ಕುಣಿಗಲ್: ಬಿಜೆಪಿ ಸರ್ಕಾರದ ಅವಧಿಯಲ್ಲಿ ಕುಣಿಗಲ್ ತಾಲೂಕಿಗೆ ಹೇಮೆ ನೀರು ಪಡೆಯಲು ಹೋರಾಟ ಮಾಡಬೇಕಿತ್ತು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಯಾವುದೇ ಹೋರಾಟ ಇಲ್ಲದೆ ಮೊದಲ ಹಂತದಲ್ಲೆ ನಾಲೆಯ ಕೊನೆಯ ಭಾಗ ಕುಣಿಗಲ್ ದೊಡ್ಡಕೆರೆಗೆ ನೀರು ಹರಿಸಲಾಗುತ್ತಿದೆ ಎಂದು ಶಾಸಕ ಡಾ.ರಂಗನಾಥ್ ಹೇಳಿದರು.
ಶುಕ್ರವಾರ ಸಂಜೆ ಕುರುಡಿಹಳ್ಳಿ ಗ್ರಾಮದ ಸಮೀಪ ಹೇಮಾವತಿ ನಾಲೆಯಲ್ಲಿ ಗಂಗೆಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಗೊರೂರು ಜಲಾಶಯದಲ್ಲಿ 38 ಟಿಎಂಸಿ ನೀರು ಇರಬೇಕಿತ್ತು, 27 ಟಿಎಂಸಿ ನೀರಿದೆ, ನೀರಿನ ಕೊರತೆ ಇದ್ದರೂ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಶ್ರಮದಿಂದ ತಾಲೂಕಿಗೆ ಹೇಮೆ ನೀರು ಹರಿಸಲಾಗುತ್ತಿದೆ, ಬೆಳೆ ಬೆಳೆಯಲು ರೈತರು ಬೇಡಿಕೆ ಇಡುತ್ತಿದ್ದಾರೆ. ಮಳೆಯ ಕೊರತೆ ನಡುವೆ ಈಬಾರಿ ಜನ, ಜಾನುವಾರುಗಳ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲಾಗುವುದು, ರೈತಾಪಿ ಜನತೆ ಸಹಕಾರ ನೀಡಬೇಕಿದೆ,
ಮಾರ್ಕೋನಹಳ್ಳಿ ಜಲಾಶಯಕ್ಕೆ ನೀರು ಹರಿಸಲು ಸಭೆ ನಡೆಸಲಾಗುತ್ತಿದೆ, ಅಚ್ಚುಕಟ್ಟು ರೈತರು ಭತ್ತದ ಬೆಳೆಗೆ ನೀರು ಕೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಂಸದರೊಂದಿಗೆ ಚರ್ಚಿಸಿ ಇನ್ನು ಹದಿನೈದು ದಿನದೊಳಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಗ್ಯಾರಂಟಿ ಯೋಜನೆಗೆ ಅನುದಾನ ಹೊಂದಾಣಿಕೆ ಮಾಡಲು ಸರ್ಕಾರ ಶ್ರಮಿಸುತ್ತಿದ್ದು ಆರ್ಥಿಕ ಮುಗ್ಗಟ್ಟಿನ ಪರಿಣಾಮ ಸಾಧ್ಯವಾಗಿಲ್ಲ. ಹೀಗಾಗಿ ತಾಲೂಕಿನ ಪ್ರಮುಖ ನೀರಾವರಿ ಬೇಡಿಕೆಯಾದ ಲಿಂಕ್ ಕೆನಾಲ್ ಬೇಡಿಕೆ ಸರ್ಕಾರದ ಮುಂದೆ ಪ್ರಸ್ತಾಪದಲ್ಲಿದ್ದು ಮುಂದಿನ ದಿನಗಳಲ್ಲಿ ಕಾಮಗಾರಿ ಅನುಷ್ಠಾನವಾಗುವುದರಲ್ಲಿ ಅನುಮಾನ ಇಲ್ಲ. ತಾಲೂಕಿನಲ್ಲಿ ಮಳೆ ಕೊರತೆಯಾಗಿದ್ದು ಬೆಳೆ ಕೈಗೊಳ್ಳಲು ಕಷ್ಟಕರವಾಗುತ್ತಿದೆ. ಮಾರ್ಕೋನಹಳ್ಳಿ, ಮಂಗಳಾ ಲಿಂಕ್ ಕೆನಾಲ್ ಕಾಮಗಾರಿ ಶೇ.80 ರಷ್ಟು ಪೂರ್ಣಗೊಂಡಿದ್ದು ಶೀಘ್ರದಲ್ಲೆ ಕಾಮಗಾರಿ ಉದ್ಘಾಟನೆಗೆ ಕ್ರಮ ಕೈಗೊಳ್ಳಲಾಗುವುದು, ಪ್ರಸಕ್ತ ಸಾಲಿನಲ್ಲಿ ರಾಜ್ಯ ಸೇರಿದಂತೆ ತಾಲೂಕಿನಾದ್ಯಂತ ಮಳೆ ಕೊರತೆ ಇರುವ ಕಾರಣ ರೈತರು ನೀರಾವರಿ ವಿಷಯದಲ್ಲಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ಪುರಸಭೆ ಸದಸ್ಯರಾದ ರಂಗಸ್ವಾಮಿ, ಸಮೀವುಲ್ಲಾ, ದೇವರಾಜ್, ಮುಖಂಡರಾದ ಸ್ವಾಮಿ, ರಾಜಣ್ಣ, ಬಿ.ಡಿ.ಕುಮಾರ್, ನರಸೇಗೌಡ, ನಾಲಾ ವಲಯದ ಕಾರ್ಯ ನಿರ್ವಾಹಕ ಅಭಿಯಂತರ ಕೃಷ್ಣ, ಎಇಇ ರವಿ ಇತರರು ಇದ್ದರು.
Comments are closed.