ದಲಿತರಿಗೆ ದೇವಸ್ಥಾನ ಪ್ರವೇಶ ನಿರಾಕರಿಸಿದ್ರೆ ಕ್ರಮ: ಡೀಸಿ

11,779

Get real time updates directly on you device, subscribe now.


ತುಮಕೂರು: ಜಿಲ್ಲೆಯಲ್ಲಿರುವ 2436 ಮುಜರಾಯಿ ಹಾಗೂ ಇತರೆ ದೇವಸ್ಥಾನಗಳಲ್ಲಿ ದಲಿತ ಜನಾಂಗದವರಿಗೆ ಪ್ರವೇಶಾವಕಾಶ ನಿರಾಕರಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲಾ ಮುಜರಾಯಿ ಮತ್ತು ಇತರೆ ದೇವಸ್ಥಾನಗಳ ಮುಂದೆ ಎಲ್ಲರಿಗೂ ಮುಕ್ತ ಪ್ರವೇಶಾವಕಾಶವಿದೆ ಎಂದು ಗೋಡೆ ಬರಹ ಬರೆಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸ್ಥಳ ಪರಿಶೀಲನೆ ನಡೆಸಿ

ದೇವಸ್ಥಾನಗಳ ಎಲ್ಲರಿಗೂ ಮುಕ್ತ ಪ್ರವೇಶಾವಕಾಶವಿದೆ ಎಂದು ಗೋಡೆ ಬರಹವಿದ್ದರೂ ದಲಿತರ ಪ್ರವೇಶವನ್ನು ನಿರಾಕರಿಸುವುದು ಕಂಡು ಬಂದಲ್ಲಿ ಆಯಾ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳು ತಹಶೀಲ್ದಾರರೊಂದಿಗೆ ಜಂಟಿ ಸ್ಥಳ ಪರಿಶೀಲನೆ ನಡೆಸಿ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದರು.
ನೋಟೀಸ್ ಜಾರಿ

ಎಲ್ಲರಿಗೂ ಮುಕ್ತ ಪ್ರವೇಶಾವಕಾಶವಿದೆ ಎಂದು ಗೋಡೆ ಬರಹ ಇಲ್ಲದಿರುವ ದೇವಸ್ಥಾನಗಳು ಕೂಡಲೇ ಗೋಡೆ ಬರಹ ಬರೆಸಬೇಕು. ಪ್ರವೇಶಾವಕಾಶಕ್ಕೆ ಸಂಬಂಧಿಸಿದಂತೆ ಗೋಡೆ ಬರಹ ಬರೆಸದೆ ಅಥವಾ ಫಲಕಗಳನ್ನು ಅಳವಡಿಸದೆ ಇರುವ ದೇವಸ್ಥಾನಗಳಿಗೆ ನೋಟೀಸ್ ಜಾರಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

89 ದೌರ್ಜನ್ಯ ಪ್ರಕರಣಗಳಿಗೆ ಪರಿಹಾರ ಧನ
ಜಿಲ್ಲೆಯಲ್ಲಿ 2022ರ ಡಿಸೆಂಬರ್ 21 ರಿಂದ 2023ರ ಜುಲೈ 31ರವರೆಗೆ 67 ಪರಿಶಿಷ್ಟ ಜಾತಿ ಹಾಗೂ 22 ಪರಿಶಿಷ್ಟ ಪಂಗಡ ಸೇರಿ ಒಟ್ಟು 89 ದೌರ್ಜನ್ಯ ಪ್ರಕರಣಗಳು ವರದಿಯಾಗಿದ್ದು, ಈವರೆಗೂ 1.10ಕೋಟಿ ರೂ.ಗಳ ಪರಿಹಾರ ಮಂಜೂರು ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಸಭೆಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ವರದಿಯಾದ 89 ದೌರ್ಜನ್ಯ ಪ್ರಕರಣಗಳ ಪೈಕಿ 55 ಮಹಿಳೆ ಹಾಗೂ 65 ಪುರುಷರು ಸೇರಿ 120 ಸಂತ್ರಸ್ಥರಿಗೆ ಪರಿಹಾರ ಮಂಜೂರಾಗಿದ್ದು, ಈ ಪೈಕಿ ಪರಿಶಿಷ್ಟ ಜಾತಿಯ 91 ಸಂತ್ರಸ್ಥರಿಗೆ 82,10,850 ರೂ. ಹಾಗೂ ಪ.ವರ್ಗದವರಿಗೆ 28,01,200 ರೂ.ಗಳ ಪರಿಹಾರ ಮಂಜೂರಾಗಿದೆ ಎಂದು ಸಭೆಯ ಗಮನಕ್ಕೆ ತಂದರಲ್ಲದೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸಂಬಂಧಿಸಿದಂತೆ 71 ಜಾತಿ ನಿಂದನೆ, ಹಲ್ಲೆ, 9 ಕೊಲೆ, 9 ಅತ್ಯಾಚಾರ, ಅಪಹರಣ, ಲೈಂಗಿಕ ಕಿರುಕುಳ, ಮಾನಸಿಕ ಹಲ್ಲೆ ಸ್ವರೂಪದ ಪ್ರಕರಣಗಳಾಗಿವೆ ಎಂದು ವಿವರಿಸಿದರು.

ಶೀಘ್ರ ವಿಲೇವಾರಿಗೆ ಸೂಚನೆ
ವಿವಿರವಾದ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಪ್ರಸಕ್ತ 2023ರ ಕ್ಯಾಲೆಂಡರ್ ವರ್ಷದ ಜುಲೈ ಅಂತ್ಯದವರೆಗೆ ಪರಿಶಿಷ್ಟ ಜಾತಿ, ಪ.ಪಂಗಡಗಳ ದೌರ್ಜನ್ಯ ಕಾಯ್ದೆಯಡಿ ದಾಖಲಾಗಿರುವ 48 ಪ್ರಕರಣಗಳಲ್ಲಿ ವಿಚಾರಣೆ ಬಾಕಿ ಇರುವ ಹಾಗೂ ತನಿಖೆ ಹಂತದಲ್ಲಿರುವ ಪ್ರಕರಣಗಳ ಬಗ್ಗೆ ಚರ್ಚಿಸಿ ಆದಷ್ಟು ಬೇಗ ಪ್ರಕರಣಗಳನ್ನು ಬಾಕಿ ಉಳಿಸಿಕೊಳ್ಳದೆ ಶೀಘ್ರ ವಿಲೇವಾರಿಗೆ ಕ್ರಮವಿಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆ ಕಡ್ಡಾಯ
ಸಮಿತಿ ಸದಸ್ಯ ರಂಗಯ್ಯ ಮಾತನಾಡಿ, ಕ್ಯಾಲೆಂಡರ್ ವರ್ಷದಲ್ಲಿ ಉಪವಿಭಾಗ ಮಟ್ಟದಲ್ಲಿ 4 ಜಾಗೃತಿ ಉಸ್ತುವಾರಿ ಸಮಿತಿ ಸಭೆ ನಡೆಸಬೇಕು ಹಾಗೂ ನಿಗಧಿತವಾಗಿ ದಲಿತರ ಕುಂದು ಕೊರತೆ ಸಭೆಗಳನ್ನು ನಡೆಸಬೇಕೆಂದು ಮನವಿ ಮಾಡಿದಾಗ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಆಯಾ ಕ್ಯಾಲೆಂಡರ್ ವರ್ಷದಲ್ಲಿ ನಿಗದಿಗೊಳಿಸಿದಂತೆ ಉಪವಿಭಾಗ, ತಾಲ್ಲೂಕು ಮಟ್ಟದಲ್ಲಿ ಸಭೆಗಳನ್ನು ನಡೆಸಿ ದಲಿತರ ಕುಂದುಕೊರತೆಗಳಿಗೆ ಪರಿಹಾರ ನೀಡಬೇಕೆಂದು ಸೂಚಿಸಿದರು.

ಶಾಂತಿ ಸಭೆ ನಡೆಸಿ

ಪರಿಶಿಷ್ಟ ಜಾತಿ, ಪಂಗಡದವರ ಮೇಲೆ ದೌರ್ಜನ್ಯ ಪ್ರಕರಣಗಳು ಘಟಿಸಿದ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣದ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ರಕ್ಷಣೆ ಹಾಗೂ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು, ಪೊಲೀಸ್, ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲ್ಲೂಕು ಕಚೇರಿಗಳು ಜಂಟಿಯಾಗಿ ಶಾಂತಿ ಸಭೆಗಳನ್ನು ನಡೆಸಿ ಶಾಂತಿ ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡಬೇಕೆಂದು ಸೂಚಿಸಿದರು.

ಕೂಲಂಕುಷ ವರದಿ ನೀಡಿ

ನೊಂದ ಸಂತ್ರಸ್ಥರಿಗೆ ನಿಯಮಾನುಸಾರ ಪರಿಹಾರಧನ ಮಂಜೂರು ಮಾಡಲು ವಿಳಂಬ ಮಾಡಬಾರದು, ಅತಿ ಹೆಚ್ಚು ದೌರ್ಜನ್ಯ ಪ್ರಕರಣಗಳು ವರದಿಯಾಗುವ ಪ್ರದೇಶಗಳಲ್ಲಿ ಜನರಲ್ಲಿ ಅರಿವು ಮೂಡಿಸಲು ಕಾರ್ಯಾಗಾರ ಹಮ್ಮಿಕೊಳ್ಳಬೇಕು ಎಂದು ತಿಳಿಸಿದರಲ್ಲದೆ, ತುಮಕೂರು ತಾಲ್ಲೂಕು ಅಮಲಾಪುರ ಗ್ರಾಮದಲ್ಲಿ ವಾಸವಿರುವ ಸುಮಾರು 50 ಹಕ್ಕಿ-ಪಿಕ್ಕಿ ಜನಾಂಗದವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ವರದಿ ನೀಡಬೇಕೆಂದು ಸೂಚನೆ ನೀಡಿದರು.

182 ಪ್ರಮಾಣ ಪತ್ರ ಅಸಿಂಧು
ತುಮಕೂರು ಜಿಲ್ಲೆಯಲ್ಲಿ ಬೇಡ ಜಂಗಮ ಜಾತಿ ಇಲ್ಲದ ಕಾರಣ ಈಗಾಗಲೇ 182 ಮಂದಿಗೆ ನೀಡಲಾಗಿರುವ ಬೇಡ ಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರಗಳನ್ನು ಅಸಿಂಧುಗೊಳಿಸಲಾಗಿದ್ದು, ಅಸಿಂಧುಗೊಳಿಸಿರುವ ಪಟ್ಟಿಯನ್ನು ಎಲ್ಲಾ ಇಲಾಖೆಗಳ ವೆಬ್ಸೈಟ್ನಲ್ಲಿ ಪ್ರಚುರಪಡಿಸಬೇಕು, ಇಲ್ಲದಿದ್ದಲ್ಲಿ ಪರಿಶಿಷ್ಟ ಜಾತಿಗೆ ಮೀಸಲಿರುವ ಸೌಲಭ್ಯಗಳು ದುರುಪಯೋಗವಾಗುವ ಸಾಧ್ಯತೆ ಇರುತ್ತದೆ, ಅಸಿಂಧುಗೊಳಿಸಿದ ಜಾತಿ ಪ್ರಮಾಣಪತ್ರ ಹೊಂದಿದವರು ನಿಯಮ ಮೀರಿ ಸರ್ಕಾರದ ಸೌಲಭ್ಯ ಪಡೆಯುತ್ತಿರುವುದು ಕಂಡುಬಂದಲ್ಲಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಪಾಲಿಕೆ ಆಯುಕ್ತೆ ಅಶ್ವಿಜ, ಉಪ ವಿಭಾಗಾಧಿಕಾರಿಗಳಾದ ಗೌರವ್ ಕುಮಾರ್ ಶೆಟ್ಟಿ ಹಾಗೂ ರಿಷಿ ಆನಂದ್, ತಹಶೀಲ್ದಾರರು, ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!