ತುಮಕೂರು: ಜಿಲ್ಲಾ ತಿರಂಗ ಯಾತ್ರಾ ಸಮಿತಿ ವತಿಯಿಂದ ಆಗಸ್ಟ್ 15ರ ಸಂಜೆ ನಾಲ್ಕು ಗಂಟೆಗೆ ನಗರದ ಎಸ್ಐಟಿ ಕಾಲೇಜು ಮುಂಭಾಗದಿಂದ ಗಂಗೋತ್ರಿ ರಸ್ತೆ, ಎಸ್ಐಟಿ, ಮತ್ತು ಎಸ್.ಎಸ್.ಪುರಂ ಮುಖ್ಯರಸ್ತೆ ಮೂಲಕ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದವರೆಗೆ ತಿರಂಗಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಗಸ್ಟ್ 15ರ ಸಂಜೆ ನಾಲ್ಕು ಗಂಟೆಗೆ ಎಸ್ಐಟಿ ಕಾಲೇಜು ಮುಂಭಾಗ ದಿಂದ ಆರಂಭವಾಗುವ ತಿರಂಗಯಾತ್ರೆಗೆ ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗಸ್ವಾಮೀಜಿ, ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ರಾಮಕೃಷ್ಣ-ವಿವೇಕಾನಂದ ಮಠದ ಡಾ.ವೀರೇಶಾನಂದ ಸರಸ್ವತಿ ಸ್ವಾಮೀಜಿ, ವಿವಿಧ ಮಠಾಧೀಶರು ಚಾಲನೆ ನೀಡುವರು.
ದೇಶಭಕ್ತಿ, ರಾಷ್ಟ್ರಪ್ರೇಮ ಬಿಂಬಿಸುವ ವಿವಿಧ ಕಲಾ ತಂಡಗಳೊಂದಿಗೆ ಸಾವಿರಾರು ಜನರು ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು, ಸ್ವಾತಂತ್ರ ಹೋರಾಟಗಾರರ ವಿವಿಧ ವೇಷಭೂಷಣಗಳೊಂದಿಗೆ ಮಕ್ಕಳು ತಿರಂಗಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ರವಿಶಂಕರ್ ವಿವರ ನೀಡಿದರು.
ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ, ಅಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಕಳೆದ ವರ್ಷ ನಗರದಲ್ಲಿ ತಿರಂಗಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಈ ಬಾರಿಯೂ ಅದ್ದೂರಿಯಾಗಿ ತಿರಂಗಯಾತ್ರಾ ಕಾರ್ಯಕ್ರಮ ಜರುಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ತಿರಂಗ ಯಾತ್ರಾ ಸಮಿತಿಯ ಸಂಚಾಲಕ ಶಿವಾಜಿ ಪತ್ತಿನ ಸಹಕಾರ ಬ್ಯಾಂಕಿನ ಆಡಿಟರ್ ಸುರೇಶ್, ವಿಶ್ವನಾಥ್, ಬೋವಿ ಸಮಾಜದ ಪರುಷೋತ್ತಮ್, ಟೂಡಾ ಮಾಜಿ ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ, ಬಾಲಾಜಿ, ಶಂಕರ್ ಮತ್ತಿತರರು ಉಪಸ್ಥಿತರಿದ್ದರು.
Comments are closed.