ತುಮಕೂರು: ನಮ್ಮ ಸಂವಿಧಾನದ ಮೂಲಾಧಾರವಾಗಿರುವ ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಎತ್ತಿಹಿಡಿಯುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನಡೆದ 77ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡು, ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶದ ರಕ್ಷಣೆಗೆ ಹಗಲಿರುಳು ದುಡಿಯುತ್ತಿರುವ ಸೈನಿಕರ ಸೇವೆಯನ್ನು ಸ್ಮರಿಸುತ್ತಾ, ಶಾಂತಿ- ಸಹನೆ, ಸಹಿಷ್ಣುತೆಯ ಮಹತ್ವವನ್ನು ಎಲ್ಲರಿಗೂ ಮನವರಿಕೆ ಮಾಡಿಕೊಡಬೇಕಾಗಿದೆ ಎಂದು ತಿಳಿಸಿದರು.
ಬ್ರಿಟಿಷರಿಂದ ಸ್ವಾತಂತ್ರ್ಯಗೊಂಡ ನಂತರ ಭಾರತ ದೇಶವು ಹಲವು ಮೈಲಿಗಲ್ಲುಗಳನ್ನು ಕಂಡಿದೆ, ಆರ್ಥಿಕತೆ, ರಾಜಕೀಯ, ತಂತ್ರಜ್ಞಾನ, ವಿಜ್ಞಾನ, ಮೂಲಸೌಕರ್ಯಗಳು ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಸಹ ಅನೇಕ ಸಾಧನೆಗಳಿಗೆ ಸಾಕ್ಷಿಯಾಗಿದೆ. ಈ ಸಾಧನೆ, ಅಭಿವೃದ್ಧಿಗಳ ಸಂಖ್ಯೆ ಸ್ವಾತಂತ್ರ್ಯ ಭಾರತದಲ್ಲಿ ಹೆಚ್ಚುತ್ತಲೇ ಇರುತ್ತದೆ ಹೊರತು ಎಂದಿಗೂ ಇದಕ್ಕೆ ಅಂತ್ಯ ಎನ್ನುವುದಿಲ್ಲ, ಎಲ್ಲಿ ಪ್ರಜೆಗಳಿಗೆ ಸ್ವಾತಂತ್ರ್ಯ ಇರುತ್ತದೋ, ಯಾವ ದೇಶದ ಪ್ರಜೆಗಳಿಗೆ ಸ್ವಾತಂತ್ರ್ಯ ಇರುತ್ತದೋ, ಎಲ್ಲಿಯವರೆಗೆ ಪ್ರಜೆಗಳು ಸ್ವಾತಂತ್ರ್ಯರಾಗಿರುತ್ತಾರೋ ಅಲ್ಲಿಯ ವರೆಗೆ ದೇಶದ ಅಭಿವೃದ್ಧಿ, ಪ್ರಜೆಗಳ ಅಭಿವೃದ್ಧಿ, ನಾಡಿನ ಅಭಿವೃದ್ಧಿ, ಒಂದು ಕುಟುಂಬದ ಅಭಿವೃದ್ಧಿ ನಿರಂತರವಾಗಿ ಸಾಗುತ್ತಿರುತ್ತದೆ. ಅದಕ್ಕೆ ಕೊನೆ ಎಂಬುದು ಇಲ್ಲ, ಅದಕ್ಕೆ ಇಂದಿನ ಭಾರತವೇ ಸಾಕ್ಷಿ ಎಂದು ತಿಳಿಸಿದರು.
ದೇಶ ತನ್ನ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿಕೊಂಡು ಅಭಿವೃದ್ಧಿಯತ್ತ ಮುನ್ನಡೆಯುತ್ತಿರುವ ಈ ಹೊತ್ತಿನಲ್ಲಿ ರಾಜ್ಯ ಸರ್ಕಾರ ಕಳೆದ ಎರಡು ತಿಂಗಳಿನಿಂದ ಜನಪರ ಆಡಳಿತವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಸಿಕೊಂಡು ಬರುತ್ತಿದ್ದು, ಚುನಾವಣಾ ಪೂರ್ವದ ಪ್ರಣಾಳಿಕೆಯ ಘೋಷಣೆಗಳನ್ನು ಹಂತ ಹಂತವಾಗಿ ಕರ್ನಾಟಕದ ಜನತೆಗೆ ಅನುಷ್ಠಾನಗೊಳಿಸುತ್ತಿರುವುದು ದೇಶದ ಇತಿಹಾಸದಲ್ಲಿಯೇ ಪ್ರಥಮ ಎನ್ನುವುದನ್ನು ಮರೆಯುವಂತಿಲ್ಲ ಎಂದು ತಿಳಿಸಿದರು.
ಹೊತ್ತನಾಡು ಹಾಗೂ ಹೆತ್ತತಾಯಿ ಇವರ ಋಣವನ್ನು ತೀರಿಸುವುದು ಯಾರೊಬ್ಬರಿಗೂ ಸಾಧ್ಯವಿಲ್ಲ, ಆದುದರಿಂದ ಕುಟುಂಬದ ಯಜಮಾನಿ ಮಹಿಳೆಗೆ ಮಾಸಿಕ 2000 ರೂ. ನೀಡುವ ಗೃಹಲಕ್ಷ್ಮಿ ಯೋಜನೆ, ಮಹಿಳಾ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ, ನಾಡಿನ ಅರ್ಹ ಗೃಹ ಬಳಕೆದಾರರಿಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸುವ ಗೃಹಜ್ಯೋತಿ ಯೋಜನೆಯಿಂದಾಗಿ ಇಂದು ಲಕ್ಷಾಂತರ ಮನೆಗಳಲ್ಲಿ ಬದಲಾವಣೆಯ ಬೆಳಕು ಬೆಳಗುತ್ತಿದೆ. ಅನ್ನಭಾಗ್ಯ ಯೋಜನೆಯ ಲಾಭವನ್ನು ರಾಜ್ಯದ ಹಲವಾರು ಕುಟುಂಬಗಳು ಪಡೆದು ನೆಮ್ಮದಿಯ ಜೀವನ ನಡೆಸುತ್ತಿವೆ, ನಿರುದ್ಯೋಗಿ ಪದವೀಧರ ಹಾಗೂ ಡಿಪ್ಲೋಮಾ ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡುವ ಯುವನಿಧಿ ಯೋಜನೆಯೂ ಸಹ ಮುಂದಿನ ದಿನಗಳಲ್ಲಿ ಜಾರಿಗೆ ಬರಲಿದೆ. ಈ ಎಲ್ಲ ಜನಕಲ್ಯಾಣ ಯೋಜನೆಗಳನ್ನು ನಿಗದಿತ ಕಾಲದಲ್ಲಿ ಅನುಷ್ಠಾನಗೊಳಿಸುವ ಮೂಲಕ ನಮ್ಮ ಸರ್ಕಾರ ನುಡಿದಂತೆ ನಡೆದ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತಿಳಿಸಿದರು.
ಗೃಹಲಕ್ಷ್ಮಿ ಯೋಜನೆಯು ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು, ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2000 ಗಳನ್ನು ನೇರ ನಗದು ವರ್ಗಾವಣೆ ಮೂಲಕ ನೀಡಲಾಗುವುದು. ಜಿಲ್ಲೆಯಲ್ಲಿ ಈಗಾಗಲೇ 5.50 ಲಕ್ಷ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಕಡು ಬಡ ಕುಟುಂಬಗಳು ಹಸಿವಿನಿಂದ ಬಳಲಬಾರದು ಎಂಬ ಸದುದ್ದೇಶದಿಂದ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಬಿಪಿಎಲ್ ಪಡಿತರ ಚೀಟಿದಾರರಿಗೆ ಪ್ರತಿ ಫಲಾನುಭವಿಗೆ 10 ಕೆಜಿ ಅಕ್ಕಿ ಪೈಕಿ 5 ಕೆಜಿ ಆಹಾರ ಧಾನ್ಯವನ್ನು ಉಚಿತವಾಗಿ ಪ್ರತಿ ಮಾಹೆ ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು ಪ್ರತಿ ಮಾಹೆ 10,789 ಮೆಟ್ರಿಕ್ ಟನ್ (ಅಕ್ಕಿ) ಆಹಾರಧಾನ್ಯಗಳನ್ನು ವಿತರಿಸಲಾಗುತ್ತಿದೆ. ಇನ್ನುಳಿದ 5 ಕೆ.ಜಿ. ಅಕ್ಕಿಯ ಬದಲಿಗೆ ಪ್ರತಿ ಫಲಾನುಭವಿಗೆ ಮಾಹೆಯಾನ 170 ರೂ.ಹಣವನ್ನು ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನೇರ ನಗದು ಮುಖಾಂತರ ವರ್ಗಾವಣೆ ಮಾಡಲಾಗಿದೆ. ಜುಲೈ 2023ನೇ ಮಾಹೆಯಲ್ಲಿ ಜಿಲ್ಲೆಯ 5,29,515 ಅರ್ಹ ಪಡಿತರ ಚೀಟಿದಾರರಿಗೆ 30,43,28,220 ರೂ. ಗಳನ್ನು ಜಮೆ ಮಾಡಲಾಗಿದೆ ಎಂದು ತಿಳಿಸಿದರು.
ಗೃಹಜ್ಯೋತಿ ಯೋಜನೆಯಡಿ ಮೂಲಭೂತ ಸೌಕರ್ಯಗಳಲ್ಲಿ ಅತ್ಯಂತ ಪ್ರಮುಖವಾದ ವಿದ್ಯುತ್ಚಕ್ತಿ ಸೌಲಭ್ಯವನ್ನು ರಾಜ್ಯದ ಅರ್ಹ ಗೃಹಬಳಕೆ ನಾಗರೀಕರಿಗೆ ಒದಗಿಸಲು ನೋಂದಣಿ ಪ್ರಕ್ರಿಯೆಯನ್ನು ಜೂನ್ 18, 2023 ರಿಂದ ರಾಜ್ಯಾದ್ಯಂತ ಚಾಲನೆಗೊಳಿಸಲಾಗಿದೆ, ಪ್ರತಿ ಮನೆಯ ಪ್ರತಿ ತಿಂಗಳಿನ ಗರಿಷ್ಟ 200 ಯೂನಿಟ್ ಗಳವರೆಗಿನ ಬಳಕೆಯ ಮಿತಿಯಲ್ಲಿ ಪ್ರತಿ ಗ್ರಾಹಕರ ಮಾಸಿಕ ಸರಾಸರಿ ವಿದ್ಯುತ್ ಬಳಕೆಯ ಯೂನಿಟ್ ಗಳ ಮೇಲೆ ಶೇಕಡಾ 10 ಹೆಚ್ಚಿನ ಬಳಕೆಯ ಮಿತಿಗೆ ಅರ್ಹರಿರುವ ಕುಟುಂಬಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ಅವರು, ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 7,82,542 ಗೃಹ ಬಳಕೆ ಗ್ರಾಹಕರ ಪೈಕಿ 5,54,333 ಗ್ರಾಹಕರು ನೊಂದಣಿ ಮಾಡಿಕೊಂಡಿದ್ದು, ಆಗಸ್ಟ್ 01 ರಿಂದ ಸೌಲಭ್ಯವನ್ನು ಪಡೆದಿರುತ್ತಾರೆ ಎಂದು ತಿಳಿಸಿದರು.
ಮಹಿಳಾ ಸಬಲೀಕರಣಕ್ಕೆ ಪೂರಕವಾಗಿ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರು ರಾಜ್ಯದಾದ್ಯಂತ ಉಚಿತವಾಗಿ ಪ್ರಯಾಣಿಸಲು ಜೂನ್ 11 ರಿಂದ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದು, ತುಮಕೂರು ಜಿಲ್ಲೆಯಾದ್ಯಂತ ತುಮಕೂರು ವಿಭಾಗದ ಸಾರಿಗೆ ಬಸ್ ಗಳಲ್ಲಿ 90.33 ಲಕ್ಷ ಮಹಿಳೆಯರು ಬಸ್ಸುಗಳಲ್ಲಿ ಪ್ರಯಾಣಿಸಿರುತ್ತಾರೆ ಎಂದು ತಿಳಿಸಿದರು.
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 2023-24ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 4,02,235 ಕುಟುಂಬಗಳಿಗೆ ಉದ್ಯೋಗ ಚೀಟಿ ನೀಡಲಾಗಿದ್ದು, ಪ್ರಸ್ತುತ ಆರ್ಥಿಕ ವರ್ಷದಲ್ಲಿ 42.00 ಲಕ್ಷ ಮಾನವ ದಿನಗಳ ಗುರಿ ನೀಡಿದ್ದು, ಅದರಲ್ಲಿ 14.87 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿ ಒಟ್ಟು 79.78 ಕೋಟಿ ಕೂಲಿ ಮತ್ತು ಸಾಮಗ್ರಿ ಮೊತ್ತ ಪಾವತಿಸಲಾಗಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮೇಯರ್ ಪ್ರಭಾವತಿ ಸುಧೀಶ್ವರ್, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಸಿಇಓ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ ವಾಡ್, ಪಾಲಿಕೆ ಆಯುಕ್ತೆ ಅಶ್ವಿಜ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕರು, ವಿವಿಧ ಶಾಲಾ- ಕಾಲೇಜು ಮಕ್ಕಳು ಭಾಗವಹಿಸಿದ್ದರು.
Comments are closed.