ಕೀಳರಿಮೆಯಿಂದ ಕನ್ನಡ ಭಾಷೆ ಬಳಕೆ ಕ್ಷೀಣಿಸಿದೆ

ಕನ್ನಡ ಸಾಹಿತ್ಯ ಪರಿಷತ್ 1 ಕೋಟಿ ಸದಸ್ಯತ್ವ ನೊಂದಾಯಿಸುವ ಗುರಿ ಹೊಂದಿದೆ: ಡಾ.ಮಹೇಶ್ಜೋಷಿ

225

Get real time updates directly on you device, subscribe now.


ತುಮಕೂರು: ಸ್ವಾಯತ್ತ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ತನ್ನ ಸ್ವಂತ ಸಂಪನ್ಮೂಲದಿಂದ ನಡೆಸಬೇಕೆಂಬ ಉದ್ದೇಶದಿಂದ ಒಂದು ಕೋಟಿ ಸದಸ್ಯರನ್ನು ನೊಂದಾಯಿಸುವ ಗುರಿ ಹೊಂದಲಾಗಿದೆ ಎಂದು ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ ತಿಳಿಸಿದರು.

ನಗರದ ಕನ್ನಡ ಭವನದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು, ಜಿಲ್ಲಾ ಕಸಾಪ ಆಯೋಜಿಸಿದ್ದ ಪ್ರೊ.ಸಿ.ಹೆಚ್.ಮರಿದೇವರು ದತ್ತಿ ಪ್ರಶಸ್ತಿ ಪ್ರದಾನ ಮತ್ತು ಕಸಾಪ ಆಜೀವ ಸದಸ್ಯತ್ವ ಅಭಿಯಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಂದು ಕೋಟಿ ಸದಸ್ಯರ ವಂತಿಗೆ ಹಣ ಸುಮಾರು 250 ಕೋಟಿ ರೂ.ಗಳಾಗುತ್ತದೆ. ಈ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟರೆ, ಒಂದು ವರ್ಷ ನಡೆಯುವ ಕನ್ನಡ ಕಾರ್ಯಕ್ರಮಗಳ ಅನುದಾನಕ್ಕೆ ಸರಕಾರದ ಮುಂದೆ ಕೈಕಟ್ಟಿ ನಿಲ್ಲುವುದು ತಪ್ಪಲಿದೆ ಎಂದರು.

ಶಾಸಕ-ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಮಾತನಾಡಿ, ಸಿ.ಹೆಚ್.ಮರಿದೇವರು ಮತ್ತು ನಾನು ಒಂದೇ ತಾಲೂಕಿನವರು.ಅವರ ನೇರ ಮತ್ತು ನಿಷ್ಠೂರ ನಡೆ ಹಾಗೂ ಯಾವುದಕ್ಕೂ ರಾಜೀ ಮಾಡಿಕೊಳ್ಳದ ಅವರ ಸ್ವಭಾವ ನನಗೆ ಬಹಳ ಇಷ್ಟ. ಕನ್ನಡ ಭವನ ಕಟ್ಟಬೇಕೆಂಬ ಅವರ ಒತ್ತಾಸೆಯ ಫಲವಾಗಿ 2001ರಲ್ಲಿ ನಡೆದ 69ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸರಕಾರಿ ನೌಕರರು ನೀಡಿದ ಧೇಣಿಗೆಯನ್ನು ಬಳಸಿ, ಟೂಡಾದಿಂದ ನಿವೇಶನ ಖರೀದಿಸಿ, ಕನ್ನಡ ಭವನ ನಿರ್ಮಿಸಲಾಗಿದೆ. ಕನ್ನಡ ಕಟ್ಟುವ ಕೆಲಸದಲ್ಲಿ ನಿರಂತರವಾಗಿ ಕಸಾಪ ಜೊತೆ ಕೈಜೋಡಿಸುವುದಾಗಿ ಭರವಸೆ ನೀಡಿದರು.

ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ, ಜಿಲ್ಲೆಯಲ್ಲಿ ಕನ್ನಡ ಭವನ ಕಟ್ಟಲು ಈ ಹಿಂದಿನ ಎಲ್ಲಾ ಅಧ್ಯಕ್ಷರು ಶ್ರಮಿಸಿದ್ದಾರೆ. ಕನ್ನಡ ಎಂಬುದು ಜನಸಾಮಾನ್ಯರ ಭಾಷೆ. ಇಂದಿನ ಯುವಜನತೆ ಉದ್ಯೋಗ, ಮತ್ತಿತರರ ಕಾರಣಗಳಿಗಾಗಿ ಬೇರೆ ಭಾಷೆಗಳನ್ನು ಕಲಿಯಲು ಆಸಕ್ತಿ ತೋರುತ್ತಿರುವುದರ ಪರಿಣಾಮ ಕನ್ನಡಕ್ಕೆ ಕೊಂಚ ಹಿನ್ನೆಡೆಯಾಗಿದೆ ಎನ್ನಬಹುದು. ಕನ್ನಡ ಪ್ರಾಥಮಿಕ ಭಾಷೆಯಾಗಬೇಕು. ಸದಸ್ಯತ್ವ ಅಭಿಯಾನಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಮೆಡಿಕಲ್, ಇಂಜಿನಿಯರಿಂಗ್ ಹೆಸರಿನಲ್ಲಿ ಸಾಹಿತ್ಯ ಚಟುವಟಿಕೆಗಳಿಂದ ದೂರ ಸರಿಯುತ್ತಿರುವ ಯುವಜನರನ್ನು ಮತ್ತೆ ಸಾಹಿತ್ಯದ ಓದಿನ ಕಡೆಗೆ ಸೆಳೆಯುವ ಉದ್ದೇಶದಿಂದ ವಿನೂತನ ಕಾರ್ಯಕ್ರಮ ತುಮಕೂರು ಕಸಾಪ ರೂಪಿಸಿದೆ ಎಂದರು.

ಇದೇ ವೇಳೆ 2022ನೇ ಸಾಲಿನ ಪ್ರೊ.ಸಿ.ಹೆಚ್.ಮರಿದೇವರು ದತ್ತಿ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರದಲ್ಲಿ ಡಾ.ಡಿ.ಎನ್.ಯೋಗೀಶ್ವರಪ್ಪ, ಕ್ರೀಡಾ ಕ್ಷೇತ್ರದಿಂದ ಥ್ರೋಬಾಲ್ ಆಟಗಾರ ಸಾಗರ್.ಎಂ., ಕನ್ನಡ ಸೇವೆಗೆ ಸುಶೀಲಾ ಸದಾಶಿವಯ್ಯ, ಶಿಕ್ಷಣ ಕ್ಷೇತ್ರದಲ್ಲಿ ಧಾರವಾಡದ ಕೆ.ಇ.ಬೋರ್ಡ್ ಶಿಕ್ಷಣ ಸಂಸ್ಥೆಯ ಗೋವಿಂದರೆಡ್ಡಿ ಅವರಿಗೆ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಕೇಂದ್ರ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳಾದ ನೇ.ಭ ರಾಮಲಿಂಗಶೆಟ್ಟಿ, ಡಾ.ಪದ್ಮಿನಿ ನಾಗರಾಜು, ಗೌರವ ಕೋಶಾಧ್ಯಕ್ಷ ಬಿ.ಎಂ.ಪಟೇಲ್ ಪಾಂಡು, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಮಹದೇವಪ್ಪ, ಉಮಾಮಹೇಶ್, ರಾಣಿ ಚಂದ್ರಶೇಖರ್ ಇದ್ದರು.

Get real time updates directly on you device, subscribe now.

Comments are closed.

error: Content is protected !!