ತುಮಕೂರು: ಸಾಮಾಜಿಕ ಸಂವೇದನೆ ಎಲ್ಲಾ ಸಾಹಿತಿಗಳಲ್ಲಿಯೂ ಇರಬೇಕು, ಸಾಮಾಜಿಕ, ಪರಿಸರ ಅಸ್ಮಿತೆಯನ್ನು ಆಧರಿಸಿ ಭಾಷಾಂತರಿಸಿದಾಗ ಮಾತ್ರ ಕೃತಿಗೆ ಸಾಮಾಜಿಕ ಸಾಂಸ್ಕೃತಿಕ ಪ್ರೇರಣಾ ಶಕ್ತಿ ಬರಲಿದೆ ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದರು.
ತುಮಕೂರು ವಿಶ್ವ ವಿದ್ಯಾಲಯದ ಡಾ.ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರವು ಝೆನ್ ಟೀಮ್ ಸಹಯೋಗದೊಂದಿಗೆ ಗುರುವಾರ ಆಯೋಜಿಸಿದ್ದ ಬಿ.ಆರ್.ಜಯರಾಮರಾಜೇ ಅರಸು ಅವರ ಅನುವಾದಿತ ಕೃತಿ “ಹೆಣ ಹೊರುವವನ ವೃತ್ತಾಂತ” ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಬಿ.ಆರ್.ಜಯರಾಮರಾಜೇ ಅರಸು ಅವರು ನೀತಿ ನಿಯಮಗಳ ಸಮನ್ವಯಕಾರರು, ನಿಯಮವನ್ನು ನೀತಿಯ ಮಡಿಲಿಗೆ ಒಪ್ಪಿಸಿ ಸಾಮಾಜಿಕ ಕಾರ್ಯಗಳನ್ನು ಮಾಡಿದವರು, ಸಾಮಾಜಿಕತೆಯ ಬೇರು ಬರೆವಣಿಗೆಯಲ್ಲಿ ಬೆರೆತಾಗ ಮಾತ್ರ ಇಂತಹ ಕೃತಿ ಹುಟ್ಟಲು ಸಾಧ್ಯ ಎಂದರು.
ನಿಘಂಟಿನ ಆಧಾರದ ಮೇಲೆ ಭಾಷಾಂತರ ಮಾಡಿದರೆ ಅದು ಶುಷ್ಕ ಕೃತಿಯಾಗುತ್ತದೆ. ಮೂಲ ಕೃತಿಯ ಭಾವ ಮತ್ತು ಸಾಮಾಜಿಕ ಪರಿಸರ, ಅಸ್ಮಿಯತೆ ಇಟ್ಟುಕೊಂಡು ಒಂದು ಕೃತಿಯ ಅನುವಾದ ಮಾಡಬೇಕು, ಮಾನಸಿಕ ಮಡಿವಂತಿಕೆ ಮೀರಿದಾಗ ಮಾತ್ರ ನಾವು ಮತ್ತೊಂದು ಕೃತಿಯ ಒಳ ಹೊಕ್ಕಲು ಸಾಧ್ಯ, ಒಂದು ವಿಷಯ, ವಸ್ತು ಹಾಗೂ ಭಾಷೆಯನ್ನು ನಮ್ಮದನ್ನಾಗಿಸಿಕೊಳ್ಳುವುದರ ಮೂಲಕ ಒಂದು ಭಾಷೆ ಬೆಳೆಯುತ್ತದೆ ಎಂದರು.
ವೈಯಕ್ತಿಕ, ಸಾಮಾಜಿಕತೆಯಿಂದ ಎರಡು ಬೇರೆ ಕೃತಿ ಹುಟ್ಟಲು ಸಾಧ್ಯ, ವೈಯಕ್ತಿಕ ಎನ್ನವುದು ನನ್ನ ಅಂತರಂಗವನ್ನು ಯಾವುದು ಪ್ರೇರೇಪಿಸುತ್ತದೆ, ನನ್ನ ಅಂತರಂಗದಲ್ಲಿ ಪ್ರಶ್ನೆಗಳನ್ನು ಹುಟ್ಟಿಸುತ್ತದೆ. ಬಹಿರಂಗದಲ್ಲಿರುವ ಬದುಕೇ ನನ್ನ ಅಂತರಂಗಕ್ಕೆ ಬರುತ್ತದೆ, ಅಂತರಂಗದ ಕುಲುಮೆಯಲ್ಲಿ ಅದು ರೂಪುಗೊಳ್ಳುತ್ತದೆ. ಅಲ್ಲಿ ವೈಯಕ್ತಿಕ ದೃಷ್ಟಿಕೋನಗಳಿರಬಹುದು, ನನ್ನ ಅನುಭವ ಇರಬಹುದು, ಇವುಗಳೆಲ್ಲವೂ ಸಹಾಯ ಮಾಡುತ್ತವೆ. ಸಾಮಾಜಿಕತೆ ಇಲ್ಲದೆ ವೈಯಕ್ತಿಕ ಅಂಶಗಳು ಸರ್ವ ಸ್ವತಂತ್ರವಲ್ಲ, ಸಾಹಿತಿಗೆ ಸಾಮಾಜಿಕ ಸಂವೇದನೆ ಇರಲೇಬೇಕು ಎಂದು ನಂಬಿರುವವನು ನಾನು ಎಂದರು.
ತುಮಕೂರು ವಿವಿಯ ಕುಲಸಚಿವೆ ನಾಹಿದಾ ಜಮ್ಜಮ್ ಮಾತನಾಡಿ, ಬರಗೂರು ರಾಮಚಂದ್ರಪ್ಪ ಅವರು ನಮಗೆಲ್ಲಾ ಆದರ್ಶವಾಗಿದ್ದಾರೆ, ಐಎಎಸ್ ಅಧಿಕಾರಿ ಬಿ.ಆರ್.ಜಯರಾಮರಾಜೇ ಅರಸು ಅವರು ನಮ್ಮ ವೃತ್ತಿ ಜೀವನದ ಆದರ್ಶವಾಗಿದ್ದಾರೆ. ಉತ್ತಮ ಆಡಳಿತಕ್ಕೆ ಜಯರಾಮರಾಜೇ ಅರಸು ಅವರು ಮಾದರಿಯಾಗಿದ್ದಾರೆ. ಹೆಣ ಹೊರುವವನ ವೃತ್ತಾಂತ ಕೃತಿಯಲ್ಲಿ ಹೆಣ ಹೊರುವ ಪದ್ಧತಿಯ ವಿಸ್ಮತರೂಪ ತಿಳಿಸಿದ್ದಾರೆ ಎಂದು ಹೇಳಿದರು.
ಕೃತಿಯ ಲೇಖಕ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಬಿ.ಆರ್.ಜಯರಾಮರಾಜೇ ಅರಸು ಮಾತನಾಡಿ, ಹೆಣ ಹೊರುವವನ ವೃತ್ತಾಂತ ಕೃತಿಯಲ್ಲಿ ಬರುವ ಪ್ರತಿಯೊಂದು ಪಾತ್ರ ಮತ್ತು ಸಂಗತಿಗಳ ಬಗ್ಗೆ ಅರ್ಥಪೂರ್ಣವಾಗಿ ವಿವರಿಸಿದರು.ಅನುವಾದ ಮಾಡುವಾಗ ಯಾವ ಯಾವ ರೀತಿ ಅಧ್ಯಯನ ಮಾಡಿದ್ದರು, ನವ್ಯ ಪದಗಳ ಸಂಗ್ರಹಣೆ ಹೇಗೆ ಮಾಡಲಾಯಿತು ಎಂದು ತಿಳಿಸಿದರು.
ತುಮಕೂರು ವಿವಿಯಡಾ.ಡಿ.ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥೆ ಪ್ರೊ.ಅಣ್ಣಮ್ಮ ಮಾತನಾಡಿ, ಹೆಣ ಹೊರುವವನ ವೃತ್ತಾಂತ ಕೃತಿಯ ಕರ್ತೃ ಬಿ.ಆರ್.ಜಯರಾಮರಾಜೇ ಅರಸು ಅವರು ಉಜ್ವಲ ಪ್ರತಿಭೆ, ಇನ್ನಷ್ಟು ಕೃತಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು ಎಂದರು.
ತುಮಕೂರು ವಿವಿಯಡಾ.ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕಿ ಡಾ.ಗೀತಾ ವಸಂತ ಹೆಣ ಹೊರುವವನ ವೃತ್ತಾಂತ ಕೃತಿಯ ಕುರಿತು ಮಾತನಾಡಿ, ಹೆಣ ಹೊರುವವನ ವೃತ್ತಾಂತ ಕೃತಿಯಲ್ಲಿ ಕಥಾ ಸಂಗಮವನ್ನು ಕಾಣಬಹುದು. ಇಲ್ಲಿ ನೆನಪುಗಳು ಕನ್ನಡಿಯಾಗಿವೆ, ಕಾನೂನುಗಳ ವಿದ್ಯಾಮಾನಗಳ ಚರ್ಚೆ, ರಾಜಕೀಯ ಚಿಂತನೆ, ಇವೆಲ್ಲವನ್ನೂ ಒಳಗೊಂಡಿರುವುದನ್ನೂ ಗಮನಿಸಬಹುದು, ಈ ಕೃತಿ ಕನ್ನಡಕ್ಕೆ ಹೊಸ ಸಂವೇದನೆ ಪರಿಚಯಿಸುತ್ತದೆ ಎಂದು ತಿಳಿಸಿದರು.
ಇರಾನಿನ ಪಾರ್ಸಿ ಧರ್ಮದಜ್ವ ರಾಷ್ಟ್ರೀ ಜನಾಂಗದ ಪರಿಕಲ್ಪನೆಯನ್ನು ಈ ಪುಸ್ತಕದಲ್ಲಿ ತುಂಬಾ ಸುಂದರವಾಗಿ ಕಟ್ಟಿಕೊಡಲಾಗಿದೆ. ಈ ಧರ್ಮದ ಶುದ್ಧತೆ ಮತ್ತು ಮಾಲಿನ್ಯದ ಬಗ್ಗೆ ಅಂದರೆ ಆ ಜನಾಂಗದಲ್ಲಿ ಮರಣದ ನಂತರ ಮೃತ ದೇಹದ ಅಂತ್ಯಕ್ರಿಯೆಯ ವಿಧಿ ವಿಧಾನದ ಬಗ್ಗೆ ಇಲ್ಲಿ ಅರ್ಥಪೂರ್ಣವಾಗಿ ತಿಳಿಸಿದ್ದಾರೆ ಎಂದರು.
ತುಮಕೂರಿನ ಝೆನ್ ಟೀಮ್ ಮುಖ್ಯಸ್ಥ ಉಗಮ ಶ್ರೀನಿವಾಸ್, ಲೇಖಕ ಕೆ.ಪಿ.ಲಕ್ಷ್ಮೀಕಾಂತರಾಜೇ ಅರಸ್ ಇತರರು ಹಾಜರಿದ್ದರು.
Comments are closed.