ಪ್ರತಿಯೊಬ್ಬರು ಸ್ವಚ್ಛತೆ ಆದ್ಯತೆ ನೀಡಿ: ಕೆಎನ್ಆರ್

147

Get real time updates directly on you device, subscribe now.


ಮಧುಗಿರಿ : ರಾಷ್ಟ್ರೀಯ ಹಾಗೂ ನಾಡಹಬ್ಬಳ ದಿನಾಚರಣೆಗಳ ಮುನ್ನಾ ದಿನದಂದು ಸ್ವಚ್ಛತೆಗೆ ಪ್ರತಿಯೊಬ್ಬರು ಮುಂದಾಗುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಹಕಾರ ಸಚಿವ ಕೆ.ಎನ್ ರಾಜಣ್ಣ ಕರೆ ನೀಡಿದರು.

ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ದಂಡಿಮಾರಮ್ಮನ ದೇವಾಲಯದ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ನಾನ ಸಂಘಟನೆಗಳ ವತಿಯಿಂದ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನದಲ್ಲಿ ಸಸಿಗಳನ್ನು ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿ, ಸ್ವಚ್ಛತೆಯು ಶುಚಿತ್ವ ಮತ್ತು ದೈವತ್ವಕ್ಕೆ ಸಮಾನವಾಗಿದೆ. ಮುಂದಿನ ದಿನಗಳಲ್ಲಿ ಗಣರಾಜ್ಯೋತ್ಸವ ದಿನಾಚರಣೆಯ ಮುನ್ನಾ ದಿನದಂದು ಹೋಬಳಿಯ ಕೇಂದ್ರ ಸ್ಥಾನದಲ್ಲಿ ಸ್ವಚ್ಛತಾ ಅಭಿಯಾನವನ್ನು ಸಂಬಂಧಪಟ್ಟ ಅಧಿಕಾರಿಗಳು ಆಚರಿಸಬೇಕು, ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ತಮ್ಮ ಕಚೇರಿ ಗಳಲ್ಲಿ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡುವುದಕ್ಕೆ ಸಂಕಲ್ಪ ಮಾಡಬೇಕು.

ಈ ಕಾರ್ಯಕ್ರಮ ಕೇವಲ ಇಂದಿಗೆ ಮಾತ್ರ ಸೀಮಿತವಾಗಿರದೆ ಇನ್ನೂ ಪ್ರತಿ ವರ್ಷ ಕಡ್ಡಾಯವಾಗಿ ತಾಲ್ಲೂಕಿನಲ್ಲಿ ಆಚರಣೆ ಮಾಡಲಾಗುವುದು, ಸ್ವಚ್ಛ ಅಭಿಯಾನದಲ್ಲಿ 1670 ವಿದ್ಯಾರ್ಥಿಗಳು ಹಾಗೂ ಅಧಿಕಾರಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗಿ ಯಾಗಿದ್ದು, ಇದೊಂದು ವಿನೂತನ ಕಾರ್ಯಕ್ರಮವಾಗಿದೆ ಎಂದರು.

ಜಿಲ್ಲಾಧಿಕಾರಿ ಶ್ರೀನಿವಾಸ್.ಕೆ. ಮಾತನಾಡಿ ಸ್ವಚ್ಛ ಮಧುಗಿರಿ ಅಭಿಯಾನಕ್ಕೆ ಎಲ್ಲರೂ ಆಗಮಿಸಿರುವುದು ಸಂತಸದ ವಿಚಾರವಾಗಿದ್ದು ಎಲ್ಲರೂ ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು, ಸ್ವಚ್ಛತೆಯು ಮಹಾತ್ಮ ಗಾಂಧೀಜಿಯವರ ಕನಸಾಗಿದೆ, ಜಿಲ್ಲೆಯ ಎಲ್ಲಾ ಹಾಸ್ಟೆಲ್ ಗಳಲ್ಲೂ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ, ಚರಂಡಿಗಳಲ್ಲಿ ನೀರಿನ ಪೈಪ್ ಹೋಗದಂತೆ ಎಚ್ಚರ ವಹಿಸಲಾಗಿದೆ. ಎಲ್ಲಾ ಕಚೇರಿಗಳಲ್ಲೂ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ, ಸ್ವಚ್ಛತೆ ಇಲ್ಲವಾದರೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ, ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮವನ್ನು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲೂ ಹಮ್ಮಿಕೊಳ್ಳಲಾಗುವುದು ಎಂದರು.

ಜಿಪಂ ಸಿಇಓ ಪ್ರಭು.ಜಿ. ಮಾತನಾಡಿ, ಎಲ್ಲರೂ ಕ್ರಿಯಾಶೀಲರಾಗಿ ಅಭಿಯಾನದಲ್ಲಿ ಭಾಗವಹಿಸಿದ್ದು, ನಗರದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಸ್ವಚ್ಛತೆಯು ಮತ್ತು ಶುಚಿತ್ವ ದೈವಕ್ಕೆ ಸಮ ಎಂದು ಮಹಾತ್ಮಗಾಂಧಿ ಹೇಳಿದ್ದಾರೆ. ಜಿಲ್ಲೆಯಲ್ಲಿ 8 ಲಕ್ಷ ಮಿಟರ್ ಉದ್ದದ ಚರಂಡಿಗಳ ಅವಶ್ಯಕತೆಯಿದ್ದು, ಮುನ್ನೂರು ಕೋಟಿ ರೂ. ವೆಚ್ಚದಲ್ಲಿ ಚರಂಡಿಗಳನ್ನು ನಿರ್ಮಿಸಲಾಗುವುದು, ಸ್ವಚ್ಛತೆ ಇಲ್ಲದ ಪರಿಣಾಮ ಇಂದು ಜಿಲ್ಲಾ ಆಸ್ಪತ್ರೆಯಲ್ಲಿ 50 ಮಕ್ಕಳು ಡಯಾಲಿಸೀಸ್, 250 ಮಕ್ಕಳು ಹೃದಯದ ಸಮಸ್ಯೆಗಳಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿನ ಅಭಿಯಾನ ಕಾರ್ಯಕ್ರಮವು ಜಿಲ್ಲೆಯಲ್ಲಿಯೇ ಮಾದರಿ ಕಾರ್ಯಕ್ರಮವಾಗಿದೆ. ಎಲ್ಲಾ ಹಾಸ್ಟೆಲ್ ಗಳಲ್ಲೂ ಶುದ್ಧ ಕುಡಿಯುವ ನೀರಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಜಿಲ್ಲಾ, ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್ ವಾಡ್ ಮಾತನಾಡಿ, ನಮ್ಮ ಇಲಾಖೆಯಲ್ಲೂ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಯಾವುದೇ ಸಂದರ್ಭದಲ್ಲಾದರೂ ಸರಿ ಸ್ಟೇಷನ್ ಅಥವಾ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡದೆ ಹಾಗೂ ಪೊಲೀಸರು ನಿಗದಿತ ಸಮಯಕ್ಕೆ ಬರುವುದಿಲ್ಲ ಎನ್ನುವುದನ್ನು ಬಿಟ್ಟು ನೇರವಾಗಿ 112 ನಂ ಕರೆ ಮಾಡಿ ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ , ಉಪ ವಿಭಾಗಾಧಿಕಾರಿ ರಿಷಿ ಆನಂದ್, ತಹಸೀಲ್ದಾರ್ ಸಿಗಬತ್ ವುಲ್ಲಾ , ಇಓ ಲಕ್ಷ್ಮಣ್, ಕೆಎಂಎಫ್ ನಿರ್ದೇಶಕ ಮೈದನಹಳ್ಳಿ ಕಾಂತರಾಜು , ಮಾಜಿ ಜಿಪಂ ಅಧ್ಯಕ್ಷೆ ಶಾಂತಲಾ ರಾಜಣ್ಣ , ಪುರಸಭೆಯ ಮಾಜಿ ಅಧ್ಯಕ್ಷರಾದ ಎಂ.ಕೆ.ನಂಜುಂಡಯ್ಯ , ಎನ್.ಗಂಗಣ್ಣ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!