ರಸ್ತೆಗಿಳಿಯಲಿಲ್ಲ ಕೆಎಸ್‌ಆರ್‌ಟಿಸಿ ಬಸ್- ಖಾಸಗಿ ಬಸ್‌ಗಳದ್ದೇ ಕಾರುಬಾರು

ಸಾರಿಗೆ ನೌಕರರ ಮುಷ್ಕರ- ವೇತನ ಹೆಚ್ಚಳಕ್ಕೆ ಪಟ್ಟು

525

Get real time updates directly on you device, subscribe now.

ತುಮಕೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರ ಸಂಘಟನೆ ಮುಷ್ಕರ ಕರೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಸ್ಥಗಿತವಾಗಿತ್ತು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು, ಕೆಎಸ್‌ಆರ್‌ಟಿಸಿ ಬಸ್‌ಗಳು ಡಿಪೋದಲ್ಲಿ ಠಿಕಾಣಿ ಹೂಡಿದ್ದವು, ಖಾಸಗಿ ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿದ್ದರೂ ಪ್ರಯಾಣಿಕರಿಗೆ ಸಂಪೂರ್ಣ ತೃಪ್ತಿಕರ ಸೇವೆ ನೀಡಲು ಸಾಧ್ಯಯವಾಗಲಿಲ್ಲ.

ಸಾರ್ವಜನಿಕರು ಎಂದಿನಂತೆ ಶಾಲಾ, ಕಾಲೇಜು, ಸರಕಾರಿ ಮತ್ತು ಖಾಸಗಿ ಕಚೇರಿಗಳಿಗೆ ತೆರಳಲು ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು, ಆದರೆ ಸರಕಾರಿ ಬಸ್‌ಗಳಿಲ್ಲದೆ ಅವುಗಳ ಸ್ಥಾನದಲ್ಲಿದ್ದ ಬೆರಳೆಣಿಕೆಯ ಖಾಸಗಿ ಬಸ್‌ಗಳಿಗೆ ಹತ್ತಬೇಕೆ, ಬೇಡವೆ ಎಂಬ ಗೊಂದಲದಲ್ಲಿಯೇ ಪ್ರಯಾಣಿಕರು ಇದ್ದರು, ಕೆಲವರು ಖಾಸಗಿ ಬಸ್‌ಗಳಿಗೆ ಹತ್ತಲು ಹಿಂದೇಟು ಹಾಕಿರುವುದು ಕಂಡು ಬಂತು.

ನಗರದಿಂದ ತುಮಕೂರು ಜಿಲ್ಲೆಯ 9 ತಾಲೂಕು ಕೇಂದ್ರಗಳಾದ ತಿಪಟೂರು, ಕುಣಿಗಲ್, ಪಾವಗಡ, ಮಧುಗಿರಿ, ಕೊರಟಗೆರೆ, ಚಿಕ್ಕನಾಯಕನಹಳ್ಳಿ, ಶಿರಾ, ಗುಬ್ಬಿ, ತುರುವೇಕೆರೆಗಳಿಗೆ ತೆರೆಳಲು ಸರಿಯಾದ ಬಸ್‌ಗಳಿಲ್ಲದೆ ಪ್ರಯಾಣಿಕರು ಪರದಾಡುವಂತಾಯಿತು.

ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸಾರಿಗೆ ಸಮಿತಿಯು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ, ಪ್ರಯಾಣಿಕರಿಗೆ ತೊಂದರೆಯಾಗದ ರೀತಿ ಖಾಸಗಿ ಸಾರಿಗೆ ಸೇವೆ ಉಪಯೋಗಿಸಿಕೊಳ್ಳಲು ತೀರ್ಮಾನಿಸಿ ಅಗತ್ಯ ಕ್ರಮ ಕೈಗೊಂಡಿದ್ದರೂ ದೊಡ್ಡ ಪ್ರಮಾಣದ ಪ್ರಯೋಜನವೇನು ಆಗಲಿಲ್ಲ.

ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಆರ್.ಬಸವರಾಜು ಮಾತನಾಡಿ, ಮಧ್ಯಾಹ್ನ 12 ಗಂಟೆಯ ಒಳಗೆ ತುಮಕೂರು ಡಿಪೋದಿಂದ 310 ಬಸ್ ಹೊರಡಬೇಕಾಗಿತ್ತು, ಆದರೆ ಇದುವರೆಗು ಕಾರ್ಯಾಚರಣೆ ನಡೆಸಿಲ್ಲ, ಈಗಾಗಲೇ ಮುಷ್ಕರ ನಿರತ ಚಾಲಕರು, ನಿರ್ವಾಹಕರೊಂದಿಗೆ ಮಾತುಕತೆ ನಡೆಸಲಾಗುತ್ತಿದ್ದು, 15- 20 ಜನರು ಕರ್ತವ್ಯಕ್ಕೆ ಹಾಜರಾಗುವುದಾಗಿ ತಿಳಿಸಿದ್ದಾರೆ, ಅವರು ಬಂದರೆ ಅಗತ್ಯವಿರುವ ಕಡೆ ಬಸ್‌ಗಳ ಸಂಚಾರ ಕಾರ್ಯಾರಂಭವಾಗಲಿದೆ ಎಂದರು.

ಆರ್‌ಟಿಓ ಎಸ್.ರಾಜು ಮಾತನಾಡಿ, ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪ್ರಯಾಣಿಕರಿಗೆ ತೊಂದರೆಯಾಗದಂತೆ 550 ಬಸ್‌ಗಳನ್ನು ಓಡಿಸಲು ಮಂಗಳವಾರ ನಡೆದ ಸಾರಿಗೆ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ, ಖಾಸಗಿ ಬಸ್‌ಗಳ ಜೊತೆಗೆ ಮ್ಯಾಕ್ಸಿ, ಕ್ಯಾಬ್, ಮಿನಿ ಬಸ್, ಟೆಂಪೋ ಇನ್ನಿತರ ಖಾಸಗಿ ವಾಹನಗಳನ್ನು ರಸ್ತೆಗೆ ಇಳಿಸಲಾಗಿದೆ, ಜಿಲ್ಲಾಧಿಕಾರಿಗಳು ಹಾಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಲಹೆಯಂತೆ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದರು.

ಪ್ರಯಾಣಿಕರಿಲ್ಲದೆ ಖಾಲಿ ಖಾಲಿಯಾಗಿರುವ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು, ಕೆಎಸ್‌ಆರ್‌ಪಿ ತುಕಡಿ, ಡಿಎಆರ್ ತುಕಡಿ, 40 ಪೊಲೀಸ್ ಪೇದೆಗಳನ್ನು ಬಂದೋಬಸ್ತ್‌ಗಾಗಿ ನಿಯೋಜಿಸಲಾಗಿತ್ತು.

Get real time updates directly on you device, subscribe now.

Comments are closed.

error: Content is protected !!