿಂಗಳ ಒಳಗೆ ಎಸ್ಸಿಪಿ, ಟಿಎಸ್ಸಿಪಿ ಯೋಜನೆಯಡಿ ತೆಗೆದುಕೊಂಡಿರುವ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದ ಅವರು ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಗುತ್ತಿಗೆದಾರರಿಂದ ಒಳ್ಳೆಯ ಕಾಮಗಾರಿ ಮಾಡಿಸಲು ಸೂಚನೆ ನೀಡಿದ ಶಾಸಕರು ಶಾಲಾ ಕೊಠಡಿ, ಶೌಚಾಲಯ, ಸಂಪರ್ಕ ರಸ್ತೆ ಕಾಮಗಾರಿಗಳನ್ನು ಮುಂದಿನ ಮೂರು ತಿಂಗಳ ಒಳಗೆ ಪೂರ್ಣಗೊಳಿಸಿ ಜಮೀನಿನ ತಕರಾರು ಇರುವ ಕಡೆ, ಕಾಮಗಾರಿ ಬದಲಾವಣೆಗೆ ಪ್ರಾಸ್ತಾವನೆ ಸಲ್ಲಿಸಿದರೆ ಅಗತ್ಯ ಮಾರ್ಪಾಡು ಮಾಡಿಕೊಡಲು ಸಿದ್ಧ ಎಂದು ಸಲಹೆ ನೀಡಿದರು.

ಮಳೆಯ ಕೊರತೆಯಿಂದ ಬಿತ್ತನೆ ಕುಂಠಿತ: ಕೃಷಿ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿ ವಾರ್ಷಿಕ ಸರಾಸರಿ ಮಳೆ ವಾಡಿಕೆ ಮಳೆಗಿಂತ ಹೆಚ್ಚಿದ್ದರೂ ಆಗಸ್ಟ್ ತಿಂಗಳಲ್ಲಿ ಆಗಬೇಕಿದ್ದ ವಾಡಿಕೆ ಮಳೆ 117 ಎಂಎಂ ಬದಲು ಕೇವಲ 07 ಎಂಎಂ ಮಾತ್ರ ಆಗಿದೆ. ಇದರಿಂದ ತಾಲೂಕಿನ ಒಟ್ಟು 21 ಸಾವಿರ ಹೆಕ್ಟೇರ್ ರಾಗಿ ಬಿತ್ತನೆ ಪ್ರದೇಶದಲ್ಲಿ 13 ಸಾವಿರ ಹೆಕ್ಟೇರ್ ನಲ್ಲಿ ಮಾತ್ರ ಬಿತ್ತನೆಯಾಗಿದೆ, ರಾಗಿ ಬಿತ್ತನೆಗೆ ಮುಂದಿನ 10- 12 ದಿನಗಳು ಮಾತ್ರ ಕಾಲಾವಕಾಶವಿದ್ದು, ಈ ವೇಳೆ ಮಳೆ ಬಂದರೆ ಬಿತ್ತನೆ ಪ್ರಮಾಣ ಹೆಚ್ಚಲಿದೆ. ತಾಲೂಕಿನ ರಸಗೊಬ್ಬರ, ಬಿತ್ತನೆ ಬೀಜದ ಕೊರೆಯಿಲ್ಲ, ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ರೈತರಿಗೆ ಹಂಚಿಕೆ ಮಾಡಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ಗೆ ಸಂಬಂಧಿಸಿದಂತೆ ಹೆಸರು ನೋಂದಾಯಿಸಿದ 33453 ಜನರಲ್ಲಿ 6297 ಜನರು ಇಕೆವೈಸಿ ಮಾಡಿಸಿಲ್ಲ, ಅವರು ಮಾಡಿಸಿದರೆ ಅವರ ಖಾತೆಗೆ ಹಣ ಸಂದಾಯವಾಗಲಿದೆ ಎಂದರು.

ಪ್ರತಿ ಗ್ರಾಪಂ ಒಂದು ಹೈಸ್ಕೂಲ್ ಗೆ ಸೂಚನೆ: ಗ್ರಾಮಾಂತರ ಕ್ಷೇತ್ರದ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಹೈಸ್ಕೂಲ್ ಇರಬೇಕೆಂಬುದು ನಮ್ಮ ಕನಸು. ಗೂಳೂರು, ಹೊನ್ನುಡಿಕೆ, ಮಲ್ಲಸಂದ್ರ, ದೊಡ್ಡ ನಾರವಂಗಲ, ಸೋರೆಕುಂಟೆ, ನೆಲ್ ಹಾಳ್, ತಿಮ್ಮರಾಜಯನ ಹಳ್ಳಿ, ಬುಗುಡನ ಹಳ್ಳಿ, ಸೀತಕಲ್ಲು ಸೇರಿದಂತೆ ಹತ್ತು ಗ್ರಾಮ ಪಂಚಾಯಿತಿ ಹೆಡ್ ಕ್ವಾಟರ್ ನಲ್ಲಿ ಸರಕಾರಿ ಹೈಸ್ಕೂಲ್ ಗಳಿಲ್ಲ, ಈಗಾಗಲೇ ಈ ಜಾಗಗಳಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿದ್ದು, ಇಲ್ಲಿಯೇ ಹೈಸ್ಕೂಲ್ ಪ್ರಾರಂಭಿಸಲು ಶಿಕ್ಷಣ ಇಲಾಖೆಗೆ ಪ್ರಾಸ್ತಾವನೆ ಸಲ್ಲಿಸುವಂತೆ ಸೂಚನೆ ಬಿಇಓ ಅವರಿಗೆ ಸೂಚಿಸಿದ ಶಾಸಕರು, ಇದರಿಂದ ಬಡವರು, ದೀನ ದಲಿತರು, ಕೂಲಿ ಕಾರ್ಮಿಕರ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಶಾಸಕ ಬಿ.ಸುರೇಶಗೌಡ ತಿಳಿಸಿದರು.

ಅನುದಾನ ನೀಡುವುದು ಬ್ಯಾಂಕಿನಲ್ಲಿ ಇಡಲಿಕ್ಕಲ: ಸರಕಾರ ಸಮಾಜ ಕಲ್ಯಾಣ ಇಲಾಖೆಗೆ 2014- 15ನೇ ಸಾಲಿನಲ್ಲಿ 3 ಅಂಬೇಡ್ಕರ್ ಭವನಗಳ ನಿರ್ಮಾಣಕ್ಕೆ ತಲಾ 5 ಲಕ್ಷ ರೂ. ಅನುದಾನ ನೀಡಿದೆ. ಕಟ್ಟಡ ನಿರ್ಮಾಣಕ್ಕೆ ಅನುದಾನ ಸಾಲದು ಎಂಬ ಕಾರಣಕ್ಕೆ ಇದುವರೆಗೂ ಕಾಮಗಾರಿ ಕೈಗೊಂಡಿಲ್ಲ, ಹಣವನ್ನು ಡಿಸಿ ಮತ್ತು ಜೆಡಿ ಸಮಾಜ ಕಲ್ಯಾಣ ಹೆಸರಿನಲ್ಲಿ ಠೇವಣಿ ಇಡಲಾಗಿದೆ. ಅನುದಾನ ನೀಡುವುದು ಹಣವನ್ನು ಬ್ಯಾಂಕಿನಲ್ಲಿ ಇಟ್ಟು ಬಡ್ಡಿ ಪಡೆಯುವುದಕ್ಕಲ್ಲ, ಇದೊಂದು ದೊಡ್ಡ ದಂಧೆಯಾಗಿದೆ. ಅನುದಾನದ ಸಾಲದು ಎಂದಾದರೆ ಹೆಚ್ಚುವರಿ ಅನುದಾನಕ್ಕೆ ಪ್ರಾಸ್ತಾವನೆ ಸಲ್ಲಿಸಬೇಕು, ಇಲ್ಲವೆ ವಾಪಸ್ ಕಳುಹಿಸಬೇಕು, ಹೀಗೆ ಬ್ಯಾಂಕ್ ನಲ್ಲಿ ಇಟ್ಟರೆ ಉದ್ದೇಶ ಈಡೇರುತ್ತದೆಯೇ ಎಂದು ಪ್ರಶ್ನಿಸಿದ ಶಾಸಕರು ಈ ಸಂಬಂಧ ಇಲಾಖೆಯೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

ಸಭೆಯಲ್ಲಿ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರು, ಇಓ ಹರ್ಷಕುಮಾರ್ ಹಾಗೂ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!