ತುಮಕೂರು: ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಪೊಕ್ಸೊ ಕಾಯ್ದೆ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಸಲುವಾಗಿ ನಾಮಫಲಕಗಳನ್ನು ಅಳವಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ತುಮಕೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಮಿಷನ್ ವಾತ್ಸಲ್ಯ ಯೋಜನೆಯಡಿ ಜಿಲ್ಲಾ ಮಟ್ಟದ ಮಕ್ಕಳ ಕಲ್ಯಾಣ ಹಾಗೂ ರಕ್ಷಣಾ ಸಮಿತಿಯ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಉಪಕಾರ ಯೋಜನೆಯಡಿ ಮೂರು ಮಕ್ಕಳು ನೋಂದಾಯಿತರಾಗಿದ್ದಾರೆ. ಈ ಮಕ್ಕಳು ಪಾಲನಾ ಸಂಸ್ಥೆಗಳಿಂದ ಬಿಡುಗಡೆಯಾದ 18 ವರ್ಷ ವಯಸ್ಸನ್ನು ಮೀರಿದ ಅರ್ಹ ಮಕ್ಕಳಿಗೆ ಆರ್ಥಿಕವಾಗಿ ಸ್ವಾಲಂಬಿಗಳಾಗುವವರೆಗೆ ಅಥವಾ ಗರಿಷ್ಠ 3 ವರ್ಷಗಳ ಅವಧಿಯವರೆಗೆ ಪ್ರತಿ ಫಲಾನುಭವಿಗೆ ತಿಂಗಳಿಗೆ 5 ಸಾವಿರ ರೂ. ನೀಡಲಾಗುವುದು ಎಂದರಲ್ಲದೆ ಅರ್ಹ ಮಕ್ಕಳು ಈ ಯೋಜನೆಯಿಂದ ವಂಚಿತರಾಗದಂತೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಹೆಣ್ಣು ಮಕ್ಕಳ ಅನುಪಾಲನಾ ಗೃಹ ಯೋಜನೆಯಡಿ 6 ಮಕ್ಕಳು ದಾಖಲಾಗಿದ್ದಾರೆ, ಇದರ ಪೈಕಿ 5 ಮಕ್ಕಳು ಕುಣಿಗಲ್ ತಾಲ್ಲೂಕಿನ ವಾಣಿಗೆರೆ ಸಂತ ಗ್ರೆಗೋರಿಯಸ್ ದಯಾಭವನದ ಅನುಪಾಲನಾ ಗೃಹದಲ್ಲಿದ್ದಾರೆ. 3 ಜನರಿಗೆ ಹೊಲಿಗೆ ತರಬೇತಿಗೆ ಹಾಗೂ ಇಬ್ಬರನ್ನೂ ಕಾಲೇಜಿಗೆ ದಾಖಲು ಮಾಡಲಾಗಿರುತ್ತದೆ, ಒಬ್ಬರು ಕೋಲಾರ ಅನುಪಾಲನಾ ಗೃಹದಲ್ಲಿದ್ದಾರೆ. ಈ ಹೆಣ್ಣು ಮಕ್ಕಳಿಗೆ 21 ವರ್ಷ ತುಂಬುವವರೆಗೆ ಪುನರ್ವಸತಿ ಒದಗಿಸಲು, ವಿದ್ಯಾಭ್ಯಾಸದ ಹಾಗೂ ವೃತ್ತಿಪರ ಕೌಶಲ್ಯ ತರಬೇತಿ ನೀಡಲು ಸ್ವಯಮ ಸೇವಾ ಸಂಸ್ಥೆಯ ನೆರವಿನೊಂದಿಗೆ ಈ ಯೋಜನೆಯನ್ನು 2022-23ನೇ ಸಾಲಿನಲ್ಲಿ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಬಾಲಸೇವಾ ಯೋಜನೆಯಡಿ ಜಿಲ್ಲೆಯ 10 ಫಲಾನುಭವಿಗಳಿಗೆ ಮಾಸಿಕ 3500 ರೂ. ಧನ ಸಹಾಯ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಏಪ್ರಿಲ್ 2023ರಿಂದ ಜುಲೈ ಮಾಹೆಯ ಅಂತ್ಯಕ್ಕೆ ಹೊಸದಾಗಿ ಪೊಕ್ಸೊ ಕಾಯ್ದೆಯಡಿ 47 ಪ್ರಕರಣ ದಾಖಲಾಗಿವೆ. ಹೆಚ್ಚಾಗಿ ಕೊರಟಗೆರೆ, ಮಧುಗಿರಿ, ಗುಬ್ಬಿ ಕುಣಿಗಲ್ ತಾಲ್ಲೂಕುಗಳಲ್ಲಿ ಪ್ರಕರಣ ದಾಖಲಾಗುತ್ತಿವೆ. ಹಿಂದಿನ ಸಾಲಿನ ಬಾಕಿ ಪ್ರಕರಣಗಳು 127 ಸೇರಿದಂತೆ ಒಟ್ಟು 174 ಪ್ರಕರಣ ದಾಖಲಾಗಿವೆ ಎಂದು ತಿಳಿಸಿದರು.
ವಾತ್ಸಲ್ಯ ಸದನ ಯೋಜನೆಯಡಿ ಬಾಲಕ ಮತ್ತು ಬಾಲಕಿಯರ ಬಾಲಮಂದಿರ, ವೀಕ್ಷಣಾಲಯ, ಮಕ್ಕಳ ಕಲ್ಯಾಣ ಸಮಿತಿ ಸೌಲಭ್ಯಗಳು ಒಂದೇ ಸೂರಿನಡಿ ಕಲ್ಪಿಸುವ ಉದ್ದೇಶದಿಂದ ನಗರದಲ್ಲಿ ಕಟ್ಟಡ ನಿರ್ಮಿಸಲು ಭೂಮಿ ನೀಡುವ ಕುರಿತು ಒಂದು ಪ್ರಸ್ತಾವನೆಯನ್ನು ತುಮಕೂರು ತಹಶಿಲ್ದಾರ್ ಅವರಿಗೆ ಸಲ್ಲಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಭಿಕ್ಷಾಟನೆ ಮಾಡುವವರ ಸಂಖ್ಯೆ ಹೆಚ್ಚಾಗಿರುವ ಕಾರಣ ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಅವರನ್ನು ನಿರಾಶ್ರಿತರ ಕೇಂದ್ರಗಳಿಗೆ ಬಿಡುವಂತೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಪ್ರತಿ ಶಾಲೆಗಳಲ್ಲಿ ಮೀನಾ ತಂಡವನ್ನು ರಚನೆ ಮಾಡಲಾಗಿದೆ, ಇದರ ಮೂಲಕ ವಿದ್ಯಾರ್ಥಿಗಳಿಗೆ ಪೋಕ್ಸೊ ಹಾಗೂ ಬಾಲ್ಯವಿವಾಹ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ಸಭೆಗೆ ಡಿಡಿಪಿಐ ಮಾಹಿತಿ ನೀಡಿದರು. ಮುಂದಿನ ಸಭೆಗೆ ಬರುವಾಗ ಯಾವ ಶಾಲೆಯಲ್ಲಿ ಎಸ್ಟು ಕಾರ್ಯಕ್ರಮ ಮಾಡಲಾಗಿದೆ ಎಂಬುವುದರ ಮಾಹಿತಿಯನ್ನು ಸಿದ್ದಪಡಿಸಿ ತರಬೇಕು ಎಂದು ಸೂಚಿಸಿದರು.
ಜಿಲ್ಲೆಯ ಎಲ್ಲಾ ವಸತಿ ನಿಲಯಗಳ ಸಿಬ್ಬಂದಿ, ವಾರ್ಡನ್, ವಿದ್ಯಾರ್ಥಿಗಳಿಗೆ ಪೊಕ್ಸೊ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಎಲ್ಲಾ ಶಾಲೆಗಳ ಶಿಕ್ಷಕರಿಗೆ ತಾಲ್ಲೂಕು ಮಟ್ಟದಲ್ಲಿ ಪೊಕ್ಸೊ ಕಾಯ್ದೆ ಕುರಿತು ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಬೇಕು ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.
ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ ಮಾತನಾಡಿ, ಜಿಲ್ಲೆಯಲ್ಲಿ ಪೋಕ್ಸೊ ಪ್ರಕರಣಗಳು ಮತ್ತು ಬಾಲ್ಯವಿವಾಹ ಪ್ರಕರಣ ಹೆಚ್ಚಾಗುತ್ತಿವೆ ಎಂದರು.
ಪ್ರಸ್ತುತ ದಿನಗಳಲ್ಲಿ ಶಾಲೆ ಹಾಗೂ ಕಾಲೇಜು ಹಂತದಲ್ಲಿ ಈ ರೀತಿಯ ಪ್ರಕರಣ ನಡೆಯುತ್ತಿವೆ. ಪೋಕ್ಸೊ ಕುರಿತು ಮಕ್ಕಳಿಗೆ ಅರಿವು ಮೂಡಿಸುವುದರ ಜೊತೆಗೆ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆಯೂ ತಿಳಿಸಬೇಕು ಎಂದರು.
ಕೆಲವು ಶಿಕ್ಷಕರಿಗೆ ಪೋಕ್ಸೊ ಕಾಯ್ದೆ ಕುರಿತು ಸರಿಯಾದ ಮಾಹಿತಿ ಗೊತ್ತಿದಿರುವುದು ವಿಪರ್ಯಾಸ, ಆದ್ದರಿಂದ ಅವರಿಗೆ ಮೊದಲು ಅರಿವು ಮೂಡಿಸಬೇಕು ಎಂದರು.
ಸಭೆಯಲ್ಲಿ ಡಿವೈಎಸ್ಪಿ ಶ್ರೀನಿವಾಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಶ್ರೀಧರ್, ಡಿಹೆಚ್ಓ ಡಾ.ಮಂಜುನಾಥ್, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಅನುಷಾ, ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಗಂಗಪ್ಪ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
Comments are closed.