ಶಿರಾ: ಕೊಬ್ಬರಿ ಬೆಲೆ ಪಾತಾಳಕ್ಕಿಳಿದಿದ್ದು, ತೆಂಗು ಬೆಳೆಗಾರರ ಸಂಕಷ್ಟವನ್ನು ಆಳುವ ಸರ್ಕಾರದ ಗಮನಕ್ಕೆ ತರಲು ಬಂದ್, ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನುಡಿದರು.
ಇಲ್ಲಿನ ತಾಲ್ಲೂಕು ಕಚೇರಿ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ಮಾತನಾಡಿ, ಇತ್ತೀಚೆಗೆ ಟೊಮೋಟೊ ಬೆಲೆ ಏರಿಕೆ ಆಗಿದ್ದು ಎಲ್ಲರಿಗೂ ತಿಳಿದಿದೆ. ಬೆಲೆ ನಿಯಂತ್ರಣಕ್ಕಾಗಿ ಬಾಂಗ್ಲಾ, ನೇಪಾಳ, ಮ್ಯಾನ್ಮಾರ್ ನಿಂದ ಟೊಮೋಟೊ ಆಮದು ಮಾಡಿಕೊಳ್ಳುವ ಸರ್ಕಾರ ಇದೇ ನೀತಿಯನ್ನು ಕಬ್ಬಿಣ, ಸಿಮೆಂಟ್, ಪೆಟ್ರೋಲ್ ಗಳಿಗೆ ಅನ್ವಯಿಸುವುದಿಲ್ಲ. ರೈತನ ಉತ್ಪನ್ನ ಮಾತ್ರ ಯಾಕೆ ಕಡಿಮೆ ಇರಬೇಕು? ಎಂದು ಪ್ರಶ್ನಿಸಿದರು.
40 ವರ್ಷಗಳ ಹಿಂದೆಯೇ ಕೊಬ್ಬರಿ ಬೆಲೆ 9800ರ ವರೆಗೆ ಇತ್ತು, ಇಂದು 8600ಕ್ಕೆ ಇಳಿದಿದೆ, ಇಂಥ ಸಂದರ್ಭದಲ್ಲಿ ನಾವು ಮೋದಿ ಮತ್ತು ಸಿದ್ದರಾಮಯ್ಯ ಸರ್ಕಾರವನ್ನು ಕೇಳಬಾರದಾ? 2016ರಲ್ಲಿ ರೈತ ಸಂಘ ಪಾದಯಾತ್ರೆ ಹಮ್ಮಿಕೊಂಡಿದ್ದಾಗ, ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ, ಜಯಚಂದ್ರ ಸೇರಿದಂತೆ ಎಲ್ಲರೂ ರೈತರೊಂದಿಗೆ ಚರ್ಚಿಸಿ ಧಾರಣೆ ಆಯಾ ಕಾಲಕ್ಕೆ ಪರಿಷ್ಕರಣೆ ಆಗಬೇಕು ಎನ್ನುವ ತೀರ್ಮಾನ ಆಗಿತ್ತು. ಅಂದಿಗೇ ಕೊಬ್ಬರಿ ಬೆಲೆ 18 ಸಾವಿರ ಇರಬೇಕು ಎಂದು ರಾಜ್ಯ ಕೃಷಿ ಬೆಲೆ ಆಯೋಗ ಶಿಫಾರಸ್ಸು ಮಾಡಿತ್ತು, ಇಂದು ಕೇಂದ್ರ ಮತ್ತು ರಾಜ್ಯದ ಬೆಂಬಲ ಬೆಲೆ ಸೇರಿಯೂ ಕೊಬ್ಬರಿ ಬೆಲೆಯೂ ಸೇರಿ ಸಕಾರದ ಧಾರಣೆ 13ಸಾವಿರ ಆಗುತ್ತದೆ ಎಂದರೆ ಈ ಸರ್ಕಾರಗಳು ಬದುಕಿವೆ ಎಂದು ಭಾವಿಸಬೇಕೇ ಎಂದು ವ್ಯಂಗ್ಯವಾಡಿದರು.
ಜನಪ್ರತಿನಿಧಿಗಳಿಗೆ ಬದ್ಧತೆ ಬೇಕು: 2017ರಲ್ಲಿನ ದರವನ್ನು ಇಲ್ಲಿವರೆಗೆ ಪರಿಷ್ಕರಿಸಿದರೆ, ಇಂದಿನ ಕೊಬ್ಬರಿ ದರ ಕನಿಷ್ಟ 25 ಸಾವಿರ ದಾಟಬೇಕು. ಚುನಾವಣೆ ಸಂದರ್ಭದಲ್ಲಿ ರೈತರಿಗೆ ಕೈ ಮುಗಿದು ಮತ ಕೇಳುವ ವಿಧಾನಸಭೆ ಮತ್ತು ಸಂಸತ್ ಜನ ಪ್ರತಿನಿಧಿಗಳೇ ನೀವು ಕೇಂದ್ರದ ಮೇಲೆ ಒತ್ತಡ ತಂದು ಆಮದಾಗುತ್ತಿರುವ ಕೊಬ್ಬರಿ ಮೇಲೆ ಆಮದು ಶುಲ್ಕವನ್ನು ಹೆಚ್ಚಿಗೆ ಮಾಡಿಸಿದರೆ ಸಾಕು ಮುಕ್ತ ಮಾರುಕಟ್ಟೆಯಲ್ಲಿ ರೈತರಿಗೆ ಉತ್ತಮ ದರ ದೊರಕಿ ಸಾಕಷ್ಟು ನೆರವು ಸಿಕ್ಕಲಿದೆ. ಈ ನಿಟ್ಟಿನಲ್ಲಿಯಾದರೂ ಬದ್ಧತೆ ತೋರಿಸಿ ಕೇಂದ್ರದ ಮೇಲೆ ಒತ್ತಡ ತರುವಂತೆ ಅವರು ಮನವಿ ಮಾಡಿದರು.
ಇದಕ್ಕೂ ಮುನ್ನ ಮಾತನಾಡಿದ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆಂಕೆರೆ ಸತೀಶ್, ಸಣ್ಣಪುಟ್ಟ ಗಲಾಟೆಯಾದರೆ ಹಳ್ಳಿಗಳಲ್ಲಿ ರಾಜೀ ನ್ಯಾಯ ಮಾಡುತ್ತಾರೆ. ರೈತರು ಬೀದಿಗೆ ಇಳಿದು ಹೋರಾಟ ಮಾಡುತ್ತಿದ್ದರೂ ಸರ್ಕಾರ ಕೇಳುತ್ತಿಲ್ಲ. ರಾಜಕೀಯ ಪಕ್ಷಗಳು ಪರಸ್ಪರ ಕಾಲೆಳೆಯುವುದರಲ್ಲಿ ನಿರತರಾಗಿದ್ದು, ಕೀಳು ಮಟ್ಟದ ಕಿತ್ತಾಟದಲ್ಲಿ ನಿರತವಾಗಿವೆ. ಈಗಾಗಲೇ ರೈತರು ಒಕ್ಕಲುತನದಿಂದ ವಿಮುಖರಾಗುತ್ತಿದ್ದು, ಇನ್ನು ಹತ್ತು ವರ್ಷ ಅವಧಿಯಲ್ಲಿ ಆಹಾರದ ಕೊರತೆ ಎದುರಿಸಬೇಕಾದೀತು, ಸರ್ಕಾರ ರೈತರ ನೆರವಿಗೆ ಬರಬೇಕಿದೆ ಎಂದು ಆಗ್ರಹಿಸಿದರು.
ಇದಕ್ಕೂ ಮುನ್ನ ಇಲ್ಲಿನ ಪ್ರವಾಸಿ ಮಂದಿರ ವೃತ್ತದಿಂದ ಮೊದಲ್ಗೊಂಡು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿ ಬಂದ ಪ್ರತಿಭಟನಾಕಾರರು, ತಾಲ್ಲೂಕು ಕಚೇರಿ ಆವರಣದಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಬರೆದ ಮನವಿ ಪತ್ರವನ್ನು ತಹಸೀಲ್ದಾರರಿಗೆ ಹಸ್ತಾಂತರಿಸಿದರು, ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ ಪಟೇಲ್, ಕಾರ್ಯಾಧ್ಯಕ್ಷ ಧನಂಜಯ ಆರಾಧ್ಯ, ಭಕ್ತರಹಳ್ಳಿ ಭೈರೆಗೌಡ, ದ್ಯಾಮೇಗೌಡ, ಕುರುಬರಹಳ್ಳಿ ಪರಮೇಶ್, ಆರ್.ವಿ. ಪುಟ್ಟಕಾಮಣ್ಣ, ನಿವೃತ್ತ ಇಂಜಿನಿಯರ್ ಜಯರಾಮಯ್ಯ ಇತರರು ಇದ್ದರು.
ಬಂದ್ ಗೆ ನೀರಸ ಪ್ರತಿಕ್ರಿಯೆ
ಸರ್ಕಾರದ ಗಮನ ಸೆಳೆಯಲು ಕರೆ ನೀಡಲಾಗಿದ್ದ ಶಿರಾ ಬಂದ್ ಗೆ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಅಂಗಡಿ ಮುಂಗಟ್ಟುಗಳು, ಹೋಟೆಲ್ ಗಳು ಎಂದಿನಂತೆ ತೆರೆದಿದ್ದು ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದವು. ಸಾರಿಗೆ ಸಂಚಾರವೂ ಧಕ್ಕೆಯಿಲ್ಲದೆ ಸಾಗಿತ್ತು. ರೈತರು ಪ್ರತಿಭಟನಾ ಮೆರವಣಿಗೆ ನಡೆಸಿದ ರಸ್ತೆಯುದ್ದಕ್ಕೂ ವ್ಯವಹಾರ ವಹಿವಾಟು ಸಾಮಾನ್ಯ ಸ್ಥಿತಿಯಲ್ಲಿದ್ದು, ರೈತ ಸಂಘ ನೀಡಿದ್ದ ಬಂದ್ ಕರೆ ಯಾವುದೇ ಪರಿಣಾಮ ಬೀರಿರಲಿಲ್ಲ.
Comments are closed.