ಸಂಗೊಳ್ಳಿ ರಾಯಣ್ಣ ಸ್ವಾತಂತ್ರ್ಯ ಹೋರಾಟದ ಐತಿಹಾಸಿಕ ಪುರುಷ

153

Get real time updates directly on you device, subscribe now.


ತುಮಕೂರು: ಬ್ರಿಟಿಷರ ವಿರುದ್ಧ ಹೋರಾಡಿದ ಕಿತ್ತೂರು ಸಂಸ್ಥಾನ, ಸಂಗೊಳ್ಳಿ ರಾಯಣ್ಣನ ಹೋರಾಟವೇ ನಿಜವಾದ ಸ್ವಾತಂತ್ರ್ಯದ ಹೋರಾಟದ ಆರಂಭ, ಆದರೆ ಚರಿತ್ರೆಕಾರರು 1857ರ ಸಿಪಾಯಿ ದಂಗೆಯನ್ನೇ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದು ದಾಖಲಿಸುವ ಮೂಲಕ ತಪ್ಪು ಇತಿಹಾಸ ರಚಿಸಿದ್ದಾರೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

ಶ್ರೀ ಕನಕ ಸೇವಾ ಸಮಿತಿ ವತಿಯಿಂದ ನಗರದ ಸದಾಶಿವನಗರದ ಶ್ರೀಮಾರುತಿ ಮಹಾರಾಜ್ ಕನ್ವೆನ್ ಷನ್ ಹಾಲ್ ನಲ್ಲಿ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರವರ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಬ್ರಿಟೀಷರ ವಿರುದ್ಧ ಸಿಡಿದೆದ್ದ ಸಂಗೊಳ್ಳಿ ರಾಯಣ್ಣನ ಧೈರ್ಯ್ಯ ಛಲ, ವೀರರಾಣಿ ಚೆನ್ನಮ್ಮನಿಗೆ ತೋರಿದ್ದ ಸ್ವಾಮಿ ನಿಷ್ಠೆಯಿಂದ ರಾಯಣ್ಣನ ಬಗ್ಗೆ ಅಪಾರ ಗೌರವ ಮೂಡುತ್ತದೆ, ರಾಯಣ್ಣನಲ್ಲಿದ್ದ ಪ್ರಾಮಾಣಿಕತೆ, ನಂಬಿಕೆಯನ್ನು ಇಂದಿನ ಸಮಾಜದಲ್ಲಿ ನಾವು ಶೇ.1ರಷ್ಟು ನಿರೀಕ್ಷಿಸಲು ಸಾಧ್ಯವಿಲ್ಲ, ದೇಶಕ್ಕೆ ಸ್ವಾತಂತ್ರ್ಯ ದೊರೆತ ದಿನದಂದು ಜನನ, ಗಣರಾಜ್ಯೋತ್ಸವ ದಿನದಂದು ಹುತಾತ್ಮನಾದ ರಾಯಣ್ಣನ ಜೀವನದ ಈ ಘಟನಾವಳಿಗಳು ಕಾಕತಾಳಿಯವಾದರೂ ಆತ ಸ್ವಾತಂತ್ರ್ಯ ಹೋರಾಟದ ಐತಿಹಾಸಿಕ ಪುರುಷನಾಗಿ ಹೊರಹೊಮ್ಮಿದ್ದಾನೆ ಎಂದು ವ್ಯಾಖ್ಯಾನಿಸಿದರು.

ಸಂಗೊಳ್ಳಿ ರಾಯಣ್ಣನ ಜಯಂತಿ ಹೆಸರಲ್ಲಿ ಕುರುಬ ಸಮುದಾಯದವರು ಸಂಘಟಿತರಾಗಿರುವುದು ಅತ್ಯಂತ ಸಂತಸದ ಸಂಗತಿ ಎಂದ ಡಾ.ಜಿ.ಪರಮೇಶ್ವರ ಅವರು ಹಿಂದುಳಿದವರಿಗಿಂತ ದಲಿತರ ಬದುಕು ಶೋಚನೀಯವಾಗಿದೆ. ನಾನು ಸಹ ದೇಗುಲಕ್ಕೆ ಪ್ರವೇಶ ನಿರಾಕರಣೆ, ರಾಜಕೀಯ ಸಾಮಾಜಿಕ ಪ್ರಾತಿನಿಧ್ಯವಿಲ್ಲದ ಅವಮಾನ ಸಹಿಸಿ ಈ ಹಂತಕ್ಕೆ ಬಂದಿದ್ದೇನೆ, ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷ ಕಳೆದರೂ ಹಿಂದುಳಿದ ದಲಿತ ಸಮುದಾಯಗಳ ಸಾಮಾಜಿಕ ಬದುಕಿನಲ್ಲಿ ಪೂರ್ಣ ಬದಲಾವಣೆ ಕಾಣಲು ಸಾಧ್ಯವಾಗಿಲ್ಲ. ದೇಶದಲ್ಲಿ ಅನೇಕ ವಿದ್ಯಾಮಾನಗಳು ನಡೆಯುತ್ತಿವೆ. ಇದಕ್ಕೆಲ್ಲ ಸಂಘಟಿತರಾಗಿ ಹೋರಾಡುವುದೇ ಪರಿಹಾರ ಎಂದು ಹೇಳಿ ಶ್ರೀ ಕನಕಶ್ರೀ ಸೇವಾ ಸಮಿತಿಯವರ ಕಾರ್ಯವನ್ನು ಶ್ಲಾಘಿಸಿದರು.

ಪತ್ರಕರ್ತ ಎಸ್.ನಾಗಣ್ಣ ಮಾತನಾಡಿ ಹಾಲು ಕೆಟ್ಟರೂ ಹಾಲಮತದವರು ಕೆಡುವುದಿಲ್ಲ ಎಂಬ ನಾಣ್ಣುಡಿಯಂತೆ ಬದುಕುತ್ತಿರುವವರು ಕುರುಬ ಸಮುದಾಯದವರು, ಶುಭವೆಂದು ಸಮುದಾಯವದರಿಂದ ಬೋಣಿ ಮಾಡಿಸಿಕೊಳ್ಳುವ ಪದ್ಧತಿ ಈಗಲೂ ಚಾಲ್ತಿಯಲ್ಲಿದೆ. ಆದರೆ ಪ್ರಾತಿನಿಧ್ಯದ ವಿಷಯ ಬಂದಾಗ ಸಮಾಜಕ್ಕೆ ಅವಕಾಶಗಳು ಸೀಮಿತವಾಗಿದೆ. ನಾಲ್ಕೈದು ನಾಯಕರ ಬಳಿಕ ಮುಂದೇನು ಎಂಬ ಸವಾಲಿದೆ, ಪರಮೇಶ್ವರ್ ಅವರಂತಹ ಸಜ್ಜನ ನಾಯಕರು ಸಮುದಾಯಕ್ಕೆ ರಾಜಕೀಯ, ಸಾಮಾಜಿಕ ಪ್ರಾತಿನಿಧ್ಯ ಕೊಡಿಸಲು ಬೆಂಬಲವಾಗಿ ನಿಲ್ಲಬೇಕು ಎಂದರು.

ಕೆಪಿಸಿಸಿ ವಕ್ತಾರ ನಿಖೇತ್ ರಾಜ್ ಮೌರ್ಯ ಅವರು ಸಂಗೊಳ್ಳಿ ರಾಯಣ್ಣನ ಕುರಿತು ಮಾತನಾಡಿ ಸ್ವಾತಂತ್ರ್ಯ ಹೋರಾಟದಲ್ಲಿ 7 ಲಕ್ಷ ಮಂದಿ ಬಲಿದಾನವಾಗಿದ್ದಾರೆ. ಆದರೆ ಎಲ್ಲರ ಹೆಸರು ಚರಿತ್ರೆಯಲ್ಲಿ ಬಂದಿಲ್ಲ, ಗಾಂಧಿ, ನೆಹರು, ಬೋಸ್, ಶಾಸ್ತ್ರೀಜಿ ಅಂತಹವರ ಸಾಲಲ್ಲಿ ಕರ್ನಾಟಕದಿಂದ ವೀರಾಗ್ರಣಿ ಸಂಗೊಳ್ಳಿ ರಾಯಣ್ಣ, ಟಿಪ್ಪು ಸುಲ್ತಾನ್, ರಾಣಿಚೆನ್ನಮ್ಮ, ಕೆಳದಿ ಅಬ್ಬಕ್ಕ ಹೆಸರು ಕೇಳಿ ಬರುತ್ತದೆ, ಬ್ರಿಟಿಷರು ಸಂಗೊಳ್ಳಿ ರಾಯಣ್ಣನಿಗೆ ಕಿತ್ತೂರಿನ ಅರಸೊತ್ತಿಗೆಯನ್ನೆ ಕೊಡುತ್ತೇವೆಂದರೂ ನಿಷ್ಠೆ ಬದಲಿಸದೆ ದೇಶಕ್ಯಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಸಂಗೊಳ್ಳಿ ರಾಯಣ್ಣ ಎಂದು ಬಣ್ಣಿಸಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಪ್ರೊ.ಕೆ.ಜಿ.ಪರಶುರಾಮ್ ಸಮುದಾಯದ ಸಂಖ್ಯೆಗನುಗುಣವಾಗಿ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಸಂಗೊಳ್ಳಿ ರಾಯಣ್ಣ ಬದುಕಿದ್ದು 33 ವರ್ಷಗಳಾದರೂ ಸಾಧನೆ 225 ವರ್ಷದವರೆಗೂ ಜೀವಂತವಾಗಿದೆ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸುರೇಶ್, ಕಾರ್ಯಾಧ್ಯಕ್ಷ ಆರ್.ಎಂ.ಸಿ ರಾಜು, ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮೈಲಪ್ಪ, ಕಾಂಗ್ರೆಸ್ ಮುಖಂಡರಾದ ಆರ್.ರಾಮಕೃಷ್ಣ, ಇಕ್ಬಾಲ್ ಅಹಮದ್, ಟಿ.ಎನ್.ಮಧುಕರ್, ಅನಿಲ್ ಕುಮಾರ್, ಕೆಂಪರಾಜು, ಲಕ್ಕಪ್ಪ, ಗಿರೀಶ್, ಧರ್ಮರಾಜ್, ಮಹದೇವ್, ರೇಣುಕಾ ಪ್ರಸಾದ್ ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!