ಸರ್ಕಾರಿ ವ್ಯಾಜ್ಯ ನಿರ್ವಹಣೆಗೆ ವಿಷಯ ಪರಿಣತಿ ಅಗತ್ಯ

112

Get real time updates directly on you device, subscribe now.


ತುಮಕೂರು: ಖಾಸಗಿಯವರು ಅಕ್ರಮವಾಗಿ ಒತ್ತುವರಿ ಮಾಡದಂತೆ ಸರ್ಕಾರಿ ಆಸ್ತಿ ಸಂರಕ್ಷಿಸಿ ನ್ಯಾಯಾಲಯದಲ್ಲಿ ವ್ಯಾಜ್ಯಗಳನ್ನು ನಿರ್ವಹಿಸಲು ಸರ್ಕಾರಿ ಅಧಿಕಾರಿ, ನೌಕರರು ಕಾನೂನು ವಿಷಯದಲ್ಲಿ ಪರಿಣತಿ ಹೊಂದಿರುವುದು ಅತ್ಯಗತ್ಯವೆಂದು ನಿವೃತ್ತ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಬೆಂಗಳೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಾಜಿ ಅಧ್ಯಕ್ಷ ವೆಂಕಟ ಸುದರ್ಶನ್ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ಸಹಯೋಗದಲ್ಲಿ ನಗರದ ಕನ್ನಡ ಭವನದಲ್ಲಿಂದು ಸರ್ಕಾರಿ ಅಧಿಕಾರಿ, ನೌಕರರಿಗಾಗಿ ಸರ್ಕಾರದ ಹಾಗೂ ಸಾರ್ವಜನಿಕ ಆಸ್ತಿಗಳ ಸಂರಕ್ಷಣೆ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿ, ಸರ್ಕಾರಿ ಹಾಗೂ ಸಾರ್ವಜನಿಕ ಆಸ್ತಿ ಸಂರಕ್ಷಣೆಗಾಗಿ ಅಧಿಕಾರಿ, ನೌಕರರು ಕಾಲ- ಕಾಲಕ್ಕೆ ಹೊರಡಿಸಲಾಗುವ ಕಾನೂನು ತಿದ್ದುಪಡಿಗಳ ಬಗ್ಗೆ ತಿಳಿದುಕೊಂಡಿರಬೇಕು. ಸರ್ಕಾರದ ವಿರುದ್ಧ ಯಾವುದೇ ವ್ಯಕ್ತಿಗಳು ನ್ಯಾಯಾಲಯದಲ್ಲಿ ದಾವೆ ಹೂಡಿದಾಗ ಯಾವ ರೀತಿ ಕ್ರಮ ಅನುಸರಿಸಬೇಕೆಂದು ಮಾಹಿತಿ ನೀಡಿದರು.

ವಿಷಯ ನಿರ್ವಾಹಕರಿಗೆ ಕಾನೂನಿನ ಬಗ್ಗೆಯಿರುವ ಅರಿವಿನ ಕೊರತೆಯಿಂದ ಹಾಗೂ ನ್ಯಾಯಾಲಯದಲ್ಲಿರುವ ಸರ್ಕಾರಿ ವ್ಯಾಜ್ಯಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡದೆ ಇರುವುದರಿಂದ ಪ್ರಕರಣಗಳು ಬಗೆಹರಿಯದೆ ನ್ಯಾಯಾಲಯದಲ್ಲಿ ಬಾಕಿ ಉಳಿದಿವೆ ಎಂದು ತಿಳಿಸಿದರಲ್ಲದೆ ನ್ಯಾಯಾಲಯ ನಿರ್ವಹಣಾ ವಿಧಾನ, ಸಿವಿಲ್ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಸರ್ಕಾರದ ಪರವಾಗಿ ವಾದಿಸಲು ಕಲೆ ಹಾಕಬೇಕಾದ ದಾಖಲೆ ಮತ್ತು ಸಾಕ್ಷಿಗಳು, ಸರ್ಕಾರದ ವಿರುದ್ಧ ಬಂದ ನೋಟೀಸುಗಳಿಗೆ ಯಾವ ರೀತಿ ಉತ್ತರಿಸಬೇಕೆಂಬ ಬಗ್ಗೆ ಸರ್ಕಾರಿ ಅಧಿಕಾರಿ, ನೌಕರರಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಾಗಾರ ಏರ್ಪಡಿಸಲಾಗಿದ್ದು, ಅಧಿಕಾರಿ, ನೌಕರರು ಕಾರ್ಯಾಗಾರದಿಂದ ಕಾನೂನು ಅರಿವು ಪಡೆದು ಸರ್ಕಾರಿ, ಸಾರ್ವಜನಿಕ ಆಸ್ತಿ ಸಂರಕ್ಷಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಸರ್ಕಾರಿ ಆಸ್ತಿ ಸಂರಕ್ಷಣೆಯಲ್ಲಿ ನಿರ್ಲಕ್ಷ್ಯ ತಾಳಿದರೆ ನ್ಯಾಯಾಲಯದ ವ್ಯಾಜ್ಯಗಳನ್ನು ಎದುರಿಸಬೇಕಾದ ಪರಿಸ್ಥಿತಿ ಒದಗಿ ಬರುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು, ನೌಕರರು ನಿಷ್ಠೆ, ಪ್ರಾಮಾಣಿಕ, ಶ್ರದ್ಧೆಯಿಂದ ಕಾರ್ಯ ನಿರ್ವಹಿಸಬೇಕು. ಎಷ್ಟೇ ಉನ್ನತ ಅಧಿಕಾರಿಗಳಾಗಿದ್ದರೂ ಕಾನೂನು ವಿಷಯದಲ್ಲಿ ಅರಿವು ಇಲ್ಲದಿದ್ದರೆ ಸರ್ಕಾರದ ವ್ಯಾಜ್ಯಗಳು ನ್ಯಾಯಾಲಯದಲ್ಲಿ ಬಗೆಹರಿಯದೆ ಬಾಕಿ ಉಳಿದುಕೊಳ್ಳುವ ಸಾಧ್ಯತೆ ಹೆಚ್ಚು ಎಂದು ತಿಳಿಸಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ ಕೆ.ಬಿ.ಗೀತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವಂತ ಆಸ್ತಿ ಹೇಗೆ ಕಾಪಾಡಿಕೊಳ್ಳುತ್ತೇವೆಯೋ ಅದೇ ರೀತಿ ಸರ್ಕಾರದ ಅನ್ನ ತಿನ್ನುತ್ತಿರುವ ನಾವೆಲ್ಲಾ ಸರ್ಕಾರಿ ಹಾಗೂ ಸಾರ್ವಜನಿಕರ ಆಸ್ತಿ ಸಂರಕ್ಷಿಸುವಲ್ಲಿ ಆಸಕ್ತಿ ವಹಿಸಬೇಕು. ಸರ್ಕಾರದ ವ್ಯಾಜ್ಯಗಳ ಬಗ್ಗೆ ಕಾಳಜಿಯಿಂದ ಕ್ರಮಕೈಗೊಂಡಲ್ಲಿ ಮೌಲ್ಯಯುತವಾದ ಸರ್ಕಾರಿ ಸ್ಥಳಗಳನ್ನು ಉಳಿಸಿಕೊಳ್ಳಬಹುದಾಗಿದೆ. ಇಲ್ಲದಿದ್ದಲ್ಲಿ ಸರ್ಕಾರಿ ಆಸ್ತಿ ಲಪಟಾಯಿಸುವವರ ಸಂಖ್ಯೆ ನಿಯಂತ್ರಿಸಲು ಕಷ್ಟ ಸಾಧ್ಯವಾಗುತ್ತದೆ ಎಂದರಲ್ಲದೆ, ಇಂಥ ಕೃತ್ಯಗಳಿಗೆ ಒಂದು ರೀತಿಯಲ್ಲಿ ನಾವೂ ಸಹ ಪರೋಕ್ಷವಾಗಿ ಕಾರಣರಾಗುತ್ತೇವೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಮಾತನಾಡಿ, ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ವೆಂಕಟ್ ಸುದರ್ಶನ್ ಅವರು ಸಿವಿಲ್ ದಾವೆಗಳಲ್ಲಿನ ಹಂತಗಳು ಹಾಗೂ ಸರ್ಕಾರಿ ವ್ಯಾಜ್ಯಗಳಲ್ಲಿ ಸರ್ಕಾರಿ ನೌಕರರ ಪಾತ್ರದ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರಲ್ಲದೆ ಸರ್ಕಾರಿ ಆಸ್ತಿ ಕಾಪಾಡುವಲ್ಲಿ ಉದಾಸೀನ ಬೇಡ, ಸರ್ಕಾರಿ ವ್ಯಾಜ್ಯಗಳು ಶೀಘ್ರ ವಿಲೇವಾರಿಯಾಗಲು ಅಧಿಕಾರಿಗಳು ಸಹಕರಿಸಬೇಕು. ಸರ್ಕಾರಿ ಸೇವೆಯಲ್ಲಿರುವವರೆಲ್ಲರೂ ಭಾಗ್ಯಶಾಲಿಗಳು, ಸರ್ಕಾರಿ ಆಸ್ತಿ ಸಂರಕ್ಷಣೆಯಲ್ಲಿ ಕೈಜೋಡಿಸುವ ಮೂಲಕ ಸರ್ಕಾರದ ಋಣ ತೀರಿಸಿ ಋಣಮುಕ್ತರಾಗಬೇಕೆಂದು ಕರೆ ನೀಡಿದರು.

ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿ, ಸರ್ಕಾರಿ, ಸಾರ್ವಜನಿಕರ ಆಸ್ತಿಗೆ ಸರ್ಕಾರಿ ನೌಕರರು ಕಾವಲುಗಾರರಾಗಿರಬೇಕು, ಆಸ್ತಿ ಉಳಿಸುವಲ್ಲಿ ಕಾಳಜಿ ಹೊಂದಿರಬೇಕು, ಜಿಲ್ಲೆಯ ನ್ಯಾಯಾಲಗಳಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರ ಕೊರತೆ ನೀಗಿಸುವ ದೃಷ್ಟಿಯಿಂದ ಆಗಸ್ಟ್ ಮಾಹೆಯೊಳಗೆ 16 ಹುದ್ದೆಗಳನ್ನು ಭರ್ತಿ ಮಾಡಲು ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ನ್ಯಾಯಾಲಯದಲ್ಲಿ ಸರ್ಕಾರಿ ವ್ಯಾಜ್ಯಗಳನ್ನು ಪ್ರತಿನಿಧಿಸಲು ಈ ನೇಮಕಾತಿ ಅನುಕೂಲವಾಗಲಿದೆ. ಸರ್ಕಾರಿ ನೌಕರರು, ಅಧಿಕಾರಿಗಳು ಕೋರ್ಟ್ ಆದೇಶಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು, ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಬಾಕಿ ಇರುವ ವ್ಯಾಜ್ಯಗಳ ಬಗ್ಗೆ 15 ದಿನಗಳಿಗೊಮ್ಮೆ ಪರಿಶೀಲಿಸಿ ವಿಲೇವಾರಿಗೆ ಕ್ರಮವಿಡಲಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ತಹಶೀಲ್ದಾರ್ ಸಿದ್ಧೇಶ್, ಜಿಪಂ ಉಪ ಕಾರ್ಯದರ್ಶಿಗಳಾದ ಹಾಲಸಿದ್ಧಪ್ಪ ಪೂಜೇರಿ ಹಾಗೂ ನರಸಿಂಹಮೂರ್ತಿ, ಮುಖ್ಯ ಲೆಕ್ಕಾಧಿಕಾರಿ ನರಸಿಂಹಮೂರ್ತಿ, ಮುಖ್ಯ ಯೋಜನಾಧಿಕಾರಿ ಸಣ್ಣ ಮಸಿಯಪ್ಪ, ರೇಷ್ಮೆ ಇಲಾಖೆ ಉಪ ನಿರ್ದೇಶಕ ಬಾಲಕೃಷ್ಣ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!