ಕುಣಿಗಲ್: ಸ್ವಾತಂತ್ರ್ಯ ಭಾರತವು ಚಂದ್ರನ ಅಂಗಳದ ಮೇಲೆ ಕಾಲಿಡಲು ಯತ್ನಿಸುತ್ತಿರುವಾಗ, ಬುಡಕಟ್ಟು ಆಚರಣೆಗೆ ಮಾರು ಹೋದ ಕಾಡುಗೊಲ್ಲ ಸಂಪ್ರದಾಯದವರು ಬದಲಾದ ಜಗತ್ತಿಗೆ ತಮ್ಮನ್ನು ತಾವು ಸಿದ್ಧಗೊಳಿಸಬೇಕಿದೆ ಎಂದು ತಾಪಂ ಇಒ ಜೋಸೆಫ್ ಹೇಳಿದರು.
ಗುರುವಾರ ತಾಲೂಕಿನ ಸಂತೇಮಾವತ್ತೂರು ಗೊಲ್ಲರಹಟ್ಟಿಯಲ್ಲಿ ತಾಲೂಕು ಆಡಳಿತ, ಕಾನೂನು ಸೇವೆಗಳ ಸಮತಿ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಕಾಡುಗೊಲ್ಲರ ಹಟ್ಟಿಯಲ್ಲಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಕಾಡುಗೊಲ್ಲ ಬುಡಕಟ್ಟು ಜನಾಂಗವು ನಾಗರಿಕ ಸಮಾಜದಿಂದ ದೂರ ಇದ್ದು ತಮ್ಮದೆ ಅದ ಸೂಕ್ಷ್ಮ ಆಚರಣೆಗಳನ್ನು ಪಾಲಿಸಿಕೊಂಡು ಬರುತ್ತಿರುವ ಜನಾಂಗ, ನಾಗರಿಕತೆ ಬೆಳೆದಂತೆಲ್ಲಾ ಜನಾಂಗವೂ ಬದಲಾದ ನಾಗರಿಕತೆಗೆ ಹೊಂದುಕೊಳ್ಳುವ ಮನೋಭಾವ ಹೊಂದಬೇಕು, ಯಾವುದೇ ಆಚರಣೆಗಳು ಮಾನವೀಯತೆಗೆ ಪೂರಕವಾಗಿರಬೇಕೆ ಹೊರತು ಮಾರಕವಾಗಬಾರದು, ಪದ್ಧತಿ, ಆಚರಣೆ ನೆಪದಲ್ಲಿ ಜೀವ ಹಾನಿಯಾಗುವಂತ ಕ್ರಮ ಸರಿಯಲ್ಲ ಎಂಬುದ ಎಲ್ಲರೂ ಅರಿತು ನಡೆಯಬೇಕೆಂದರು.
ತಹಶೀಲ್ದಾರ್ ವಿಶ್ವನಾಥ ಮಾತನಾಡಿ, ಜಾತಿ, ಧರ್ಮ, ಆಚರಣೆಗಳನ್ನು ಮಾಡಿದ್ದು ಮನುಷ್ಯನೆ ಹೊರತು ದೇವರಲ್ಲ, ಮನುಷ್ಯ ರೂಪಿಸಿಕೊಂಡ ಆಚರಣೆ, ಸಂಸ್ಕಾರಗಳು ಜೀವ ಪೋಷಿಸಿ ರಕ್ಷಿಸುವಂತಾಗಬೇಕೆ ವಿನಃ ಜೀವ ಹಾನಿಯಾಗುವಂತಾಗಬಾರದು, ಕಾಡುಗೊಲ್ಲ ಸಮುದಾಯ ಮೌಢ್ಯಾಚರಣೆಗಳಿಂದ ಹೊರಬಂದು ಬದಲಾದ ನಾಗರಿಕತೆಗೆ ಹೊಂದಿಕೊಂಡು ಬದುಕು ರೂಪಿಸಿಕೊಳ್ಳ ಬೇಕಿದೆ, ಈ ನಿಟ್ಟಿನಲ್ಲಿ ತಾಲೂಕು ಆಡಳಿತ ಸದಾ ಜನಾಂಗದ ಜೊತೆಯಲ್ಲಿರುತ್ತದೆ, ಯಾರಿಗೂ ಯಾವುದೇ ಜೀವಹರಣ ಮಾಡುವ ಹಕ್ಕಿಲ್ಲ ಎಂಬುದ ಅರಿಯಬೇಕು ಎಂದರು.
ಪ್ಯಾನಲ್ ವಕೀಲೆ ಜಯಲಕ್ಷ್ಮೀ ಮಾತನಾಡಿ, ಸಂವಿಧಾನ ಎಲ್ಲರಿಗೂ ಘನತೆಯಿಂದ ಬದುಕುವ ಹಕ್ಕನ್ನು ಕಲ್ಪಿಸಿದೆ, ಅದರಂತೆ ಮಾನವೀಯತೆ ಕಾಪಾಡುವ ಹೊಣೆಗಾರಿಕೆ ಎಲ್ಲರ ಮೇಲೂ ಇದ್ದು ಪದ್ಧತಿ ಆಚರಣೆ ನೆಪದಲ್ಲಿ ಯಾವುದೇ ಜೀವಕ್ಕೆ ಕುತ್ತು ಬಾರದ ರೀತಿಯಲ್ಲಿ ಜೀವನ ನಡೆಸಬೇಕಿದೆ ಎಂದರು.
ಸಿಡಿಪಿಒ ಶಶಿಧರ ಮಾತನಾಡಿ, ಹಟ್ಟಿಗಳಲ್ಲಿ ಅಳವಡಿಸಿಕೊಂಡಿರುವ ಆಚರಣೆ, ಕಂದಾಚಾರ ಪದ್ಧತಿಗಳ ವೈಜ್ಞಾನಿಕ ವಿಶ್ಲೇಷಣೆ ಮಾಡಿಕೊಂಡು ಈಗಿನ ಕಾಲಕ್ಕೆ ತಕ್ಕಂತೆ ಜೀವನ ಮಾರ್ಪಾಡು ಮಾಡಿಕೊಳ್ಳಬೇಕಿದೆ, ಈ ನಿಟ್ಟಿನಲ್ಲಿ ಜನಾಂಗವು ಆತ್ಮಾವಲೋಕನ ಮಾಡಿಕೊಂಡು ಕೆಲ ಮೌಢ್ಯತೆ ತೊರೆಯಬೇಕಿದೆ ಎಂದರು.
ಸಂತೇಮಾವತ್ತೂರು ಗ್ರಾಪಂ ಅಧ್ಯಕ್ಷೆ ಹೇಮಾಬಾಯಿ ಬಾಲನಾಯಕ್, ಉಪಾಧ್ಯಕ್ಷೆ ಶಿವಲಿಂಗಮ್ಮ, ಸದಸ್ಯರಾದ ಮಂಜುನಾಥ, ಸುರೇಶ, ಟಿಎಚ್ಒ ಮರಿಯಪ್ಪ, ಸಿಪಿಐ ಮಾದ್ಯಾ ನಾಯಕ್, ಪಿಡಿಒ ವತ್ಸಲಾ, ಕಾಡುಗೊಲ್ಲ ಅಸ್ಮಿತೆ ಸಂಘದ ಅಧ್ಯಕ್ಷ ಜಿ.ಕೆ.ನಾಗಣ್ಣ, ವಕೀಲ ಯೋಗೇಶ್ ಇತರರು ಇದ್ದರು. ಕಾರ್ಯಕ್ರಮ ಅಂಗವಾಗಿ ಗೊಲ್ಲರಹಟ್ಟಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.
Comments are closed.