ತುಮಕೂರು: ನಗರದ ಸಿದ್ದಗಂಗಾ ಮಠದ ಹಿಂಭಾಗದಲ್ಲಿರುವ ಗೋಕಟ್ಟೆಗೆ ಬಿದ್ದು ಮೃತಪಟ್ಟಿರುವ ನಾಲ್ವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸಿದ್ದಗಂಗಾ ಮಠದ ಹಿಂಭಾಗದಲ್ಲಿ ಗೋಕಟ್ಟೆ ಬಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದರು.
ಸಿದ್ದಗಂಗಾ ಮಠದಲ್ಲಿ ಇಂತಹ ಘಟನೆಗಳು ನಡೆಯುವುದು ಬಹಳ ವಿರಳ, ದುರಾದೃಷ್ಟವಶಾತ್ ಈ ಘಟನೆ ನಡೆದು ಹೋಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಗೋಕಟ್ಟೆ ಸುತ್ತಲೂ ಮುಳ್ಳು ತಂತಿ ಹಾಕಲು ಈಗಾಗಲೇ ಶ್ರೀಮಠ ಸಿದ್ಧತೆ ಮಾಡಿಕೊಂಡಿತ್ತು, ಈ ಕಾರ್ಯವನ್ನು ಮಠವೇ ಮುಂದುವರೆಸಲಿದೆ. ಶ್ರೀಮಠದ ಶಾಲೆಯ ಶಿಕ್ಷಕರು ಮಕ್ಕಳಿಗೆ ಗೋಕಟ್ಟೆಯ ಬಳಿ ಹೋಗದಂತೆ ತಿಳಿ ಹೇಳಬೇಕು ಎಂದು ಮನವಿ ಮಾಡಿದರು.
ಮೃತ ತಾಯಿ ಹಾಗೂ ಮಗ ಇಂಗು ಗುಂಡಿ ಬಳಿ ಊಟ ಮಾಡಲು ಬಂದಿದ್ದಾರೆ. ಈ ವೇಳೆ ರಂಜಿತ್ ಕಾಲು ಕೆಸರಾಗಿದೆ ಎಂದು ಕಾಲು ತೊಳೆಯಲು ಹೋಗಿ ಕಾಲು ಜಾರಿ ಕಟ್ಟೆಗೆ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ತಾಯಿ ಹೋಗಿದ್ದಾರೆ. ನಂತರ ಆತನ ಜೊತೆಗಿದ್ದ ಮತ್ತೊಬ್ಬ ಹುಡುಗ ಕೂಡ ನೀರಿಗೆ ಇಳಿದಿದ್ದಾನೆ. ಇದೇ ವೇಳೆ ಸ್ಥಳದಲ್ಲಿದ್ದ ಮಹದೇವಪ್ಪ ಎಂಬುವರು ಸಹ ನೀರಿಗೆ ಬಿದ್ದಿದ್ದಾರೆ. ರಂಜಿತನನ್ನು ರಕ್ಷಣೆ ಮಾಡಿ ನಾಲ್ವರು ನೀರಿನಲ್ಲಿ ಮುಳುಗಿದ್ದಾರೆ ಎಂದು ಘಟನೆಯ ಮಾಹಿತಿ ನೀಡಿದರು.
ಸಾಂತ್ವನ:
ಗೋಕಟ್ಟೆ ಪರಿಶೀಲನೆ ಬಳಿಕ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿದ ಸಚಿವ ಡಾ.ಜಿ.ಪರಮೇಶ್ವರ್ ಅವರು ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು.
ಜಿಲ್ಲಾಸ್ಪತ್ರೆಯ ಶವಾಗಾರದ ಬಳಿ ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು, ಇದನ್ನು ಕಂಡ ಸಚಿವ ಪರಮೇಶ್ವರ್ ಅವರು ಕುಟುಂಬದವರು ಮತ್ತು ಸಂಬಂಧಿಕರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಹುಲ್ಕುಮಾರ್, ಜಿಪಂ ಸಿಇಓ ಜಿ.ಪ್ರಭು, ಉಪ ವಿಭಾಗಾಧಿಕಾರಿ ಗೌರವಕುಮಾರ್ ಶೆಟ್ಟಿ, ತಹಶೀಲ್ದಾರ್ ಸಿದ್ದೇಶ್, ಮಾಜಿ ಸಚಿವ ಸೊಗಡು ಶಿವಣ್ಣ ಇದ್ದರು.
ಶಾಸಕ ಸುರೇಶ್ ಗೌಡರಿಂದ ಪರಿಹಾರ
ಗೋಕಟ್ಟೆಯಲ್ಲಿ ಬಿದ್ದು ಮೃತಪಟ್ಟ ವಿದ್ಯಾರ್ಥಿಗಳ ನಾಲ್ಕು ಕುಟುಂಬಗಳಿಗೆ ತಲಾ 50,000 ನಂತೆ ಒಟ್ಟು ರೂ. 2,00,000 ಸಹಾಯಧನ ನೀಡಿದ ಶಾಸಕ ಬಿ.ಸುರೇಶ ಗೌಡ ನೀಡಿದರು.
ಸಿದ್ಧಗಂಗಾ ಮಠದ ಗೋಶಾಲೆಯ ಗೋವುಗಳ ಕುಡಿಯುವ ನೀರಿಗಾಗಿ ಹಾಗೂ ಅಂತರ್ಜಲ ಅಭಿವೃದ್ಧಿಗಾಗಿ ನಿರ್ಮಾಣ ಮಾಡಿರುವ ಗೋಕಟ್ಟೆಗೆ ಆಕಸ್ಮಿಕವಾಗಿ ಬಿದ್ದ ಇಬ್ಬರು ವಿದ್ಯಾರ್ಥಿಗಳು ಹಾಗೂ ಅವರನ್ನು ರಕ್ಷಣೆ ಮಾಡಲು ಹೋದ ಬೆಂಗಳೂರಿನ ಲಕ್ಷ್ಮಿ ಮತ್ತು ಯಾದಗಿರಿಯ ಮಹದೇವಯ್ಯ ಸೇರಿದಂತೆ ನಾಲ್ಕು ಜನ ಮೃತಪಟ್ಟಿರುವ ಘಟನೆ ವೈಯಕ್ತಿಕವಾಗಿ ನನಗೆ ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಸುರೇಶ್ ಗೌಡ ತಿಳಿಸಿದ್ದಾರೆ.
ತುಮಕೂರು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿದ ಬಿ.ಸುರೇಶ್ ಗೌಡ ಪ್ರತಿ ಮೃತರ ಕುಟುಂಬಕ್ಕೆ 50 ಸಾವಿರ ರೂಪಾಯಿ ಸಹಾಯಧನ ನೀಡಿ ಮಾತನಾಡಿ, ರಾಜ್ಯದಲ್ಲಿ ಈ ರೀತಿಯ ಘಟನೆಗಳು ನಡೆಯಬಾರದು, ಈ ನಿಟ್ಟಿನಲ್ಲಿ ಶಾಲಾ ಮುಖ್ಯಸ್ಥರು ಹಾಗೂ ಗೋಕಟ್ಟೆ ನಿರ್ಮಾಣ ಮಾಡಿರುವ ರೈತರು ಸೂಕ್ತ ರಕ್ಷಣಾ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ರಾಜ್ಯದಲ್ಲಿ ಶಿಕ್ಷಣ, ಊಟ ಮತ್ತು ವಸತಿ ಸೇವೆ ಒಳಗೊಂಡ ತ್ರಿವಿಧ ದಾಸೋಹಕ್ಕೆ ಪ್ರಸಿದ್ಧವಾದ ಸಿದ್ಧಗಂಗಾ ಮಠದಲ್ಲಿ ರಾಜ್ಯದ ಮೂಲೆ ಮೂಲೆಯಿಂದ ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ, ಇನ್ನು ಮಠದಲ್ಲಿರುವ ಮಕ್ಕಳನ್ನು ಭೇಟಿ ಮಾಡಲು ಪ್ರತಿ ಭಾನುವಾರ ರಜಾ ದಿನದಂದು ಪೋಷಕರು ಮಠಕ್ಕೆ ಬರುತ್ತಾರೆ, ಆದರೆ ಈ ದುರಂತ ನಡೆದಿರುವುದು ನಿಜಕ್ಕೂ ನೋವಿನ ಸಂಗತಿ ಎಂದರು.
Comments are closed.