ಪತ್ರಕರ್ತರು ಸರ್ಕಾರದ ಸೌಲಭ್ಯ ಬಳಸಿಕೊಳ್ಳಲಿ

111

Get real time updates directly on you device, subscribe now.


ತುಮಕೂರು: ಪತ್ರಕರ್ತರು ಸರ್ಕಾರದ ವಿವಿಧ ಸೌಲಭ್ಯಗಳ ಫಲಾನುಭವಿಗಳಾಗಿ ಸ್ವ ಉದ್ಯೋಗಿಗಳಾಗುವಂತೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ಕರೆ ನೀಡಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಸ್ವಯಂ ಉದ್ಯೋಗ ಮಾಹಿತಿ ಮತ್ತು ಪ್ರೇರಣಾ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಯಾವುದೇ ಉದ್ಯಮ ಆರಂಭಿಸಿದರೂ ಅವು ಸ್ಪರ್ಧಾತ್ಮಕವಾಗಿರುತ್ತವೆ.
ಉದ್ಯಮಗಳು ಯಶಸ್ವಿಯಾಗಲು ಸ್ಥಳೀಯವಾಗಿ ಲಭ್ಯವಿರುವ ಕಚ್ಚಾ ವಸ್ತುಗಳು ಪ್ರಮುಖ ಪಾತ್ರ ವಹಿಸುತ್ತವೆ. ವಿವಿಧ ಕ್ಷೇತ್ರಗಳಲ್ಲಿ ಇರುವಂತಹ ಅವಕಾಶ ಹಾಗೂ ಸಂಪನ್ಮೂಲಗಳನ್ನು ಗಮನಿಸಿಕೊಂಡು ಉದ್ಯೋಗ ಆರಂಭಿಸಿದರೆ ಯಶಸ್ಸು ಸಿಗುತ್ತದೆ ಎಂದರು.

ಪತ್ರಕರ್ತರ ಕುಟುಂಬ ನೆಮ್ಮದಿಯಿಂದ ಇದ್ದಾಗ ಮಾತ್ರ ಪತ್ರಕರ್ತರು ವೃತ್ತಿ ಜೀವನದಲ್ಲಿ ಕರ್ತವ್ಯ ನಿರ್ವಹಿಸಲು ಸಾಧ್ಯ. ಪತ್ರಕರ್ತರು ಉದ್ಯೋಗ ಆರಂಭಿಸಲು ಮುಂದೆ ಬಂದರೆ ಬೇಕಾದ ಸಾಲ ಸೌಲಭ್ಯಗಳನ್ನು ಬ್ಯಾಂಕ್ ಮೂಲಕ ಒದಗಿಸಲಾಗುವುದು ಎಂದ ಅವರು ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಒಂದು ಲಕ್ಷ ರೂ. ನೀಡುವುದಾಗಿ ತಿಳಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚಿ.ನಿ.ಪುರುಷೋತ್ತಮ್ ಮಾತನಾಡಿ, ಸಚಿವರಾದ ಕೆ.ಎನ್. ರಾಜಣ್ಣ ಅವರು ಅಧಿಕಾರದಲ್ಲಿ ಇರಲಿ ಅಥವಾ ಇಲ್ಲದಿರಲಿ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿರುವ ಜಿಲ್ಲೆಯ ಅಗ್ರಗಣ್ಯ ನಾಯಕರಾಗಿದ್ದಾರೆ ಎಂದು ಹೇಳಿದರು.

ಸಹಕಾರ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗೆ ಕಾರಣರಾಗಿರುವ ಸಚಿವರ ನಡೆ ದೇಶಕ್ಕೆ ಮಾದರಿಯಾಗಿದೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ರೂಪುಗೊಳ್ಳಲು ಸಚಿವರ ಕೊಡುಗೆ ಮಹತ್ತರವಾದದ್ದು, ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಸಂಘವು ಸಹ ಸಹಾಯ ಮಾಡುತ್ತಾ ಬಂದಿದೆ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಬಹಳ ವರ್ಷಗಳ ನಂತರ ಸಹಕಾರ ಇಲಾಖೆಗೆ ದಕ್ಷ ಸಚಿವರು ಅಧಿಕಾರ ವಹಿಸಿದ್ದು, ರಾಜ್ಯದ ಪತ್ರಕರ್ತರ ಆರೋಗ್ಯದ ಹಿತದೃಷ್ಟಿಯಿಂದ ಪತ್ರಕರ್ತರನ್ನು ಸರ್ಕಾರದ ಯಶಸ್ವಿನಿ ಯೋಜನೆಗೆ ಒಳಪಡಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತೆ ಅಶ್ವಿಜ, ಕೃಷಿ ಇಲಾಖೆ ಉಪ ನಿರ್ದೇಶಕ ಅಶೋಕ್ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!