ಕೆಂಪೇಗೌಡರ ದೂರದೃಷ್ಟಿ ಅನುಕರಣೀಯ: ಪರಂ

ತುಮಕೂರಿನಲ್ಲಿ ಅದ್ದೂರಿ ಕೆಂಪೇಗೌಡರ ಜಯಂತಿ ಆಚರಣೆ

332

Get real time updates directly on you device, subscribe now.


ತುಮಕೂರು: ಸಂವಿಧಾನದಲ್ಲಿ ಸರ್ವ ಜನಾಂಗಕ್ಕೂ ಬದುಕುವ ಹಕ್ಕು ಕಲ್ಪಿಸುವ ಮೊದಲೇ ಕೆಂಪೇಗೌಡರು ಬೆಂಗಳೂರಿನಲ್ಲಿ ಎಲ್ಲಾ ಶ್ರಮಿಕ ಸಮುದಾಯಗಳಿಗೆ ಪ್ರತ್ಯೇಕ ಪೇಟೆಗಳನ್ನು ನಿರ್ಮಿಸಿ ವ್ಯಾಪಾರ ವಹಿವಾಟು ನಡೆಸಲು ಅನುಕೂಲ ಮಾಡಿಕೊಟ್ಟಿರುವುದು ಮಹತ್ವದ ಹೆಜ್ಜೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಾಡಪ್ರಭು ಕೆಂಪೇಗೌಡರ 514ನೇ ಜಯಂತೋತ್ಸವ ಆಚರಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ಕೆಂಪೇಗೌಡರ ಜಯಂತಿ, ಕೆಂಪೇಗೌಡ ಪ್ರಶಸ್ತಿ ಪ್ರದಾನ, ಪ್ರಗತಿಪರ ರೈತರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರಮಿಕ ವರ್ಗವನ್ನು ಅಭಿವೃದ್ಧಿಯ ಭಾಗವನ್ನಾಗಿಸುವ ಕೆಂಪೇಗೌಡರ ದೂರದೃಷ್ಟಿಯನ್ನು ನಾವೆಲ್ಲರೂ ಅನುಸರಿಸುವಂತಹದ್ದು ಎಂದರು.

ಇಂದಿನ ಅಧುನಿಕ ಜಗತ್ತಿಗೆ ಅನುಗುಣವಾಗಿ 514 ವರ್ಷಗಳ ಹಿಂದೆಯೇ ಒಂದು ಪಟ್ಟಣವನ್ನು ವಿನ್ಯಾಸಗೊಳಿಸಿದ ವ್ಯಕ್ತಿಯನ್ನು ಇತಿಹಾಸದಲ್ಲಿ ಕಾಣಲು ಸಾಧ್ಯವಿಲ್ಲ. ವೃತ್ತಿಗೆ ಅನುಗುಣವಾಗಿ ಪೇಟೆಗಳ ನಿರ್ಮಾಣ ಮಾಡಿ ಎಲ್ಲಾ ಶ್ರಮಿಕ ವರ್ಗಗಳು ಸಂತೋಷದಿಂದ ಬದುಕುವಂತಹ ವಾತಾವರಣ ಅಂದೇ ನಿರ್ಮಾಣವಾಗಿತ್ತು ಎಂದರೆ ಇದಕ್ಕಿಂತ ದೊಡ್ಡ ಸಂತೋಷ ಮತ್ತೊಂದಿಲ್ಲ, ಹಾಗಾಗಿ ಕೆಂಪೇಗೌಡರನ್ನು ಒಂದು ವರ್ಗಕ್ಕೆ ಸಿಮೀತಗೊಳಿಸಿ ಟೀಕಿಸುವುದು ಸಲ್ಲದು, ಎಲ್ಲರು ಅವರ ಆದರ್ಶಗಳನ್ನು ಗೌರವಿಸುವಂತಾಗಬೇಕು ಎಂದು ತಿಳಿಸಿದರು.

ಇಡೀ ಪ್ರಪಂಚದಲ್ಲಿಯೇ ಅತಿ ಹೆಚ್ಚು ತಾಂತ್ರಿಕ ಮಾನವ ಸಂಪನ್ಮೂಲವನ್ನು ಉತ್ಪಾದಿಸುವುದರಲ್ಲಿ ಭಾರತ, ಆದರಲ್ಲಿಯೂ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ವರ್ಷಕ್ಕೆ 15 ಲಕ್ಷ ಇಂಜಿನಿಯರ್, 1 ಲಕ್ಷ ವೈದ್ಯರನ್ನು ಉತ್ಪಾದಿಸಲಾಗುತ್ತಿದೆ. ಹಾಗಾಗಿ ವಿಶ್ವದ ಯಾವುದೇ ಭಾಗಕ್ಕೆ ಹೋದರೂ ಭಾರತೀಯರು, ಅದರಲ್ಲಿಯೂ ಕನ್ನಡಿಗರನ್ನು ಕಾಣಲು ಸಾಧ್ಯವಾಗುತ್ತದೆ. ಇದಕ್ಕೆ ಕೆಂಪೇಗೌಡರ ಕೊಡುಗೆ ಅಪಾರ, ಒಕ್ಕಲಿಗರ ಸಂಘದ ಕೋರಿಕೆಯಂತೆ ಸಮುದಾಯಭವನ ನಿರ್ಮಾಣಕ್ಕೆ 2 ಎಕರೆ ಭೂಮಿ ದೊರಕಿಸಿಕೊಡಲು ಜಿಲ್ಲಾಡಳಿತಕ್ಕೆ ಇಂದೇ ಸೂಚನೆ ನೀಡುತ್ತೇನೆ. ಆ ಸಮುದಾಯ ಭವನದಲ್ಲಿ ಎಲ್ಲಾ ವರ್ಗಗಳ ಶುಭ ಸಮಾರಂಭಕ್ಕೂ ತಾವುಗಳು ಅವಕಾಶ ಮಾಡಿಕೊಡಬೇಕು. ಇದೇ ಕೆಂಪೇಗೌಡರ ನಿಜಯವಾದ ಆಶಯ ಎಂದು ನುಡಿದರು.

ವೈದ್ಯರ ತಿಪಟೂರಿನ ಗಂಗನಘಟ್ಟದ ಡಾ.ವಿವೇಚನಗೌಡ ದಂಪತಿಗೆ 2023ನೇ ಸಾಲಿನ ಜಿಲ್ಲಾ ಮಟ್ಟದ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಿ ಮಾತನಾಡಿದ ಸಹಕಾರಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ತಾವು ಕಟ್ಟಿದ ಪೇಟೆಯಲ್ಲಿ ಎಲ್ಲಾ ವರ್ಗದ ಜನರಿಗೆ ಆಶ್ರಯ ಕಲ್ಪಿಸಿದ ಕೆಂಪೇಗೌಡರ ಆಶಯದ ಹಿಂದೆ ಮಾನವತಾವಾದವಿದೆ. ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಅವಕಾಶ ಕಲ್ಪಿಸಿದ ಕುರುಹುಗಳಿವೆ, ಶೋಷಿತ ಸಮುದಾಯಗಳು ಸಾವಲಂಬಿ ಬದುಕು ಕಟ್ಟಿಕೊಳ್ಳಲು ಅವರು ಅವಕಾಶ ಕಲ್ಪಿಸಿದ್ದರು. ಓರ್ವ ರಾಜಕಾರಣಿಗೆ ರಾಜಕೀಯ ಮುಖ್ಯವಾದರೆ, ಓರ್ವ ದಾರ್ಶನಿಕನಿಗೆ ಇಡೀ ಸಮುದಾಯ ಮುಖ್ಯವಾಗುತ್ತದೆ ಎಂಬುದಕ್ಕೆ ಕೆಂಪೇಗೌಡ ಆಡಳಿತವೇ ಸಾಕ್ಷಿ ಎಂದರು.

ಯಾವುದೇ ಒಂದು ಸಮುದಾಯ ರಾಜಕೀಯ ಅಧಿಕಾರ ಪಡೆಯಬೇಕೆಂದರೆ ಒಗ್ಗಟ್ಟು ಮುಖ್ಯ. ಬಹಳ ವರ್ಷಗಳ ನಂತರ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಕ್ಕಲಿಗ ಸಮುದಾಯವೆಂದರೆ ಎಲ್ಲಾ ಸಮುದಾಯವನ್ನು ತನ್ನೊಟ್ಟಿಗೆ ತೆಗೆದುಕೊಂಡು ಹೋಗುವ ವಿಶ್ವಮಾನವ ಪರಿಕಲ್ಪನೆ ಹೊಂದಿರುವ ಸಮುದಾಯ, ಇದೇ ಪರಿಕಲ್ಪನೆಯಲ್ಲಿ ಕೆಂಪೇಗೌಡರು ಎಲ್ಲಾ ಸಮುದಾಯಗಳಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬೆಳೆಯಲು ಅವಕಾಶ ಕಲ್ಪಿಸಿದ್ದರು. ಕೌಶಲ್ಯವನ್ನು ಆಧರಿಸಿ ಸುಮಾರು 64 ಪೇಟೆಗಳನ್ನು ನಿರ್ಮಿಸಿ ಅವರ ಜೀವನೋಪಾಯಕ್ಕೆ ದಾರಿ ಮಾಡಿಕೊಟ್ಟಿದ್ದರು, ಅವರ ಆಶಯದಂತೆ ನಾವೆಲ್ಲರೂ ನಡೆಯಬೇಕಾಗಿದೆ ಎಂದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಕೇಂದ್ರ ಒಕ್ಕಲಿಗರ ಸಂಘದ ನಿರ್ದೇಶಕ ಹನುಮಂತರಾಯಪ್ಪ, ಬಹುಸಂಖ್ಯಾತರಿರುವ ಒಕ್ಕಲಿಗ ಸಮುದಾಯ ಕಲೆ, ಸಾಹಿತ್ಯ, ಸಾಂಸ್ಕೃತಿಕವಾಗಿ ಸಾಕಷ್ಟು ಕೊಡುಗೆ ನೀಡಿದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಒಕ್ಕಲಿಗರ ಭವನಗಳಿವೆ, ಆದರೆ ಬೆಂಗಳೂರಿಗೆ ಹತ್ತಿರದಲ್ಲಿರುವ ತುಮಕೂರಿನಲ್ಲಿ ಸಮುದಾಯ ಭವನವಿಲ್ಲ. ಹಾಗಾಗಿ ಜಿಲ್ಲಾಡಳಿತ ಎರಡು ಎಕರೆ ಭೂಮಿ ನೀಡಿದರೆ ಸುಸಜ್ಜಿತ ಭವನ ನಿರ್ಮಾಣಕ್ಕೆ ಸಹಾಯ ಮಾಡಿದಂತಾಗುತ್ತದೆ. ಇದರ ಜೊತೆಗೆ ನಗರ ಟೌನ್ ಹಾಲ್ ಮುಂಭಾಗದಲ್ಲಿ ಬಾಲ ಗಂಗಾಧರನಾಥ ಸ್ವಾಮೀಜಿಯವರ ಪುತ್ಥಳಿ ಹಾಗೂ ಜಿಲ್ಲಾಡಳಿತದ ಮಿನಿ ವಿಧಾನಸೌಧದ ಮುಂಭಾಗ ಕೆಂಪೇಗೌಡರ ಪುತ್ಥಳಿ ಆನಾವರಣ ಮಾಡಬೇಕೆಂಬ ಮನವಿಯನ್ನು ಗೃಹ ಸಚಿವರು ಹಾಗೂ ಸಹಕಾರ ಸಚಿವರಿಗೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ 10 ಜನ ಪ್ರಗತಿಪರ ರೈತರಿಗೆ ಹಾಗೂ ನೂರಾರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿ ಸಲಾಯಿತು.

ಆದಿಚುಂಚನಗಿರಿ ತುಮಕೂರು ಶಾಖಾ ಮಠದ ಮಂಗಳನಾಥ ಸ್ವಾಮೀಜಿ, ಶಾಸಕರಾದ ಎಸ್.ಆರ್.ಶ್ರೀನಿವಾಸ್, ಬಿ.ಸುರೇಶಗೌಡ, ಡಾ.ಕೆ.ರಂಗನಾಥ್, ಜಿ.ಬಿ.ಜೋತಿಗಣೇಶ್, ಚಿದಾನಂದಗೌಡ, ಮಾಜಿ ಸಂಸದ ಮುದ್ದಹನುಮೇಗೌಡ, ಮೇಯರ್ ಪ್ರಭಾವತಿ ಸುಧೀಶ್ವರ್, ಮಾಜಿ ಶಾಸಕ ಹೆಚ್.ನಿಂಗಪ್ಪ, ಮುರುಳೀಧರ ಹಾಲಪ್ಪ, ಪಾಲಿಕೆ ಸದಸ್ಯ ಜೆ.ಕುಮಾರ್, ಧರಣೇಂದ್ರಕುಮಾರ್, ಬಯಲು ಸೀಮೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕಲ್ಲಹಳ್ಳಿ ದೇವರಾಜು ಇತರರು ಹಾಜರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಬಿ.ಜಿ.ಎಸ್.ವೃತ್ತದಿಂದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದ ವರೆಗೆ ವಿವಿಧ ಕಲಾ ತಂಡಗಳ ಮೆರವಣಿಗೆಯೊಂದಿಗೆ ಕೆಂಪೇಗೌಡರ ಪುತ್ಥಳಿ ಮತ್ತು ಭಾವಚಿತ್ರವನ್ನು ಸಾವಿರಾರು ಜನರೊಂದಿಗೆ ವೇದಿಕೆಗೆ ತರಲಾಯಿತು.

Get real time updates directly on you device, subscribe now.

Comments are closed.

error: Content is protected !!